ಬಳ್ಳಾರಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ದುರ್ಬಳಕೆ (Valmiki Scam) ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ED) ಬಳಿಕ ಇದೀಗ ಸಿಬಿಐ ಅಖಾಡಕ್ಕೆ ಇಳಿದಿದೆ. ಮಾಜಿ ಸಚಿವ ಬಿ. ನಾಗೇಂದ್ರ (B Nagendra) ಅವರಿಗೆ ಸೇರಿದ ಸ್ಥಳಗಳು ಹಾಗೂ ಇತರೆ 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶದಲ್ಲೂ ಈ ಕಾರ್ಯಾಚರಣೆ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿಯಲ್ಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಉದ್ಯಮಿ ‘ಎಗ್’ ಕುಮಾರಸ್ವಾಮಿ ಹಾಗೂ ಆತನ ಪುತ್ರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದರಾಜು ಮನೆಯ ಮೇಲೆ ಸೋಮವಾರ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದ್ದಾರೆ. ಗೋವಿಂದರಾಜು ಅವರು ನಾಗೇಂದ್ರ ಅವರ ಆಪ್ತರಾಗಿದ್ದಾರೆ ಎಂಬುದು ಗಮನಾರ್ಹ.
ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್-ಗೋವಿಂದರಾಜು ದೊಡ್ಡ ಪ್ರಮಾಣದ ಹಣ ವಹಿವಾಟು ಮಾಡಿರುವ ಹಿನ್ನೆಲೆಯಲ್ಲಿ ಸಿಬಿಐ ತಂಡ ಬಳ್ಳಾರಿಗೆ ಆಗಮಿಸಿ, ಇಲ್ಲಿನ ಗಾಂಧಿನಗರದ 2ನೇ ತಿರುವಿನಲ್ಲಿರುವ ಗೋವಿಂದರಾಜು ಮನೆಗೆ ತೆರಳಿ ಅವರ ವಹಿವಾಟು ಪರಿಶೀಲಿಸಿದೆ ಎಂದು ತಿಳಿದು ಬಂದಿದೆ. ಆದರೆ ನಾಗೇಂದ್ರ ಅವರಿಗೆ ಸೇರಿದ ಯಾವೆಲ್ಲಾ ಸ್ಥಳಗಳಲ್ಲಿ ದಾಳಿ ನಡೆದಿದೆ, ಏನೇನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಸಿಬಿಐ ಬಹಿರಂಗಪಡಿಸಿಲ್ಲ.
ವಾಲ್ಮೀಕಿ ನಿಗಮದ ಲೆಕ್ಕಪತ್ರ ವಿಭಾಗದ ಚಂದ್ರಶೇಖರ್ ಪಿ. ಎಂಬ ಅಧಿಕಾರಿ ಕಳೆದ ವರ್ಷ ಮೇ 26ರಂದು ಆತ್ಮಹತ್ಯೆ ಮಾಡಿಕೊಳ್ಳುವುದರೊಂದಿಗೆ ಈ ಹಗರಣ ಸ್ಫೋಟವಾಗಿತ್ತು. ಈ ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ಕೂಡ ರಚನೆ ಮಾಡಿತ್ತು. ಈ ನಡುವೆ ಅಕ್ರಮ ಹಣ ವರ್ಗಾವಣೆ ನಡೆದಿರುವ ಕಾರಣ ಇ.ಡಿ. ಕೂಡ ಪ್ರವೇಶಿಸಿ ತನಿಖೆ ತೀವ್ರಗೊಳಿಸಿತ್ತು. ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ಬಂಧನವಾಗಿತ್ತು. ನಾಗೇಂದ್ರ ಈಗ ಜಾಮೀನಿನ ಮೇಲೆ ಇದ್ದಾರೆ. ಈಗ ಸಿಬಿಐ ಕೂಡ ತನಿಖೆ ತೀವ್ರಗೊಳಿಸಿರುವುದರಿಂದ ಅವರಿಗೆ ಸಂಕಷ್ಟ ಎದುರಾದಂತಾಗಿದೆ.
