ಬೆಂಗಳೂರು: ಇದು ಮದ್ಯಪ್ರಿಯರಿಗೆ ಕಹಿ ಸುದ್ದಿ. ಈ ವಾರ ಬೆಂಗಳೂರಿನಲ್ಲಿ ಎರಡು ಸತತ ʼಡ್ರೈ ಡೇʼಗಳು (Dry day) ಬರಲಿವೆ. ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ (Independence Day) ಮತ್ತು ಆಗಸ್ಟ್ 16 ರಂದು ಕೃಷ್ಣ ಜನ್ಮಾಷ್ಟಮಿ (Krishna Janmashtami) ಹಿನ್ನೆಲೆಯಲ್ಲಿ ಮದ್ಯ ಮಾರಾಟ ನಿಷೇಧ (Liquor ban) ಹೇರಲಾಗುತ್ತಿದೆ. ಈ ನಿರ್ಬಂಧಗಳು ಎರಡೂ ದಿನಗಳಲ್ಲಿ ಪೂರ್ಣ 24 ಗಂಟೆಗಳ ಕಾಲ ಜಾರಿಯಲ್ಲಿರುತ್ತವೆ ಮತ್ತು ನಗರದಾದ್ಯಂತ ಎಲ್ಲಾ ಬಾರ್‌ಗಳು, ಪಬ್‌ಗಳು, ರೆಸ್ಟೋರೆಂಟ್‌ಗಳು, ವೈನ್ ಅಂಗಡಿಗಳು ಮತ್ತು ಮದ್ಯದ ಅಂಗಡಿಗಳಿಗೆ ಅನ್ವಯಿಸುತ್ತವೆ.
ಸಾರ್ವಜನಿಕ ಸಭೆಗಳು ಮತ್ತು ಹಬ್ಬದ ಕಾರ್ಯಕ್ರಮಗಳ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಗುರಿಯೊಂದಿಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇದರಲ್ಲಿ ಯಾವುದೇ ವಿನಾಯಿತಿ ಕೊಡಲಾಗುವುದಿಲ್ಲವಾದ್ದರಿಂದ, ಅಗತ್ಯ ಬಿದ್ದವರು ತಮ್ಮ ಮದ್ಯ ಖರೀದಿಗಳನ್ನು ಮುಂಚಿತವಾಗಿ ಯೋಜಿಸಲು ಸೂಚಿಸಲಾಗಿದೆ.
ವರದಿಯ ಪ್ರಕಾರ, ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಯಂದು ದೇಶಾದ್ಯಂತ ಕಡ್ಡಾಯ ಡ್ರೈ ಡೇ ಆಗಿದೆ. ಕರ್ನಾಟಕದಲ್ಲಿ, ಆಗಸ್ಟ್ 16 ರಂದು ಜನ್ಮಾಷ್ಟಮಿಯನ್ನು ಸಾಂಪ್ರದಾಯಿಕವಾಗಿ ಮದ್ಯರಹಿತ ದಿನವಾಗಿ ಆಚರಿಸಲಾಗುತ್ತದೆ. ಜನ್ಮಾಷ್ಟಮಿಗೆ ಅಧಿಕೃತ ಮದ್ಯನಿಷೇಧ ದೃಢೀಕರಣವನ್ನು ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಆದರೆ ಹಿಂದಿನ ವರ್ಷಗಳಲ್ಲಿ ನಿರ್ಬಂಧ ಜಾರಿಗೊಳಿಸಲಾಗಿತ್ತು.
ಈ ತಿಂಗಳ ಕೊನೆಯಲ್ಲಿ, ಆಗಸ್ಟ್ 27 ರಂದು ನಡೆಯುವ ಗಣೇಶ ಚತುರ್ಥಿಯು ಬೆಂಗಳೂರಿನಲ್ಲಿ ಡ್ರೈ ಡೇ ಆಗುವ ಸಾಧ್ಯತೆಯಿದೆ. ಗಣೇಶನಿಗೆ ಸಮರ್ಪಿತವಾದ ಈ ಹಬ್ಬ ಹತ್ತು ದಿನಗಳ ಕಾಲ ಮುಂದುವರಿಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಮೆರವಣಿಗೆಗಳು ಮತ್ತು ಸಮುದಾಯ ಸಭೆಗಳು ನಡೆಯುತ್ತವೆ. ಸೆಪ್ಟೆಂಬರ್ 6ರಂದು ಅನಂತ ಚತುರ್ದಶಿಯೊಂದಿಗೆ ಅದು ಮುಕ್ತಾಯಗೊಳ್ಳಲಿದೆ.
ಹಬ್ಬದ ಮೊದಲ ದಿನ ಮಾತ್ರ ಅಧಿಕೃತವಾಗಿ ಡ್ರೈ ಡೇ ಆಗಿದ್ದರೂ, ಮೂರ್ತಿ ವಿಸರ್ಜನೆಯ ಸಮಯದಲ್ಲಿ ಅಬಕಾರಿ ಇಲಾಖೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಬಹುದು. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು, ಸಂಚಾರವನ್ನು ನಿರ್ವಹಿಸಲು ಮತ್ತು ವಿಸರ್ಜನೆಯ ಸ್ಥಳಗಳಲ್ಲಿ ಹೆಚ್ಚಿನ ಜನಸಂದಣಿಯ ಸಮಯದಲ್ಲಿ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕ ನಿಷೇಧವನ್ನು ಜಾರಿಗೆ ತರಬಹುದು.
ಇದನ್ನೂ ಓದಿ: Independence Day: ಸಾರ್ವಜನಿಕರೇ, ನೀವೂ ಈಗ ರಾಜಭವನ ವೀಕ್ಷಿಸಬಹುದು!