ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ (Mysuru Dasara) ಉದ್ಘಾಟನೆಗೆ ಬಾನು ಮುಷ್ತಾಕ್ (Banu Mushtaq) ಅವರನ್ನು ಕರೆಯಲಾಗಿದೆ. ಇಸ್ಲಾಂ ಅಲ್ಲಾ ಬಿಟ್ಟರೆ ಬೇರೆ ಯಾರೂ ದೇವರಿಲ್ಲಎನ್ನುತ್ತದೆ . ಹಾಗಾದರೆ ಬಾನು ಮುಷ್ತಾಕ್ ಹೇಗೆ ತಾಯಿ ಚಾಮುಂಡಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರಾ? ಅವರ ಧರ್ಮ ಅವರ ಮಾತನ್ನು ಒಪ್ಪುತ್ತಾ ಎಂದು ಬಿಜೆಪಿ ಮುಖಂಡ, ಮಾಜಿ ಸಂಸದ ಪ್ರತಾಪ್ ಸಿಂಹ (Pratap simha) ಪ್ರಶ್ನಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್ ಅವರು ಆಯ್ಕೆಯಾಗಿರುವುದಕ್ಕೆ ಇದೀಗ ವಿರೋಧ ವ್ಯಕ್ತವಾಗುತ್ತಿದೆ. ಬಾನು ಮುಷ್ತಾಕ್ ಬೂಕರ್ ಪ್ರಶಸ್ತಿ ಪಡೆದಿರುವುದಕ್ಕೆ ಅವರನ್ನು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಮಾಡಿ. ಆದರೆ ಧಾರ್ಮಿಕ ನಂಬಿಕೆ ಮತ್ತು ಆಚರಣೆಯ ಪ್ರತೀಕವಾಗಿರುವ ದಸರಾ ಉದ್ಘಾಟನೆಗೆ ಕರೆಯುವುದು ಸೂಕ್ತವಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡ ಬಾನು ಮುಷ್ತಾಕ್ ಆಯ್ಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗುವುದರ ಮೂಲಕ ದಸರಾವನ್ನು ಉದ್ಘಾಟಿಸಬೇಕು. ಬಾನು ಅವರು ಮುಸ್ಲಿಂ ಆಗಿರುವುದರಿಂದ ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ಅದು ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಸಿಟಿ ರವಿ ಸಹ ಮಾತನಾಡಿದ್ದು, ಚಾಮುಂಡಿ ತಾಯಿ ಮೇಲೆ ನಂಬಿಕೆ, ಭಕ್ತಿ ಇದ್ದರೆ ಅವರು ಉದ್ಘಾಟಿಸುತ್ತಾರೆ, ಈ ಬಗ್ಗೆ ನಾನೇನು ಕಮೆಂಟ್ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Mysuru Dasara 2025: ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್‌ರಿಂದ ಈ ಬಾರಿಯ ದಸರಾ ಉದ್ಘಾಟನೆ