ಬೆಂಗಳೂರು: ಹೇಮಾವತಿ ನದಿ ನೀರಿಗಾಗಿ (Hemavathi water dispute) ಎರಡು ಜಿಲ್ಲೆಗಳ ನಡುವೆ ಜಗಳ ತಾರಕಕ್ಕೆ ಏರಿದೆ. ರಾಮನಗರ (Ramanagara) ಮತ್ತು ತುಮಕೂರು (Tumkur) ಜಿಲ್ಲೆಗಳ ನಡುವೆ ಹೇಮಾವತಿ ನೀರಿಗಾಗಿ ಭಿನ್ನಾಭಿಪ್ರಾಯ ಮೂಡಿದ್ದು, ತುಮಕೂರಿನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹೇಮಾವತಿ ನದಿಯಿಂದ ಮಾಗಡಿಗೆ ನೀರು ಹರಿಸುವ ಎಕ್ಸ್‌ಪ್ರೆಸ್ ಕೆನಾಲ್ (Express canal) ಯೋಜನೆಯನ್ನು ತುಮಕೂರಿನ ರೈತರು ವಿರೋಧಿಸುತ್ತಿದ್ದಾರೆ. ಯೋಜನೆಯಿಂದ ತಮ್ಮ ಜಿಲ್ಲೆಗೆ ನೀರಿನ ಅಭಾವವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಗುಬ್ಬಿಯ ಸಂಕಾಪುರದ ಕಾಮಗಾರಿ ಸ್ಥಳದಲ್ಲಿ ಜಿಲ್ಲಾಡಳಿತ ಹೇರಿದ್ದ ನಿಷೇಧಾಜ್ಞೆ ಉಲ್ಲಂಘಿಸಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ಕಾಮಗಾರಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತರು ರಾಜ್ಯ ಸರಕಾರಕ್ಕೆ ಸೆಡ್ಡು ಹೊಡೆದಿದ್ದಾರೆ. ತುಮಕೂರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಗಳ ನಡುವೆ ನೀರಿನ ಹಂಚಿಕೆ ವಿಚಾರದಲ್ಲಿ ಪ್ರತಿಭಟನೆ, ಪರ-ವಿರೋಧಗಳು ತೀವ್ರಗೊಳ್ಳುತ್ತಿವೆ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ರೈತರು ಹಾಗೂ ಅದರಲ್ಲಿ ಪಾಲ್ಗೊಂಡ ಸ್ವಾಮೀಜಿಗಳ ಮೇಲೂ ಎಫ್ಐಆರ್ ದಾಖಲಾಗಿದೆ. ನಿನ್ನೆ ಜಿಲ್ಲೆಗೆ ಬಂದು ಸಭೆ ನಡೆಸಿದ ಗೃಹ ಸಚಿವ ಪರಮೇಶ್ವರ್, ಸ್ವಾಮೀಜಿಗಳ ಮೇಲೆ ಕೇಸ್ ದಾಖಲಾಗಿಲ್ಲ ಎಂದಿದ್ದರು. ಆದರೆ ಗಲಾಟೆಯ ಎಫ್ಐಆರ್ನಲ್ಲಿ ಸ್ವಾಮೀಜಿ ಹೆಸರು ದಾಖಲಾಗಿದೆ. ಹೇಮಾವತಿ ಕಿಚ್ಚು ಹೆಚ್ಚಾಗುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಅವರು ತುಮಕೂರಿಗೆ ಭೇಟಿ ನೀಡಿದ್ದಾರೆ. ಸಭೆ ನಡೆಸಿದ ಬಳಿಕ ಮಾತಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ಎಫ್ಐಆರ್ನಲ್ಲಿ ಸ್ವಾಮೀಜಿಗಳ ಹೆಸರಿಲ್ಲ ಅಂತ ಹೇಳಿದ್ದರು. ಆದರೆ ನಾಲ್ವರು ಸ್ವಾಮಿಗಳ ಹೆಸರು ಸಮೇತ ಕೊಲೆ ಯತ್ನ ಕೇಸ್ ದಾಖಲಾಗಿದೆ.
ಬಿಜೆಪಿ ಮುಖಂಡ ದಿಲೀಪ್ ಸೇರಿದಂತೆ 8 ಮಂದಿ ವಿರುದ್ಧ ಕೇಸ್ ಬಿದ್ದಿದೆ. ಈ ಪ್ರಕರಣದಲ್ಲಿ ನಾಲ್ವರು ಸ್ವಾಮೀಜಿಗಳ ಹೆಸರಿನ ಜೊತೆಗೆ ಆರೋಪಿತ ಸಂಖ್ಯೆ ಸಮೇತ ವರದಿಯಲ್ಲಿ ಉಲ್ಲೇಖವಾಗಿದೆ. ತಿಪಟೂರು ನಗರ ಠಾಣೆ ಇನ್ಸ್ಪೆಕ್ಟರ್ ವೆಂಕಟೇಶ್ ದೂರಿನ ಆಧಾರದ ಮೇಲೆ ಎಫ್.ಐ.ಆರ್ ದಾಖಲಿಸಲಾಗಿದೆ. ಸ್ವಾಮೀಜಿಗಳ ಮೇಲೆ, ಕಾಮಗಾರಿಯ ಸ್ಥಳದಲ್ಲಿ ಯಂತ್ರೋಪಕಣಗಳಿಗೆ ಬೆಂಕಿ ಹಚ್ಚುವ ಪ್ರಚೋದನೆ ಆರೋಪ ದಾಖಲಿಸಲಾಗಿದೆ.
