ನವದೆಹಲಿ: ಭಾರತ ತಂಡದ ಯುವ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರು ಶನಿವಾರ 2024ರ ವರ್ಷದ ಐಸಿಸಿ ಪುರುಷರ ಟಿ20ಐ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. 204ರ ವರ್ಷದಲ್ಲಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಇದರ ಫಲವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಟೀಮ್ ಇಂಡಿಯಾ ಯುವ ವೇಗಿಗೆ ಶ್ರೇಷ್ಠ ಗೌರವ ನೀಡಿದೆ.
25ನೇ ವಯಸ್ಸಿನ ಅರ್ಷದೀಪ್ ಸಿಂಗ್ ಕಳೆದ ವರ್ಷ 18 ಟಿ20ಐ ಪಂದ್ಯಗಳನ್ನು ಆಡಿ 36 ವಿಕೆಟ್‌ಗಳನ್ನು ಕಬಳಿಸಿದ್ದರು. ರೋಹಿತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನೊಳಗೊಂಡ 2024ರ ವರ್ಷದ ಐಸಿಸಿ ಪುರುಷರ ಟಿ20ಐ ತಂಡದಲ್ಲಿಯೂ ಅರ್ಷದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಅಮೆರಿಕದಲ್ಲಿ ನಡೆದಿದ್ದ ಟಿ20ಐ ವಿಶ್ವಕಪ್ ಟೂರ್ನಿಯಲ್ಲಿಯೂ ಅರ್ಷದೀಪ್ ಸಿಂಗ್, ಪವರ್‌ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ತಮ್ಮ ಕೌಶಲವನ್ನು ಮೆರೆದಿದ್ದರು. ಅಂತಿಮವಾಗಿ ಟೂರ್ನಿಯ ಅಂತ್ಯಕ್ಕೆ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನ ತಂಡದ ಫಝಲಕ್ ಫಾರೂಕಿ ಅವರೊಂದಿಗೆ ಜಂಟಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದರು.
IND vs ENG: ಯುಜ್ವೇಂದ್ರ ಚಹಲ್‌ರ ಟಿ20ಐ ದಾಖಲೆ ಮುರಿದ ಅರ್ಷದೀಪ್ ಸಿಂಗ್!
2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅರ್ಷದೀಪ್ ಸಿಂಗ್ ಆಡಿದ್ದ ಎಂಟು ಪಂದ್ಯಗಳಿಂದ 12.64ರ ಸರಾಸರಿಯಲ್ಲಿ 17 ವಿಕೆಟ್‌ಗಳನ್ನು ಕಬಳಿಸಿದ್ದರು. ಅದರಲ್ಲಿಯೂ ವಿಶೇಷವಾಗಿ ದಕ್ಷಿಣ ಆಫ್ರಿಕಾ ವಿರುದ್ದದ ಫೈನಲ್ ಹಣಾಹಣಿಯಲ್ಲಿ ಬೌಲ್ ಮಾಡಿದ್ದ 4 ಓವರ್‌ಗಳಿಂದ ಕೇವಲ 20 ರನ್ ನೀಡಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಬಳಿಸಿದ್ದರು.
ದಕ್ಷಿಣ ಆಫ್ರಿಕಾ ನಾಯಕ ಏಡೆನ್ ಮಾರ್ಕ್ರಮ್ ಅವರನ್ನು ಔಟ್ ಮಾಡಿದ ಬಳಿಕ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿ ದೊಡ್ಡ ಜೊತೆಯಾಟವನ್ನು ತಡೆದಿದ್ದರು. ಆ ಮೂಲಕ ಭಾರತ ತಂಡ ಎರಡನೇ ಬಾರಿ ಟಿ20ಐ ವಿಶ್ವಕಪ್ ಗೆಲುವಿಗೆ ನೆರವು ನೀಡಿದ್ದರು. ಕೊನೆಯ ಓವರ್ ಬೌಲ್ ಮಾಡಿದ್ದ ಅರ್ಷದೀಪ್, ಕೇವಲ ನಾಲ್ಕು ರನ್ ನೀಡಿದ್ದರಿಂದ ಹಾರ್ದಿಕ್ ಪಾಂಡ್ಯಗೆ ಕೊನೆಯ ಓವರ್ ಬೌಲ್ ಮಾಡಲು ಸುಲಭವಾಗಿತ್ತು. ಅರ್ಷದೀಪ್ 2024ರಲ್ಲಿ ಭಾರತದ ಪರ ಅತಿ ಹೆಚ್ಚು ಟಿ20ಐ ವಿಕೆಟ್ ಪಡೆದ ಬೌಲರ್ ಆಗಿದ್ದರು.
Congratulations to Arshdeep Singh for being voted the ICC Men's T20I Cricketer of the Year 2024.
— BCCI (@BCCI) January 25, 2025
May you keep winning more awards and wish you another year filled with lots of success 👏🙌#TeamIndia | @arshdeepsinghh pic.twitter.com/n8KG1QLyLJ
ಸೌದಿ ಅರೇಬಿಯಾದ ಉಸ್ಮಾನ್ ನಜೀಬ್ (38), ಶ್ರೀಲಂಕಾದ ವಾನಿಂದು ಹಸರಂಗ (38), ಯುಎಇಯ ಜುನೈದ್ ಸಿದ್ದಿಕಿ (40) ಮತ್ತು ಹಾಂಕಾಂಗ್‌ನ ಎಹ್ಸಾನ್ ಖಾನ್ (46) ಸೇರಿದಂತೆ ವಿಶ್ವದ ನಾಲ್ಕು ಬೌಲರ್‌ಗಳು ಏಕೈಕ ಕ್ಯಾಲೆಂಡರ್ ವರ್ಷದಲ್ಲಿ ಅರ್ಷದೀಪ್ ಸಿಂಗ್‌ಗಿಂತ ಹೆಚ್ಚಿನ ಟಿ20ಐ ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಈ ನಾಲ್ವರೂ ಹೆಚ್ಚಿನ ಪಂದ್ಯಗಳನ್ನು ಆಡಿದ್ದಾರೆ. ಈ ಬೌಲರ್‌ಗಳ ಪೈಕಿ ವಾನಿಂದು ಹಸರಂಗ ಮಾತ್ರ ಐಸಿಸಿ ಪೂರ್ಣ ಪ್ರಮಾಣದ ಸದಸ್ಯ ರಾಷ್ಟ್ರದ ಆಟಗಾರ ಎನಿಸಿಕೊಂಡಿದ್ದಾರೆ.
ಕಳೆದ ವರ್ಷ ಅರ್ಷದೀಪ್ ಸಿಂಗ್ ಟಿ20ಐ ವಿಶ್ವಕಪ್‌ನ ಜಂಟಿ ಆತಿಥೇಯ ಅಮೆರಿಕದ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ್ದರು. ಒಂಬತ್ತು ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಪಡೆದಿದ್ದರು. ಅವರು 97 ಟಿ20ಐ ವಿಕೆಟ್‌ಗಳೊಂದಿಗೆ ಈ ಸ್ವರೂಪದಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.