ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಬುರುಡೆ ಮನುಷ್ಯನ ಹೆಸರು ರಿವೀಲ್‌, ಸಾಕ್ಷಿ ರಕ್ಷಣೆ ಹಿಂದೆಗೆತ, ನ್ಯಾಯಾಲಯಕ್ಕೆ ಹಾಜರು

Mask Man: ಬುರುಡೆ ಕಥೆಯ ಭೀಮ ಎಂದು ಹೆಸರಿಸಲಾಗಿದ್ದ ಮಾಸ್ಕ್​ ಮ್ಯಾನ್​ ಅಸಲಿ ಹೆಸರು ಸಿ.ಎನ್. ಚಿನ್ನಯ್ಯ ಎಂದು ಎಸ್​ಐಟಿಯ ಮೂಲಗಳು ತಿಳಿಸಿವೆ. ಚಿನ್ನಯ್ಯನನ್ನು ವಿಶೇಷ ತನಿಖಾ ದಳ (SIT) ಬಂಧನ ಮಾಡಿದ್ದು, ಇದೀಗ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬುರುಡೆ ತಂದ ಚಿನ್ನಯ್ಯ

ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೆ (Dharmasthala Case) ಎಂದು ಹೇಳಿಕೊಂಡು ಬಂದಿದ್ದ, ಮಾಸ್ಕ್‌ಮ್ಯಾನ್​ ಭೀಮ ಎಂದು ಕರೆಯಲ್ಪಟ್ಟಿದ್ದ ವ್ಯಕ್ತಿಯ ನಿಜ ಹೆಸರು ಕೊನೆಗೂ ಬಯಲಾಗಿದೆ. ಆತನ ಫೋಟೋ ಕೂಡ ರಿವೀಲ್‌ ಆಗಿದೆ. ಎಸ್​ಐಟಿ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಮಾಸ್ಕ್ ಮ್ಯಾನ್​ (Mask man) ಬಣ್ಣ ಬಯಲಾಗಿದೆ. ನಿನ್ನೆ ಇಡೀ ದಿನ ರಾತ್ರಿ ಪೂರ್ತಿ ಪ್ರಣಬ್​ ಮೊಹಂತಿ (Pranab Mohanti) ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ಈ ವೇಳೆ ದೂರುದಾರನ ಅಸಲಿ ವಿಚಾರ ಹೊರಬಿದ್ದಿದೆ. ಇದೀಗ ಎಸ್​ಐಟಿ ಅಧಿಕಾರಿಗಳು ಮಾಸ್ಕ್​ ಮ್ಯಾನ್​ ಚಿನ್ನಯ್ಯನನ್ನು ಆರೆಸ್ಟ್​ ಮಾಡಿದ್ದರೆ.

ದೂರುದಾರ ಚಿನ್ನಯ್ಯ 1995ರಿಂದ 2014ರವರೆಗೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡಿದ್ದಾಗ, ಲೈಂಗಿಕ ದೌರ್ಜನ್ಯ ಮತ್ತು ಕೊಲೆಗೊಳಗಾದ ಮಹಿಳೆಯರು ಮತ್ತು ಮಕ್ಕಳ ಶವಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪಿಸಿದ್ದ. ಕೆಲವು ಜಾಗಗಳನ್ನು ಗುರುತಿಸಿದ್ದ. ಆದರೆ ಕೇವಲ 2 ಜಾಗದಲ್ಲಿ ಮೂಳೆಗಳು ಪತ್ತೆಯಾಗಿದ್ದವು, ಇದಾದ ನಂತರ ಅನುಮಾನ ಬಂದು ಎಸ್​ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದು, ಈ ವೇಳೆ ಕೆಲ ಅಚ್ಚರಿ ಅಂಶಗಳು ರಿವೀಲ್​ ಆಗಿದೆ.

ಬುರುಡೆ ಕಥೆಯ ಭೀಮ ಎಂದು ಹೆಸರಿಸಲಾಗಿದ್ದ ಮಾಸ್ಕ್​ ಮ್ಯಾನ್​ ಅಸಲಿ ಹೆಸರು ಸಿ.ಎನ್. ಚಿನ್ನಯ್ಯ ಎಂದು ಎಸ್​ಐಟಿಯ ಮೂಲಗಳು ತಿಳಿಸಿವೆ. ಚಿನ್ನಯ್ಯನನ್ನು ವಿಶೇಷ ತನಿಖಾ ದಳ (SIT) ಬಂಧನ ಮಾಡಿದ್ದು, ಇದೀಗ ಚಿನ್ನಯ್ಯನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತನಿಖೆಯ ಮುಂದಿನ ಹಂತಕ್ಕಾಗಿ ಆತನನ್ನು ಕಸ್ಟಡಿಗೆ ಪಡೆಯಲು SIT ಯೋಜನೆ ರೂಪಿಸಿದ್ದು, ಈ ಪ್ರಕರಣದಲ್ಲಿ ಇನ್ನಷ್ಟು ಜನರಿಗೆ ಸಂಕಷ್ಟವಾಗುವ ಸಾಧ್ಯತೆ ಇದೆ.

ನಿನ್ನೆ ಶುಕ್ರವಾರ ಬೆಳಗ್ಗೆ 10:30ರಿಂದ ಆರಂಭವಾದ ದೂರುದಾರನ ವಿಚಾರಣೆ ರಾತ್ರಿಯವರೆಗೆ ನಡೆಯಿತು. SIT ಮುಖ್ಯಸ್ಥ ಡಿಐಜಿ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ನಡೆದ ಈ ವಿಚಾರಣೆಯಲ್ಲಿ ಚಿನ್ನಯ್ಯ ತನ್ನ ಹೇಳಿಕೆಯಲ್ಲಿ ಹಲವು ವ್ಯಕ್ತಿಗಳ ಹೆಸರನ್ನು ಉಲ್ಲೇಖಿಸಿರುವ ಸಾಧ್ಯತೆಯಿದೆ. ಧರ್ಮಸ್ಥಳದ ಮಂಜುನಾಥ ದೇವಸ್ಥಾನದ ಆಡಳಿತದೊಂದಿಗೆ ಸಂಬಂಧವಿರುವ ಕೆಲವು ಪ್ರಭಾವಿ ವ್ಯಕ್ತಿಗಳಿಂದ ಶವಗಳನ್ನು ಹೂತಿಡಲು ಒತ್ತಡವಿತ್ತು ಎಂದು ದೂರಿದ್ದ ಚಿನ್ನಯ್ಯನ ದೂರು ದುರುದ್ದೇಶಪೂರಿತವಾಗಿತ್ತು ಎಂದು SIT ಕಂಡುಕೊಂಡಿದ್ದು, ಆತನ ಸಾಕ್ಷಿ ಸಂರಕ್ಷಣಾ ಕಾಯ್ದೆಯ ರಕ್ಷಣೆಯನ್ನು ರದ್ದುಗೊಳಿಸಲಾಗಿದೆ.

ಚಿನ್ನಯ್ಯನನ್ನು ಬಂಧಿಸಿದ ಎಸ್​ಐಟಿ

ಸಿ.ಎನ್. ಚಿನ್ನಯ್ಯ, ಧರ್ಮಸ್ಥಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ 19 ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದ. 2014ರಲ್ಲಿ ತನ್ನ ಕುಟುಂಬದ ಹೆಣ್ಣುಮಗುವಿನ ಮೇಲೆ ದೌರ್ಜನ್ಯ ನಡೆದ ಬಳಿಕ ಭಯದಿಂದ ಧರ್ಮಸ್ಥಳವನ್ನು ತೊರೆದು ತಮಿಳುನಾಡಿನಲ್ಲಿ ಅಜ್ಞಾತವಾಗಿದ್ದೆ ಎಂದಿದ್ದ. 2024ರಲ್ಲಿ ತಾನೇ ಹೂತಿಟ್ಟಿದ್ದೆನೆಂದು ಹೇಳಲಾದ ಒಂದು ತಲೆಬುರುಡೆ ಜೊತೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ. ಜುಲೈ 11, 2025ರಂದು ಬೆಳ್ತಂಗಡಿ ಕೋರ್ಟ್‌ನಲ್ಲಿ ಆತನ ಹೇಳಿಕೆಯನ್ನು BNSS ಕಲಂ 183ರಡಿ ದಾಖಲಿಸಲಾಯಿತು. ಆದರೆ, ತನಿಖೆಯಲ್ಲಿ ಆತನ ಆರೋಪಗಳು ಸತ್ಯಕ್ಕೆ ದೂರವಾಗಿದ್ದವು ಎಂದು SIT ಕಂಡುಕೊಂಡಿದೆ.

ಚಿನ್ನಯ್ಯನನ್ನು BNS ಕಾಯ್ದೆಯ ಕಲಂ 353(1)(b) ಮತ್ತು 353(2) ಅಡಿಯಲ್ಲಿ ಬಂಧಿಸಲಾಗಿದ್ದು, ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಸುಳ್ಳು ಮಾಹಿತಿ ಹರಡಿದ ಆರೋಪವಿದೆ. ಇಂದು ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಲಾಗುವುದು. SIT ಆತನನ್ನು ಕಸ್ಟಡಿಗೆ ಪಡೆಯಲು ಯೋಜನೆ ರೂಪಿಸಿದ್ದು, ತನಿಖೆಯಲ್ಲಿ ಉಲ್ಲೇಖಿತವಾದ ಇತರ ವ್ಯಕ್ತಿಗಳ ಬಗ್ಗೆ ಕೂಲಂಕುಷವಾಗಿ ಮಾಹಿತಿ ಸಂಗ್ರಹಿಸಲಿದೆ.

ಭೀಮ ಎನ್ನಲಾಗಿದ್ದ ಸಿ.ಎನ್. ಚಿನ್ನಯ್ಯನ ಬಂಧನವು ಧರ್ಮಸ್ಥಳ ಸಾಮೂಹಿಕ ಶವ ದಫನ ಪ್ರಕರಣದಲ್ಲಿ ಪ್ರಮುಖ ತಿರುವಾಗಿದೆ. ಈ ಚಿನ್ನಯ್ಯ 19/06/1980 ಜನಿಸಿದ್ದು ಎಸ್ ಐ ಟಿ ಅಧಿಕಾರಿಗಳು ಚಿನ್ನಯ್ಯ ವ್ಯಾಸಂಗ ಪ್ರಮಾಣ ಪತ್ರ ಸಂಗ್ರಹ ಮಾಡಿದ್ದಾರೆ. SITನ ತನಿಖೆಯು ಈ ಆರೋಪಗಳ ದುರುದ್ದೇಶಪೂರಿತ ಸ್ವರೂಪವನ್ನು ಬಯಲುಗೊಳಿಸಿದ್ದು, ಮುಂದಿನ ವಿಚಾರಣೆಯು ಈ ಪ್ರಕರಣದ ಸತ್ಯಾಸತ್ಯತೆಯನ್ನು ಸ್ಪಷ್ಟಪಡಿಸಲಿದೆ.

ಇದನ್ನೂ ಓದಿ: Mahesh Shetty Thimarodi: ಇಂದು ಮಹೇಶ್‌ ಶೆಟ್ಟಿ ತಿಮರೋಡಿ ಜಾಮೀನು ಅರ್ಜಿ ವಿಚಾರಣೆ

ಹರೀಶ್‌ ಕೇರ

View all posts by this author