ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heavy Rain in Hassan: ಹಾಸನದಲ್ಲಿ ಮಳೆ ಆರ್ಭಟ; 15 ಕಡೆ ಭೂಕುಸಿತವಾಗಿ ರೈಲು ಸಂಚಾರ ಸ್ಥಗಿತ

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಎಡಕುಮಾರಿ ಬಳಿ ಹಳಿ ಮೇಲೆ ಮಣ್ಣು ಹಾಗೂ ಗಿಡಗಳು ಜಾರಿಬಿದ್ದ ಪರಿಣಾಮ, ಬೆಂಗಳೂರು–ಮಂಗಳೂರು ರೈಲು ಮಾರ್ಗದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಸುಮಾರು ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಹಳಿ ಮೇಲೆ ದೊಡ್ಡ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ.

ಹಾಸನ: ಜಿಲ್ಲೆಯ ಪಶ್ಚಿಮಘಟ್ಟದ ಭಾಗದಲ್ಲಿ ಭಾರಿ ಮಳೆಯಿಂದಾಗಿ ರೈಲು ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸಕಲೇಶಪುರ ತಾಲೂಕಿನ ಎಡಕುಮಾರಿ ಬಳಿ ಹಳಿ ಮೇಲೆ ಮಣ್ಣು ಹಾಗೂ ಗಿಡಗಳು ಜಾರಿಬಿದ್ದ ಪರಿಣಾಮ, ಬೆಂಗಳೂರು–ಮಂಗಳೂರು ರೈಲು ಮಾರ್ಗದಲ್ಲಿ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಮಂಗಳೂರು–ಬೆಂಗಳೂರು ರೈಲ್ವೆ ಮಾರ್ಗದ 63/00ರಿಂದ 70/600ರ ನಡುವೆ ಸುಮಾರು ಏಳು ಕಿಲೋಮೀಟರ್ ವ್ಯಾಪ್ತಿಯಲ್ಲಿ 15 ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಹಳಿ ಮೇಲೆ ದೊಡ್ಡ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಸಮಸ್ಯೆ ಉಂಟಾಗಿದೆ.

ಘಟನೆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಎಲ್ಲಾ ಪ್ರಯಾಣಿಕ ಮತ್ತು ಸರಕು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಸ್ಥಳಕ್ಕೆ ರೈಲ್ವೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ, ಹಳಿ ಮೇಲೆ ಬಿದ್ದ ಮಣ್ಣು, ಮರ ಗಿಡ ತೆರವುಗೊಳಿಸಿ ಸಂಚಾರ ಪುನಃ ಪ್ರಾರಂಭಿಸಲು ಶ್ರಮಿಸುತ್ತಿದ್ದಾರೆ.

ಇನ್ನು ಸಕಲೇಶಪುರ ತಾಲೂಕಿನ ಮಾರನಹಳ್ಳಿಯಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೂಕುಸಿತವಾಗಿದ್ದರಿಂದ ಮರ, ಗಿಡಗಳ ಸಮೇತ ಮಣ್ಣು ರಸ್ತೆಗೆ ಕುಸಿಯುತ್ತಿದೆ. ಶಿರಾಡಿಘಾಟ್ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಟ್ರಾಫಿಕ್‌ ಜಾಮ್ ನಿವಾರಿಸಲು ಪೊಲೀಸರು ಹರಸಾಹಸಪಡುತ್ತಿದ್ದು, ಸಕಲೇಶಪುರ-ಮಂಗಳೂರು ಮಾರ್ಗದ ವಾಹನಗಳನ್ನು ಚಾರ್ಮಾಡಿ ಮಾರ್ಗವಾಗಿ ಸಂಚರಿಸಲು ಸೂಚಿಸಲಾಗಿದೆ.

ಈ ಸುದ್ದಿಯನ್ನೂ ಓದಿ | Karnataka Weather: ಇಂದು ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್; ಮೀನುಗಾರರಿಗೆ ಎಚ್ಚರಿಕೆ

ಇಂದು ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್

ಬೆಂಗಳೂರು: ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ. ಇನ್ನು ಆಗಸ್ಟ್‌ 17ರಂದು ಕರಾವಳಿ ಜಿಲ್ಲೆಗಳು, ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು ಸೇರಿ ಐದು ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದ್ದು, ಗುಡುಗು ಸಹಿತ ಮಳೆಯಾಗುವ (Karnataka Weather) ಸಾಧ್ಯತೆ ಇದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳವರೆಗೆ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದ್ದು, ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 27°C ಮತ್ತು 20°C ಇರುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ

ಆಗಸ್ಟ್ 16 ರಿಂದ 19ರವರೆಗೆ ಕರ್ನಾಟಕ ಕರಾವಳಿಯಲ್ಲಿ ಮತ್ತು ಹೊರಗೆ ಗಂಟೆಗೆ 40 - 50 ಕಿ.ಮೀ ನಿಂದ 60 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ.

ಆಗಸ್ಟ್‌ 18ರಂದು ನಾಲ್ಕು ಜಿಲ್ಲೆಗಳಿಗೆ ರೆಡ್‌ ಅಲರ್ಟ್

ಆಗಸ್ಟ್‌ 18ರಂದು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿ ನಾಲ್ಕು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌ ಘೋಷಿಸಿದ್ದು, ಅತಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ದಕ್ಷಿಣ ಕನ್ನಡ, ಹಾಸನ, ಕೊಡಗು, ಮೈಸೂರು, ಧಾರವಾಡ, ಗದಗ, ಬೆಳಗಾವಿ ಬಾಗಲಕೋಟೆ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ನೀಡಿದ್ದು, ಬಿರುಸಿನ ಮಳೆಯಾಗಲಿದೆ. ಇನ್ನುಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದ್ದು, ಹಗುರದಿಂದ ಸಾಧಾರಣ ಮಳೆಯಾಗಲಿದೆ.

ಆಗಸ್ಟ್‌ 19ರಂದು ಉತ್ತರ ಕನ್ನಡ ಉಡುಪಿ ಜಿಲ್ಲೆಗೆ ರೆಡ್‌ ಅಲರ್ಟ್‌ ನೀಡಿದ್ದು, ಅತಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಇನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರ, ಶಿವಮೊಗ್ಗ, ಹಾಸನ, ಧಾರವಾಡ, ಬೆಳಗಾವಿ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ನೀಡಿದ್ದು, ಬಿರುಸಿನ ಮಳೆಯಾಗಲಿದೆ. ಉಳಿದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದ್ದು, ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ.

ಈ ಸುದ್ದಿಯನ್ನೂ ಓದಿ | Health Tips: ಮೈಗ್ರೇನ್‌ ಉಪಶಮನಕ್ಕೆ ರೋಸ್‌ಮೆರಿ ಎಂಬ ಸುಗಂಧ ತೈಲ!

ಆಗಸ್ಟ್‌ 20ರಂದು ಕರಾವಳಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಿದ್ದು, ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ.