ಟಿಜೆಎಸ್ ಜಾರ್ಜ್ (TJS George) ಅವರು ಮುಂದೆ ಬಂದು ನಿಂತರೆ ಕಣ್ಣುಜ್ಜಿಕೊಂಡು ನೋಡಬೇಕಾಗುತ್ತಿತ್ತು. ಎತ್ತರದ ನಿಲುವು, ಹೊಳೆಯುವ ಮುಖ, ಚೂಪುಗಣ್ಣು ಮತ್ತು ಮುಖಕ್ಕೆ ಸೊಗಸು ನೀಡಿದ ಫ್ರೆಂಚ್ ದಾಡಿ. ಅವರು ಪತ್ರಿಕೋದ್ಯಮದಲ್ಲಿ ಸಾಧಿಸಿದ ವರ್ಚಸ್ಸೂ ಹಾಗೇ ಇತ್ತು. ಮತ್ತದು ಸುಮ್ಮನೇ ಆಗಿರಲಿಲ್ಲ. ದಶಕಗಳ ನಿರ್ಭೀತ ನ್ಯಾಯನಿಷ್ಠುರ ಜರ್ನಲಿಸಂ, ಕಾಯಕನಿಷ್ಠೆ ಮತ್ತು ಅಂಕಣ ಬರಹಗಳ ಸೊಗಸು ಅವರನ್ನು ಆ ಸ್ಥಾನಕ್ಕೆ ಒಯ್ದಿತ್ತು.
ʼಕನ್ನಡಪ್ರಭʼ ಕಚೇರಿಯ ಜೊತೆಗೇ ಇದ್ದ ಇಂಡಿಯನ್ ಎಕ್ಸ್‌ಪ್ರೆಸ್ ಕಚೇರಿಯ ಆವರಣದಲ್ಲಿ ಅವರನ್ನು ನೋಡುವುದಕ್ಕೂ ತುಂಬ ಮೊದಲೇ, ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿದ್ದ ಅವರ ʼನೇರ ಮಾತುʼ ಅಂಕಣದ ಅಭಿಮಾನಿ ನಾನು. ಪ್ರತಿ ಶನಿವಾರ ಪ್ರಕಟವಾಗುತ್ತಿದ್ದ ಅದನ್ನು ತಪ್ಪದೆ ಓದುತ್ತಿದ್ದೆ. ಸರಳ, ಸಣ್ಣ ವಾಕ್ಯಗಳು. ನಿಖರವಾದ, ಚುರುಕು ಮುಟ್ಟಿಸುವ ಅಭಿಪ್ರಾಯಗಳು. ಆದರೆ ಅದನ್ನು ವಕ್ರವಾದ ಧಾಟಿಯಲ್ಲಿ ತಲುಪಿಸುವ ಶೈಲಿ. ನಾನು ಕನ್ನಡಪ್ರಭಕ್ಕೆ ಸೇರಿಕೊಂಡ ಬಳಿಕ, ಪೇಜಿಗೆ ಹೋಗುವ ಮೊದಲೇ ಅದನ್ನು ಓದುವ ಭಾಗ್ಯವೂ ಸಿಕ್ಕಿತು. ಆಸೆಪಟ್ಟು ಕೆಲವು ಸಲ ಇಂಗ್ಲಿಷ್ ಕಾಪಿಯನ್ನು ಕೇಳಿ ಪಡೆದು ಅನುವಾದ ಮಾಡಿ ಕೊಟ್ಟದ್ದೂ ಇದೆ. ಮೊದಲೇ ಹೇಳಿದಂತೆ ಆ ವಾಕ್ಯಗಳ ಅನುವಾದ ಕ್ಲಿಷ್ಟವಿರಲಿಲ್ಲ, ಆದರೆ ಶೈಲಿ ಮಾತ್ರ ಹಾವು ಹರಿದಂತೆ. ಅದರ ಸೊಗಸೇ ಬೇರೆ.
