ಮಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ (Dharmasthala Case) ಅಸ್ಥಿಪಂಜರ ಶೋಧದ ನಡುವೆ ಪ್ರದೇಶದಲ್ಲಿ ಅನಪೇಕ್ಷಿತ ಬೆಳವಣಿಗೆಗಳು ಸಂಭವಿಸಿದ್ದು, ಪರಿಸ್ಥಿತಿ ಉದ್ವಿಗ್ನವಾಗಿದೆ. ನಿನ್ನೆ ಕೆಲವು ಯೂಟ್ಯೂಬರ್‌ಗಳ ಕಾರ್ಯವೈಖರಿಯನ್ನು ಸ್ಥಳೀಯರು ಪ್ರಶ್ನಿಸಿದ್ದರು. ಈ ಯೂಟ್ಯೂಬರ್‌ಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಕುರಿತು ವರದಿ ಮಾಡಲು ಉಜಿರೆ ಆಸ್ಪತ್ರೆಗೆ ಹೋಗಿದ್ದ ಟಿವಿ ವರದಿಗಾರರ ಮೇಲೆ ಒಂದು ಗುಂಪು ದಾಳಿ (Assault Case) ನಡೆಸಿದೆ. ಈ ದಾಳಿಗೆ ಸಂಬಂಧಿಸಿ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಯೂಟ್ಯೂಬರ್ ಸಮೀರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಖಾಸಗಿ ವಾಹಿನಿಯ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 115(2), 189(2), 191(2), 351(2), 352, 190 ಅಡಿ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ನಲ್ಲಿ ಗಿರೀಶ್ ಮಟ್ಟೆಣ್ಣವರ್ (ಎ1), ಮಹೇಶ್ ಶೆಟ್ಟಿ ತಿಮರೋಡಿ (ಎ2), ಯೂಟ್ಯೂಬರ್ ಸಮೀರ್(ಎ3), ಜಯಂತ್(ಎ4) ಇತರರ ಹೆಸರನ್ನು ಉಲ್ಲೇಖಿಸಲಾಗಿದೆ.
ನಿನ್ನೆ ಸಂಜೆ ಮೂವರು ಯೂಟ್ಯೂಬರ್‌ಗಳನ್ನು ನೇತ್ರಾವತಿಯ ಪಾಂಗಳ ಎಂಬಲ್ಲಿ ತಡೆಯಲಾಗಿತ್ತು. ಇಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದ್ದು, ತಡರಾತ್ರಿ ಪೊಲೀಸ್ ಠಾಣೆಯ ಎದುರು ಪರ-ವಿರೋಧ ಬಣದವರು ಪ್ರತಿಭಟನೆ ನಡೆಸಿದ್ದಾರೆ. ಉಜಿರೆಯಲ್ಲಿ ಯೂಟ್ಯೂಬರ್ಸ್ ಬೆಂಬಲಿಗರು ಕರ್ತವ್ಯದಲ್ಲಿದ್ದ ಪತ್ರಕರ್ತರ ಮೇಲೆಯೇ ಹಲ್ಲೆ ಮಾಡಿದ್ದಾರೆ. ಹಲವಾರು ಪತ್ರಕರ್ತರು ಸ್ಥಳೀಯ ಬೆಳವಣಿಗೆಯನ್ನು ನಿರಂತರ ವರದಿ ಮಾಡುತ್ತಿದ್ದು, ಎರಡು ಗುಂಪುಗಳ ನಡುವಿನ ಜಗಳಕ್ಕೆ ಇದೀಗ ಪತ್ರಕರ್ತರು ಗುರಿಯಾಗಿದ್ದಾರೆ. ವರದಿ ಮಾಡಲು ತೆರಳಿದ್ದಾಗಲೇ ಯೂಟ್ಯೂಬರ್ಸ್ ಬೆಂಬಲಿಗರು ಖಾಸಗಿ ವಾಹಿನಿಯ ವರದಿಗಾರ ಮತ್ತು ಕ್ಯಾಮೆರಾಮ್ಯಾನ್ ಮೇಲೆ ಮನ ಬಂದಂತೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: Dharmasthala: ಕುಕ್ಕರ್ ಬಾಂಬ್ ಉಗ್ರರ ಟಾರ್ಗೆಟ್ ಆಗಿತ್ತು ಧರ್ಮಸ್ಥಳ ದೇವಾಲಯ!