Tumkur Protest: ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ; ತುಮಕೂರಿನಲ್ಲಿ ಬೃಹತ್ ಪ್ರತಿಭಟನೆ
Dharmasthala Case: ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ, ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಧಿಗಳ ವೇದಿಕೆ, ಶ್ರೀ ಪುಣ್ಯಕ್ಷೇತ್ರ ಪಾದಯಾತ್ರಿಗಳ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ತುಮಕೂರಿನಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.


ತುಮಕೂರು: ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಯತ್ನಿಸಿ, ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗಡೆ ಅವರ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವವರನ್ನು ಕೂಡಲೇ ಬಂಧಿಸಿ, ತನಿಖೆಗೆ ಒಳಸಪಡಿಸಬೇಕು ಎಂದು ಆಗ್ರಹಿಸಿ ಶ್ರೀ ಧರ್ಮಸ್ಥಳ ಭಕ್ತಾಧಿಗಳ ವೇದಿಕೆ, ಶ್ರೀ ಪುಣ್ಯಕ್ಷೇತ್ರ ಪಾದಯಾತ್ರಿಗಳ ಸಮಿತಿ ಸೇರಿ ವಿವಿಧ ಸಂಘಟನೆಗಳಿಂದ ಬುಧವಾರ ಪ್ರತಿಭಟನೆ (Tumkur Protest) ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ನಗರದ ಟೌನ್‌ಹಾಲ್ ವೃತ್ತದಿಂದ ಎಂ.ಜಿ.ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ಭಕ್ತರು, ಧರ್ಮಸ್ಥಳದ ಹೆಸರಿಗೆ ಚ್ಯುತಿ ಉಂಟು ಮಾಡಲು ಯತ್ನಿಸುತ್ತಿರುವ ಎಲ್ಲಾ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ, ಭಿತ್ತಿ ಪತ್ರ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಟೌನ್‌ಹಾಲ್ ಬಳಿ ಪ್ರತಿಭಟನೆ ಕುರಿತಂತೆ ಮಾತನಾಡಿದ ಅಯ್ಯಪ್ಪಸ್ವಾಮಿ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್, ಕಳೆದ 25-30 ವರ್ಷಗಳಿಂದಲೂ ಧರ್ಮಸ್ಥಳದ ಪರಂಪರೆಯ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಧರ್ಮಸ್ಥಳದ ಹೆಸರು ಹಾಳು ಮಾಡಲು ಇನ್ನಿಲ್ಲದ ಪ್ರಯತ್ನವನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿವೆ. ಭಕ್ತರು ದೇವರ ಸಮಾನ ಎಂದು ಪರಿಗಣಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರ ಬಗ್ಗೆ ಜನರಲ್ಲಿ ತಪ್ಪು ಭಾವನೆ ಬರುವಂತೆ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ. ಸರಕಾರ ಕೂಡಲೇ ಸುಳ್ಳು ಸುದ್ದಿ ಹರಡುತ್ತಿರುವ ಜನರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಸಮಸ್ತ ಹಿಂದೂಗಳ ಪಾಲಿಗೆ ಪವಿತ್ರ ಕ್ಷೇತ್ರವಾಗಿದೆ. ದೇವರ ರೂಪದಲ್ಲಿರುವ ವೀರೇಂದ್ರ ಹೆಗಡೆ ಅವರಿಗೆ ಕೆಟ್ಟ ಹೆಸರು ತರಲು ಕೆಲ ಸಮಾಜ ವಿದ್ರೋಹಿಗಳು ಕಾರ್ಯನಿರ್ವಹಿಸುತ್ತಿದ್ದು, ಇಂತಹವರ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಟ ನಡಸಬೇಕಾಗಿದೆ. ಧರ್ಮಸ್ಥಳದ ಬಗ್ಗೆ ಮಾಡುತ್ತಿರುವ ಅಪಪ್ರಚಾರ ನಿಲ್ಲಬೇಕು. ಪ್ರಕರಣದ ಕುರಿತು ತನಿಖೆ ಸರಿಯಾದ ರೀತಿಯಲ್ಲಿ ನಡೆದು, ಸತ್ಯ ಹೋರ ಬರುವ ಮೂಲಕ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.

ಬೆಳ್ಳಾವೆಯ ಶ್ರೀಕಾರದ ವೀರಬಸವಸ್ವಾಮೀಜಿ ಮಾತನಾಡಿ, ಪುಣ್ಯಕ್ಷೇತ್ರಗಳ ಬಗ್ಗೆ ಮಾಡುವ ಅಪಪ್ರಚಾರವನ್ನು ನಾವೆಲ್ಲರೂ ಖಂಡಿಸಬೇಕಾಗಿದೆ. ಮಠ, ಮಾನ್ಯಗಳು ಒಂದು ಸರಕಾರಕ್ಕೆ ಪರ್ಯಾಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿವೆ. ಇದನ್ನು ಸಹಿಸಲಾಗದೆ ಕೆಲವರು, ಶ್ರೀಕ್ಷೇತ್ರದ ಧರ್ಮಸ್ಥಳದ ಬಗ್ಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇದರ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಟ ನಡೆಸುವ ಮೂಲಕ ಸ್ವಹಿತಾಸಕ್ತಿಯ ಜನರ ಸುಳ್ಳು ಆರೋಪಗಳಿಗೆ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಮುಖಂಡ ಆರ್.ಕಾಮರಾಜು, ವಿಜಯಭಾಸ್ಕರ್ ಮಾತನಾಡಿದರು. ಪ್ರತಿಭಟನೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಕ್ತವೃಂದ ಹಾಗೂ ವಿವಿಧ ಸಂಘಟನೆಗಳ ಮುಖಂಡರುಗಳು, ಸಾರ್ವಜನಿಕರು, ಮಹಿಳೆಯರು, ವಿದ್ಯಾರ್ಥಿನಿಯರುಗಳು ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ | BY Vijayendra: ಆ.17ರಂದು ಬಿಜೆಪಿ ಶಾಸಕರು, ಹಿರಿಯರ ತಂಡ ಧರ್ಮಸ್ಥಳಕ್ಕೆ ಭೇಟಿ: ಬಿ.ವೈ. ವಿಜಯೇಂದ್ರ