ಪೊಲೀಸರ ಮೇಲೆ ಕಲ್ಲು ಎಸೆದು ಕೊಲೆ ಮಾಡಿ ಎಂದು ಜನರನ್ನು ಉದ್ರೇಕಿಸಿದ ಆರೋಪ ಸ್ವಾಮೀಜಿಗಳ ಮೇಲಿದೆ. ನಮ್ಮ ನೀರು ನಮ್ಮ ಹಕ್ಕು ಎಂದು ಜೋರಾಗಿ ಘೋಷಣೆ ಕೂಗಿ ಪೊಲೀಸರ ಮೇಲೆ ಕಲ್ಲು ಎಸೆದಿದ್ದಾರೆ. ಕೊಲೆ ಮಾಡುವ ಉದ್ದೇಶದಿಂದಲೇ ಪೊಲೀಸರ ಮೇಲೆ ಕಲ್ಲು ಎಸೆದಿದ್ದು, ಕಲ್ಲು ಮರ್ಮಾಂಗಕ್ಕೆ ತಾಗಿ ಸ್ಥಳದಲ್ಲೇ ಇನ್ಸ್ಪೆಕ್ಟರ್ ವೆಂಕಟೇಶ್ ಕುಸಿದು ಬಿದ್ದಿದ್ದರು. ಹಿರಿಯ ಅಧಿಕಾರಿಗಳು ನಿಟ್ಟೂರು ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಯಂತ್ರೋಪಕರಣಗಳಿಗೆ ಕಲ್ಲು ಎಸೆದು ಡ್ಯಾಮೇಜ್ ಮಾಡಿದ ಆರೋಪದ ಮೇಲೆ ಸ್ವಾಮೀಜಿಗಳ ಮೇಲೆ ಕೇಸ್ ದಾಖಲಾಗಿದೆ.
ಯಾವ ಸ್ವಾಮೀಜಿ ಮೇಲೆ ಕೇಸ್?
ದೊಡ್ಡಗುಣಿ ಮಠದ ರೇವಣಸಿದ್ದೇಶ್ವರ ಸ್ವಾಮೀಜಿ (ಎ5), ಬೆಳ್ಳಾವಿ ಕಾರದ ಮಠದ ವೀರಬಸವ ಸ್ವಾಮೀಜಿ (ಎ6)., ಗೊಲ್ಲಹಳ್ಳಿ ಮಠದ ವಿಭವ ವಿದ್ಯಾಶಂಕರ ಸ್ವಾಮೀಜಿ(ಎ7), ತೇವಡಿಹಳ್ಳಿ ಚನ್ನಬಸವೇಶ್ವರ ಸ್ವಾಮೀಜಿ (ಎ8), ಬಿಎನ್ ಎಸ್ 109, 132, 189(2), 190, 191(2), 191(3) ಅಡಿ ಕೇಸ್ ದಾಖಲಾಗಿದೆ. ಬಿಎನ್ಎಸ್ 109 ಕೊಲೆ ಯತ್ನ, ಬಿಎನ್ ಎಸ್ 132 ಸರ್ಕಾರಿ ಕೆಲಸಕ್ಕೆ ಅಡ್ಡಿ, ಬಿ.ಎನ್.ಎಸ್ 189(2) ಕಾನೂನು ಬಾಹಿರ ಸಭೆ, ಬಿ.ಎನ್ .ಎಸ್ 190 ಗುಂಪು ಗಲಭೆ, ಬಿ.ಎನ್.ಎಸ್ 191(2) ಕಾನೂನು ಬಾಹಿರ ಸಭೆ.
ಬಿ.ಎನ್.ಎಸ್ 191(3) ಮಾರಕಾಸ್ತ್ರಗಳಿಂದ ಸಜ್ಜಿತರಾಗಿ ಮರಣ ಉಂಟು ಮಾಡುವ ಸಾಧ್ಯತೆ ಸೇರಿದಂತೆ ಕೆಲ ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ. ನಿನ್ನೆ ಸುದ್ದಿಗೊಷ್ಠಿ ವೇಳೆ ಎಫ್.ಐ.ಆರ್ ನಲ್ಲಿ ಸ್ವಾಮೀಜಿಗಳ ಹೆಸರು ಉಲ್ಲೇಖಿಸಿಲ್ಲ ಎಂದಿದ್ದ ಗೃಹ ಸಚಿವರು ಹೇಳಿದ್ರು. ಆದ್ರೆ ಸ್ವಾಮೀಜಿಗಳ ಹೆಸರು ಉಲ್ಲೇಖಿಸಿ ಹಾಫ್ ಮರ್ಡರ್ ಕೇಸ್ ದಾಖಲಾಗಿದೆ. ಗುಬ್ಬಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Hemavathi Express Link Canal: ಮಾಗಡಿ, ರಾಮನಗರಕ್ಕೆ ಹೇಮಾವತಿ ನೀರು ಹೋಗುವುದಿಲ್ಲ: ಸಚಿವ ಪರಮೇಶ್ವರ್