ಬೆಂಗಳೂರು: ಧರ್ಮಸ್ಥಳದ ಕುರಿತು ಯೂಟ್ಯೂಬರ್ ಸಮೀರ್, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮತ್ತು ಅಪ್ರಾಮಾಣಿಕ ವಿಡಿಯೋಗಳನ್ನು ಪ್ರಸಾರ ಮಾಡುವ ಮೂಲಕ ಕೋಟ್ಯಂತರ ಹಿಂದೂ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಪರ ಹೋರಾಟಗಾರ ತೇಜಸ್ ಗೌಡ ಅವರು ಡಿಜಿ-ಐಜಿಪಿಗೆ ದೂರು ಸಲ್ಲಿಸಿದ್ದಾರೆ.
ಯೂಟ್ಯೂಬರ್ ಸಮೀರ್, ಧರ್ಮಸ್ಥಳದ ವಿರುದ್ಧ ಸುಳ್ಳು ಮಾಹಿತಿಯನ್ನು ಎಐ ವಿಡಿಯೋ ಮೂಲಕ ಹರಡಿ, ದ್ವೇಷವನ್ನು ಬಿತ್ತುವ ಮತ್ತು ಸಮಾಜದಲ್ಲಿ ಅಶಾಂತಿ ಮೂಡಿಸುವ ಕೆಲಸ ಮಾಡಿದ್ದಾನೆ. ಇದರಿಂದ ಕೇವಲ ಧಾರ್ಮಿಕ ಕೇಂದ್ರಕ್ಕೆ ಮಾತ್ರವಲ್ಲದೆ, ಅಲ್ಲಿನ ಲಕ್ಷಾಂತರ ಭಕ್ತರ ನಂಬಿಕೆಗೂ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ನಡೆಯುತ್ತಿರುವುದು ಹೆಚ್ಚಾಗಿದ್ದು, ಈ ರೀತಿಯ ಕೃತ್ಯಗಳನ್ನು ತಡೆಯಲು ಕಠಿಣ ಕ್ರಮಗಳು ಅಗತ್ಯವೆಂದು ಕೋರಿದ್ದಾರೆ.
ಈ ಸುದ್ದಿಯನ್ನೂ ಓದಿ | Sasikanth Senthil: ಧರ್ಮಸ್ಥಳ ಪ್ರಕರಣ; ರೆಡ್ಡಿ ಆರೋಪಕ್ಕೆ ಸಸಿಕಾಂತ್ ಸೆಂಥಿಲ್ ಫಸ್ಟ್ ರಿಯಾಕ್ಷನ್ ಏನು?
ಭಾರತೀಯ ನ್ಯಾಯ ಸಂಹಿತೆ 2023, ಸುಳ್ಳು ಮಾಹಿತಿ ನೀಡುವುದು - ಸೆಕ್ಷನ್ 192, ಧರ್ಮ ಹಾಗೂ ಭಾಷೆಗಳ ನಡುವೆ ದ್ವೇಷ ಬಿತ್ತುವುದು - ಸೆಕ್ಷನ್ 194, ಮೋಸ ಮತ್ತಿ ತಪ್ಪು ವಿಷಯಗಳ ಪ್ರಸಾರ - ಸೆಕ್ಷನ್ 240, ಧಾರ್ಮಿಕ ಭಾವನೆಗಳಿಗೆ ಅವಮಾನ - ಸೆಕ್ಷನ್ 298, ದ್ವೇಷ ಹುಟ್ಟಿಸುವ ಸುಳ್ಳು ಪ್ರಕಟಣೆ - ಸೆಕ್ಷನ್ 353(1/ಬಿ), ಮಾನಹಾನಿ - ಸೆಕ್ಷನ್ 356, ಅಪರಾಧ ಮಾಡಲು ಷಡ್ಯಂತ್ರ - ಸೆಕ್ಷನ್ 61, ಮೋಸದಿಂದ ಮಾಹಿತಿ ಪ್ರಸಾರ - ಸೆಕ್ಷನ್ 66ಡಿ, ಸಾರ್ವಜನಿಕ ಶಾಂತಿಗೆ ಹಾನಿ ಮಾಡುವ ವಿಷಯ ತಡೆಯುವ ಅಧಿಕಾರ - ಸೆಕ್ಷನ್ 66ಎ ಅಡಿ ಸಮೀರ್ ಎಂ.ಡಿ. ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.