ಪ್ರಕರಣದಲ್ಲಿ ಸಿಬಿಐ ಎಂಟ್ರಿ:
ರಾಜ್ಯದ ಪರಿಶಿಷ್ಟ ಪಂಗಡ ಸಮುದಾಯದಲ್ಲಿನ ಸಾಮಾಜಿಕ- ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಉದ್ದೇಶದೊಂದಿಗೆ 2006ರಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡಲಾಗಿತ್ತು. ನಿಗಮ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದು, ಅದರಲ್ಲಿದ್ದ ಹಣ ದುರ್ಬಳಕೆಯಾಗಿತ್ತು. 2024ರ ಫೆ.21ರಿಂದ 2024ರ ಮೇ 6ರ ನಡುವೆ 84 ಕೋಟಿ ರು.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿತ್ತು ಹಾಗೂ ಖಾತೆಯಿಂದ ಹಿಂಪಡೆಯಲಾಗಿತ್ತು. ಈ ಹಣವನ್ನು ಬಳ್ಳಾರಿಯ ಲೋಕಸಭೆ ಚುನಾವಣೆಗೆ ಬಳಸಲಾಗಿತ್ತು ಎಂದು ಇ.ಡಿ. ಹೇಳಿತ್ತು.
ತನ್ನ ಬ್ಯಾಂಕಿನಲ್ಲಿ ನಡೆದಿರುವ ಹಗರಣ ಕಾರಣ ಯೂನಿಯನ್ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರು ಸಿಬಿಐಗೆ ದೂರು ನೀಡಿದ್ದರು. ಬ್ಯಾಂಕ್ ವಂಚನೆ ಎಂದು ತನಿಖೆ ಆರಂಭಿಸಿದ ಸಿಬಿಐ, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಈ ನಡುವೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಅರ್ಜಿಯ ಮೇರೆಗೆ ಪೂರ್ಣ ಪ್ರಮಾಣದಲ್ಲಿ ತನಿಖೆ ನಡೆಸಲು ಕರ್ನಾಟಕ ಹೈಕೋರ್ಟ್‌ನಿಂದ ಸಿಬಿಐಗೆ ಜುಲೈನಲ್ಲಿ ಅನುಮತಿ ಕೂಡ ಸಿಕ್ಕಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಹಾಗೂ ಸಾಕ್ಷ್ಯಗಳನ್ನು ಸಿಬಿಐಗೆ ನೀಡುವಂತೆ ಹೈಕೋರ್ಟ್ ಕರ್ನಾಟಕ ಸರ್ಕಾರದ ಎಸ್‌ಐಟಿಗೆ ಸೂಚನೆ ನೀಡಿತ್ತು.
ಇದಾದ ತರುವಾಯ ಹೈಕೋರ್ಟ್ ಈ ಪ್ರಕರಣದ ತನಿಖೆಯ ಮೇಲುಸ್ತುವಾರಿಯನ್ನು ವಹಿಸಿದೆ. ಈಗಾಗಲೇ ನಾಲ್ಕು ಸ್ಥಿತಿಗತಿ ವರದಿಗಳನ್ನು ಹೈಕೋರ್ಟ್‌ಗೆ ಸಿಬಿಐ ಸಲ್ಲಿಕೆ ಮಾಡಿದೆ.
ಹಣ ವರ್ಗಾವಣೆಗೆ ದಾಖಲೆ ಪತ್ತೆ:
ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ಜರ್ಮನಿ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ)ನಲ್ಲಿನ ಸರ್ಕಾರಿ ಹಣ ಬೇರೆಡೆ ವರ್ಗವಾಗಿರುವ ನಿದರ್ಶನಗಳನ್ನು ಸಿಬಿಐ ಪತ್ತೆ ಮಾಡಿದೆ. ಆ ಸಂದರ್ಭದಲ್ಲಿ ನಾಗೇಂದ್ರ ಅವರು ಪರಿಶಿಷ್ಟ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು ಎಂಬುದು ಗಮನಾರ್ಹ.
ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯು ಬೆಂಗಳೂರಿನ ಸಿದ್ದಯ್ಯ ರಸ್ತೆಯ ಬ್ಯಾಂಕ್ ಆಫ್ ಬರೋಡಾ ಖಾತೆಯಲ್ಲಿ ಹೊಂದಿರುವ 2.17 ಕೋಟಿ ರು. ಹಣ ಎಸ್‌ಕೆಆರ್ ಇನ್‌ಫ್ರಾಸ್ಟ್ರಕ್ಚರ್ ಹಾಗೂ ಗೋಲ್ಡನ್ ಎಸ್ಟಾಬ್ಲಿಷ್‌ಮೆಂಟ್ ಎಂಬ ಮಧ್ಯಂತರ ಕಂಪನಿಗಳ ಮೂಲಕ ಧನಲಕ್ಷ್ಮಿ ಎಂಟರ್‌ಪ್ರೈಸಸ್ ಸಂಸ್ಥೆಯ ಖಾತೆಗೆ ವರ್ಗವಾಗಿದೆ. ಆ ಸಂಸ್ಥೆ ಮಾಜಿ ಸಚಿವ ನಾಗೇಂದ್ರ ಅವರ ಪರಮಾಪ್ತರಾಗಿರುವ ನೆಕ್ಕಂಟಿ ನಾಗರಾಜ್ ಅವರಿಗೆ ಸೇರಿದ್ದಾಗಿದೆ ಎಂಬುದನ್ನು ಸಿಬಿಐ ಪತ್ತೆ ಮಾಡಿದೆ.
ಸುಮಾರು 1.20 ಕೋಟಿ ರು. ಹಣವನ್ನು ನಾಗೇಂದ್ರ ಅವರ ಸೋದರಿ, ಭಾವ ಹಾಗೂ ಆಪ್ತ ಸಹಾಯಕನ ಖಾತೆಗೂ ವರ್ಗಾಯಿಸಲಾಗಿದೆ. ಜತೆಗೆ ಕೆಜಿಟಿಟಿಐನಿಂದ 64 ಲಕ್ಷ ರು. ಹಣವನ್ನು ನೆಕ್ಕಂಟಿ ನಾಗರಾಜ್‌ನ ಸೋದರ ಎನ್.ರವಿಕುಮಾರ್ ಹಾಗೂ ನೆಕ್ಕಂಟಿ ಸಂಬಂಧಿ ಎನ್. ಯಶವಂತ್ ಚೌಧರಿ ಅವರ ಖಾತೆಗೆ ಹಲವಾರು ಕಂಪನಿಗಳ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬುದನ್ನೂ ಸಿಬಿಐ ಪತ್ತೆ ಮಾಡಿದೆ.
ನಾಗೇಂದ್ರ ಸೋದರಿ, ಭಾವನ ಖಾತೆ ಗೂ ವಾಲ್ಮೀಕಿ ನಿಗಮದ ಹಣ: ಸಿಬಿಐ ಪತ್ತೆವಾಲ್ಮೀಕಿ ನಿಗಮದಿಂದ ಹೊರಹೋಗಿರುವ ಹಣದಲ್ಲಿ ಒಂದಷ್ಟು ಮಾಜಿ ಸಚಿವ ನಾಗೇಂದ್ರ ಅವರ ಸೋದರಿ ಹಾಗೂ ಭಾವನ ಖಾತೆಗೂ ವರ್ಗಾವಣೆಯಾಗಿದೆ. ಈ ಕುರಿತು ದಾಖಲೆಗಳನ್ನು ಸಂಗ್ರಹಿಸಿರುವುದಾಗಿ ಸಿಬಿಐ ತಿಳಿಸಿದೆ. ನಾಗೇಂದ್ರ ಅವರ ಸೋದರಿ, ಭಾವ ಹಾಗೂ ಆಪ್ತ ಸಹಾಯಕನ ಖಾತೆಗಳಿಗೆ 1.20 ಕೋಟಿ ರು.ನಷ್ಟು ಹಣವನ್ನು ವರ್ಗ ಮಾಡಲಾಗಿದೆ ಎಂದು ಸಿಬಿಐ ಹೇಳಿದೆ.
ಇದನ್ನೂ ಓದಿ: ವಾಲ್ಮೀಕಿ ನಿಗಮದಂತೆ ಜಿಲ್ಲೆಯ ಭೋವಿ ನಿಗಮದಲ್ಲೂ ಹಗರಣ: ಸಂಸದ ಡಾ.ಕೆ.ಸುಧಾಕರ್