ನವದೆಹಲಿ: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಗೆ 'ಆಪರೇಷನ್ ಸಿಂದೂರ'ದ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡ ಬಳಿಕ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಆರಂಭಿಸಿದ್ದಾರೆ. ಕದನ ವಿರಾಮದ ಬಗ್ಗೆ ಮಹತ್ವದ ಮಾಹಿತಿ ಹಾಗೂ ಮುಂದೆ ಪಾಕ್ ದಾಳಿ ನಡೆಸಿದರೆ ತೆಗೆದುಕೊಳ್ಳುವ ಕಠಿಣ ಕ್ರಮಗಳ ಕುರಿತು ದೇಶದ ಜನತೆಗೆ ಮೋದಿ ಸಂಪೂರ್ಣ ಮಾಹಿತಿ ನೀಡುವ ಸಾಧ್ಯತೆ ಇದೆ.
ಏ. 22ರಂದು ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಪಾಕಿಸ್ತಾನ ನೆಲೆಯ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ 26 ಜನ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂದೂರ‘ವನ್ನು ಮೇ 7ರಿಂದ ಆರಂಭಿಸಿ, ಉಗ್ರರ ನೆಲೆಯನ್ನು ಧ್ವಂಸಗೊಳಿಸಿತ್ತು. ಶನಿವಾರ(ಮೇ 10) ಸಂಜೆ ಕದನ ವಿರಾಮ ಘೋಷಣೆ ಮಾಡಲಾಗಿತ್ತು. ಸದ್ಯ ಗಡಿಯುದ್ದಕ್ಕೂ ಮಿಲಿಟರಿ ನಿಯೋಜನೆ ಯಥಾ ಸ್ಥಿತಿಯಲ್ಲಿದ್ದರೂ ಸೋಮವಾರ ದೈನಂದಿನ ಜೀವನ ಸಹಜ ಸ್ಥಿತಿಗೆ ಮರಳಿದೆ. ವಿಮಾನ ಸೇವೆ ಪುನಾರಾರಂಭಗೊಂಡಿದೆ.