ಬೆಂಗಳೂರು: ಬೆಂಗಳೂರಿನಲ್ಲಿ (Bengaluru rain news) ಭಾನುವಾರ ರಾತ್ರಿ ವರುಣ ರೌದ್ರಾವಾತಾರ ತಾಳಿದ್ದು, ಬಿರುಸಿನ ಗಾಳಿ ಜೊತೆಗೆ ಸುರಿದ ಭಾರಿ ಮಳೆಯಿಂದಾಗಿ ವೈಟ್ ಫೀಲ್ಡ್ನ (Whitefield) ಚನ್ನಸಂದ್ರದ ಸಮೀಪ ಕಟ್ಟಡದ ಗೋಡೆ ಕುಸಿದ (Wall collpse) ಪರಿಣಾಮ 35 ವರ್ಷದ ಶಶಿಕಲಾ ಎನ್ನುವ ಮಹಿಳೆ (Woman death) ಮೃತ ಪಟ್ಟಿದ್ದಾರೆ. ಕೂಲಿ ಮಾಡಿ ಬದುಕು ಸಾಗಿಸುತ್ತಿದ್ದ ಶಶಿಕಲಾ, ಜೋರಾದ ಮಳೆಯಿಂದಾಗಿ ಹಠಾತ್ ಗೋಡೆ ಕುಸಿತದಿಂದ ಸಾವನ್ನಪ್ಪಿದ್ದಾರೆ. ಸರಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಸಂಬಂಧಿಕರು ಆಗ್ರಹಿಸಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ವೈಟ್ ಫೀಲ್ಡ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಂಠೀರವ ಸ್ಟೇಡಿಯಂ ಜಲಾವೃತ
ಕಳೆದೊಂದು ವಾರದಿಂದ ಮಹಾನಗರ ಬೆಂಗಳೂರಿನಲ್ಲಿ ಪ್ರತಿ ದಿನ ಭಾರಿ ಮಳೆ ಸುರಿಯುತ್ತಿದೆ. ನಿನ್ನೆ ರಾತ್ರಿ ಗಾಳಿ ಸಮೇತ ಸುರಿದ ಭಾರಿ ಮಳೆಯ ಬಿಸಿ ಕಂಠೀರವ ಸ್ಟೇಡಿಯಂಗೂ ತಟ್ಟಿದೆ. ಧಾರಾಕಾರವಾಗಿ ಸುರಿದ ಮಳೆಯ ಪರಿಣಾಮ ನಾಲ್ಕು ಮುಖ್ಯ ದ್ವಾರಗಳು ಕೂಡ ನೀರಿನಿಂದ ಆವೃತವಾಗಿದ್ದು, ಬೆಳಗ್ಗೆ ವ್ಯಾಯಾಮದ ಅಭ್ಯಾಸ ಮಾಡಲು ಬಂದ ಕ್ರೀಡಾಪಟುಗಳು ಹಿಂತಿರುಗಿ ಹೋಗಿದ್ದಾರೆ.
ನಿನ್ನೆ ರಾತ್ರಿ ಸತತವಾಗಿ ಕೆಲವು ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ನೆಲಮಂಗಲ ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್ ರಸ್ತೆ ಜಲಾವೃತಗೊಂಡು ಹಲವು ವಾಹನ ಸವಾರರು ಅಲ್ಲಿ ಸಿಲುಕಿಕೊಂಡರು. ವಿಪರೀತ ಟ್ರಾಫಿಕ್ ಜಾಮ್ ಕೂಡ ಆಗಿದ್ದು, ಊರಿನಿಂದ ರಜೆ ಮುಗಿಸಿ ಮರಳುತ್ತಿದ್ದವರು ಗಂಟೆಗಟ್ಟಲೆ ಸಿಲುಕಿಕೊಂಡರು.
ಶಾಂತಿನಗರ ಬಸ್ ಡಿಪೋ ಜಲಾವೃತ
ರಾತ್ರಿ ಸುರಿದ ಮಳೆಯ ಪರಿಣಾಮ ಹಲವು ಅವಘಡಗಳು ಸಂಭವಿಸಿದ್ದು, ಶಾಂತಿನಗರ ಬಸ್ ಡಿಪೋ ಸಂಪೂರ್ಣ ನೀರಿನಿಂದ ಆವೃತವಾಯಿತು. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್‌ಗಳನ್ನು ಹೊರ ತೆಗೆಯುವುದು ತುಂಬಾ ಕಷ್ಟವಾಯಿತು.
132 ಮಿಲಿ ಮೀಟರ್ ಮಳೆ: ರಾಮಲಿಂಗಾರೆಡ್ಡಿ
ಬೆಂಗಳೂರಿನಲ್ಲಿ 132 ಮಿಲಿ ಮೀಟರ್‌ನಷ್ಟು ಮಳೆಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಂಗಳೂರಿನಲ್ಲಿ 132 ಮಿಲಿ ಮೀಟರ್ ಮಳೆಯಾಗಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಸ್ವಲ್ಪ ಮಟ್ಟಿಗೆ ರಾಜಕಾಲುವೆ ಸರಿ ಮಾಡಿದ್ದೆವು. ಆದರೆ ನಂತರ ಸರಕಾರ ಈ ಬಗ್ಗೆ ಏನೂ ಸರಿಮಾಡಿಲ್ಲ ಎಂದರು.
ಇದನ್ನೂ ಓದಿ: Karnataka Rain: ಈ ಮಳೆ ಟ್ರೇಲರ್ ಮಾತ್ರ, ಇನ್ನೂ 5 ದಿನ ಸುರಿಯಲಿದೆ ಸೈಕ್ಲೋನ್ ಮಳೆ!