ಜಾರ್ಜ್ ಅವರೇ ಒಂದೆಡೆ ಹೇಳಿಕೊಂಡಂತೆ ಈ ಅಂಕಣ ಶುರುವಾದದ್ದು 1997ರಲ್ಲಿ. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ʼಪಾಯಿಂಟ್ ಆಫ್ ವ್ಯೂʼ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದ್ದ ಈ ಬರಹಗಳ ಅನುವಾದ ʼನೇರ ಮಾತುʼ ಎಂದು ಪ್ರಕಟವಾಗುತ್ತಿತ್ತು. 25 ವರ್ಷಗಳ ಕಾಲ ಬರೆದ ಅಂಕಣಗಳ ಸಂಖ್ಯೆ ಕನಿಷ್ಠ 1300 ಆದರೂ ಆಗಿರಬಹುದು. ಅವರ ಮಾತಿನ ರೀತಿ, ಅವರ ಅಭಿರುಚಿಗಳು, ಅವರ ದಿರಿಸಿನ ಸೊಗಸು ಇದನ್ನೆಲ್ಲ ಹಿರಿಯ ಪತ್ರಕರ್ತರಿಂದ ಕೇಳಿಯಷ್ಟೇ ಗೊತ್ತು. ಅವರು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ಕಚೇರಿಯ ಆವರಣದ ದೊಡ್ಡ ಆಲದ ಮರದ ಕೆಳಗೆ ಸಿಗರೇಟು ಸೇದುತ್ತಾ ಕೊಲೀಗುಗಳ ಜತೆಗೆ ಹರಟೆ ಹೊಡೆಯುತ್ತಿದ್ದುದನ್ನು ಕಣ್ಣುಬಾಯಿ ಬಿಟ್ಟು ನೋಡುತ್ತಿದ್ದೆ , ಹತ್ತಿರ ಹೋಗಿ ಮಾತಾಡಿಸುವ ಧೈರ್ಯವಾಗಲೇ ಇಲ್ಲ.
ಜಾರ್ಜ್ ಹಲವಾರು ಕುತೂಹಲಕಾರಿ ಪುಸ್ತಕಗಳನ್ನು ಬರೆದಿದ್ದಾರೆ. ಅವರ ʼಆಸ್ಕ್ಯೂ: ಎ ಶಾರ್ಟ್ ಬಯಾಗ್ರಫಿ ಆಫ್ ಬ್ಯಾಂಗಲೋರ್ʼ ಇದು ಬೆಂಗಳೂರನ್ನು ಸಾಕಷ್ಟು ಒಳನೋಟಗಳು ಹಾಗೂ ವಿನೋದಮಯವಾದ ಬರವಣಿಗೆಯಿಂದ ಚಿತ್ರಿಸುತ್ತದೆ. ಈ ಕೃತಿಯನ್ನು ಅವರು ಕನ್ನಡಪ್ರಭದ ಇನ್ನೊಬ್ಬ ಮಹನೀಯ ಸಂಪಾದಕ ವೈಎನ್‌ಕೆ ಅರ್ಪಿಸಿದ್ದಾರೆ. ವೈಎನ್ಕೆಯನ್ನು ಅವರು ʼconnoisseur maximus' ಎಂದು ಕರೆದಿದ್ದಾರೆ. ಹಾಗೆಂದರೆ ʼಶ್ರೇಷ್ಠ ಅಭಿರುಚಿಗಳನ್ನು ಹೊಂದಿರುವವನುʼ ಎಂದರ್ಥ. ಜಾರ್ಜ್ ಕೂಡ ಅದೇ ಆಗಿದ್ದರು. ಇನ್ನು ಕರ್ನಾಟಕ ಸಂಗೀತದ ಶ್ರೇಷ್ಠ ಗಾಯಕಿ ಎಂಎಸ್ ಸುಬ್ಬುಲಕ್ಷ್ಮಿಯವರ ಬಗ್ಗೆ ಅವರು ಬರೆದ ಜೀವನಚರಿತ್ರೆ, ಎಂಎಸ್ ಬಗ್ಗೆ ಅವರಿಗಿದ್ದ ಗಾಢವಾದ ಪ್ರೀತಿಯನ್ನೂ ಜ್ಞಾನವನ್ನೂ ತೋರಿಸುತ್ತದೆ. ಅದೊಂದು ಉತ್ತಮ ಆಕರಗ್ರಂಥ. ಅವರ ಇನ್ನೊಂದು ಕೃತಿ ಶ್ರೇಷ್ಠ ಪತ್ರಕರ್ತ ಪೋತನ್ ಜೋಸೆಫ್ ಬಗ್ಗೆ ಬರೆದ ʼಲೆಸನ್ಸ್ ಇನ್ ಜರ್ನಲಿಸಂ: ದಿ ಸ್ಟೋರಿ ಆಫ್ ಪೋತನ್ ಜೋಸೆಫ್ʼ. ಭಾರತ ಕಂಡ ಲವಲವಿಕೆಯ ಪತ್ರಕರ್ತನೊಬ್ಬನ ಜೀವನದ ಪಯಣದಂತೆಯೇ ಅದು ಆಗಿನ ಕಾಲದ ರಾಷ್ಟ್ರೀಯತಾವಾದಿ ಪತ್ರಿಕೋದ್ಯಮದ ಹೋರಾಟದ ಕತೆಯೂ ಆಗಿದೆ. ಜಾರ್ಜ್ ಅವರ ಮಗ ಜೀತ್ ತಾಯಿಲ್ ಕೂಡ ಒಳ್ಳೆಯ ಪತ್ರಕರ್ತ, ಕಾದಂಬರಿಕಾರ.
