ಗೋಕರ್ಣ: ಜೂನ್ 12 ರಂದು ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರಿಗೆ ಗೋಕರ್ಣ ಕ್ಷೇತ್ರದ ಪುಣ್ಯಾಶ್ರಮದ ವತಿಯಿಂದ (Gokarna Punyashrama) ಶ್ರೀ ದುರ್ಗಾಲಯದಲ್ಲಿ ಪಿತೃಪಕ್ಷ ನಿಮಿತ್ತ ಸದ್ಗತಿ ಕಾರ್ಯಕ್ರಮವನ್ನು ಗುರುವಾರ ಮತ್ತು ಶುಕ್ರವಾರ ನೆರವೇರಿಸಲಾಯಿತು. ವೇ. ರಾಜಗೋಪಾಲ ಅಡಿ ಗುರೂಜಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ 33 ವೈದಿಕರ ಸಹಯೋಗದಲ್ಲಿ ವಿವಿಧ ಕರ್ಮಾಂಗಗಳನ್ನು ನಡೆಸಲಾಯಿತು.
ದುರಂತದಲ್ಲಿ ಸಾವನ್ನಪ್ಪಿದ 241 ಪ್ರಯಾಣಿಕರು ಮತ್ತು 12 ಜನ ಸಿಬ್ಬಂದಿ ಹೆಸರಿನಲ್ಲಿ ಸಂಕಲ್ಪ ಕೈಗೊಂಡು, ಅವರ ಪರವಾಗಿ ವೇ. ಗಿರೀಶ ಭಟ್ ಕರ್ತೃವಾಗಿ ಎಲ್ಲಾ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು. ಮೃತರ ಉತ್ತರೋತ್ತರ ಸದ್ಗತಿಗಾಗಿ ಪಿಂಡ ಪ್ರಧಾನ ಮೂಲಕ ನಾರಾಯಣ ಬಲಿ, ನಾರಾಯಣ ಬಲಿಹೋಮ, ದ್ವಾದಶ ಮೂರ್ತಿ ಆರಾಧನೆ ಮತ್ತು ಪಂಚಸೂಕ್ತ ಪಾರಾಯಣ ನೆರವೇರಿದವು.

ದುರ್ಘಟನೆಯ ಶಮನಕ್ಕಾಗಿ ಪ್ರಾಯಶ್ಚಿತ ತಿಲಹೋಮವನ್ನು ಕೈಗೊಂಡು ದಶದಾನ ಮತ್ತು ಬ್ರಾಹ್ಮಣ ಆರಾಧನೆ ನಡೆಯಿತು. 2 ದಿನ ನಡೆದ ಈ ಕಾರ್ಯಕ್ರಮದ ಕೊನೆಯ ದಿನವಾದ ಶುಕ್ರವಾರ ಬ್ರಾಹ್ಮಣ ಭೋಜನ ನಡೆಯಿತು. ಈ ವೇಳೆ ಸಮಸ್ತ ವೈದಿಕರ ವತಿಯಿಂದ ನಡೆದ ಮಂತ್ರಾಕ್ಷತೆ ಆಶೀರ್ವಚನದಲ್ಲಿ ವೇ. ರಾಜಗೋಪಾಲ ಅಡಿ ಗುರೂಜಿ ಪ್ರಾರ್ಥನೆ ಕೈಗೊಂಡು ದೇಶದಲ್ಲಿ ಇನ್ನೆಂದಿಗೂ ಇಂತಹ ದುರ್ಘಟನೆ ನಡೆಯದಿರಲಿ, ಈ ಆಕಸ್ಮಿಕದಲ್ಲಿ ಸಾವನ್ನಪ್ಪಿದ ಎಲ್ಲರ ಸದ್ಗತಿಗಾಗಿ ಮತ್ತು ಶಾಶ್ವತ ವಿಷ್ಣು ಸಾಯುಜ್ಯ ದೊರೆಯುವಂತೆ ಪ್ರಾರ್ಥಿಸಿಕೊಂಡರು.
ಇದರ ಜೊತೆಗೆ 2 ದಿನ ನಡೆದ ಕರ್ಮಾಂಗಗಳಿಂದ, ಮೃತರಾದವರ ಮರಣಕಾಲದಲ್ಲಿ ಉಂಟಾಗಿರಬಹುದಾದ ಎಲ್ಲಾ ದೋಷಗಳು ಪರಿಹಾರಗೊಂಡು, ಅವರಿಗೆ ಮುಕ್ತಿಪದ ಲಭಿಸುವಂತಾಗಲಿ ಎಂದು ವೈದಿಕರನ್ನು ಮತ್ತು ಭಗವಾನ ವಿಷ್ಣುವನ್ನು ಪ್ರಾರ್ಥಿಸಿಕೊಂಡರು.

ಈ ಹಿಂದೆ ಕೂಡ ಪುಣ್ಯಾಶ್ರಮದ ವತಿಯಿಂದ ವೇ. ರಾಜಗೋಪಾಲ ಅಡಿ ಸವರು ಪಹಲ್ಗಾಮ್ ಭಯೋತ್ಪಾದಕರ ದಾಳಿಯಲ್ಲಿ ಮೃತರಾದವರಿಗೆ ಸಹ ಇದೆ ರೀತಿಯಲ್ಲಿ ಕ್ಷೇತ್ರದ ವತಿಯಿಂದ ಕರ್ಮಾಂಗಗಳನ್ನು ಆಯೋಜಿಸಿದ್ದರು. ಕರ್ಮಾಂಗಗಳನ್ನು ವೇ. ರಾಮ ಶಾಸ್ತ್ರೀ, ವೇ ಗುರುದತ್ತ ಹಿರೇ ಮತ್ತು ವೈದಿಕ ಪುರೋಹಿತರು ಶಾಸ್ತ್ರೋಕ್ತವಾಗಿ ನಡೆಸಿಕೊಟ್ಟರು. ಮೃತರ ಸ್ಮರಣಾರ್ಥ ಕೈಗೊಳ್ಳಲಾದ ಕಾರ್ಯಕ್ರಮದ ತರುವಾಯ ಇಲ್ಲಿನ ಸಮುದ್ರ ತೀರದಲ್ಲಿ ಪಿಂಡ ವಿಸರ್ಜನೆ ನೆರವೇರಿಸಲಾಯಿತು.