1950ರಲ್ಲಿ ಮುಂಬಯಿನ ಫ್ರೀ ಪ್ರೆಸ್ ಜರ್ನಲ್ ಮೂಲಕ ಪತ್ರಿಕೋದ್ಯಮಕ್ಕೆ ಕಾಲಿರಿಸಿದ ಅವರು, ಹಾಂಗ್‌ಕಾಂಗ್‌ನಲ್ಲಿ ಏಷ್ಯಾ ವೀಕ್ ಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದರು. ಇಂಟರ್‌ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್, ದಿ ಸರ್ಚ್‌ಲೈಟ್, ಫಾರ್ ಈಸ್ಟರ್ನ್ ಇಕಾನಾಮಿಕ್ ರಿವ್ಯೂ ಮುಂತಾದ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಅಂಕಣ ಬರೆಯುತ್ತ, ಅಲ್ಲಿನ ಸಂಪಾದಕೀಯ ಸಲಹಾ ಮಂಡಳಿಯಲ್ಲಿಯೂ ಇದ್ದವರು. 1965ರಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಕೆ.ಬಿ. ಸಹಾಯ್ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಜೈಲುವಾಸವನ್ನೂ ಅನುಭವಿಸಿದರಂತೆ. ಆ ಮೂಲಕ ಸ್ವತಂತ್ರ ಭಾರತದಲ್ಲಿ ಜೈಲುಶಿಕ್ಷೆಗೆ ಗುರಿಯಾದ ಮೊದಲ ಪತ್ರಿಕೆಯೊಂದರ ಸಂಪಾದಕ ಎನಿಸಿಕೊಂಡರಂತೆ.
ಜಾರ್ಜ್ ಬರಹಗಳು ಪಳಗಿದ ಪತ್ರಕರ್ತನೊಬ್ಬನ ರಸವತ್ತಾದ ವರದಿಗಳಂತೆ ಇರುತ್ತಿದ್ದುದರ ಜೊತೆಗೆ ಕೆಲವೊಮ್ಮೆ ನಿಷ್ಠುರ ಅಭಿಪ್ರಾಯಗಳಿಂದಲೂ ಕೂಡಿರುತ್ತಿದ್ದವು ಎನ್ನುವುದನ್ನು ನೆನೆಯಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯದ ವಿಷಯಗಳಲ್ಲಿ ಅವರದು ರಾಜಿ ಮಾಡಿಕೊಳ್ಳದ ನಿಲುವು. "ಇಲ್ಲಿ ಏಕಮುಖ ಸಂಸ್ಕೃತಿ ಎಂಬುದು ಇಲ್ಲ. ಎಂತಹ ಪ್ರಭಾವಿ ವ್ಯಕ್ತಿ ಕೂಡ ಇಲ್ಲಿ ಉತ್ತರ, ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ಭಾರತದ ಮೇಲೆ ಒಂದೇ ಸಂಸ್ಕೃತಿಯನ್ನು ಹೇರಲು ಸಾಧ್ಯವಿಲ್ಲ. ಭಾರತದ ಕುರಿತ ಈ ಸತ್ಯವನ್ನು ಅರ್ಥ ಮಾಡಿಕೊಳ್ಳಲು- ಅಂದರೆ ಸಾಂಸ್ಕೃತಿಕ ವೈವಿಧ್ಯವೇ ಭಾರತದ ಶಕ್ತಿ ಎಂಬುದನ್ನು ಅರಿಯಲು - ವಿಫಲರಾಗುವುದೇ ಕೆಲ ನಾಯಕರಿಗೆ ಇಡೀ ದೇಶದಲ್ಲಿ ಸ್ವೀಕಾರಾರ್ಹತೆ ಸಿಗದಂತೆ ಮಾಡುತ್ತದೆ. ಅವರು ಜನರನ್ನು ಬೇಕಾದರೆ ಹೆದರಿಸಬಹುದು. ಆದರೆ ಈ ದೇಶಕ್ಕೆ ತಮ್ಮಿಂದಲೇ ಒಳ್ಳೆಯದಾಗುತ್ತದೆ, ತಾವೇ ಈ ದೇಶದ ನಾಯಕರು ಎಂಬುದನ್ನು ಜನರು ನಂಬುವಂತೆ ಮಾಡಲು ಅವರಿಂದ ಸಾಧ್ಯವಿಲ್ಲ" ಎಂದು ಅವರು ಕೊನೆಯ ಅಂಕಣದಲ್ಲಿ ಬರೆದಿದ್ದರು.
ಇದನ್ನೂ ಓದಿ: TJS George: ಹೃದಯಾಘಾತದಿಂದ ಹಿರಿಯ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ನಿಧನ