ED Raid: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣ: ಮಾಜಿ ಅಧ್ಯಕ್ಷ ಮಂಜುನಾಥ್ ಗೌಡ ಮನೆ ಸೇರಿ 3 ಕಡೆ ಇಡಿ ದಾಳಿ
2014ರಲ್ಲಿ ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವು ಇಟ್ಟುಕೊಂಡು 62 ಕೋಟಿ ರೂಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿ ನಡೆದಿದೆ. ಅಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಂಜುನಾಥ್ ಗೌಡ ಹಾಗೂ ಮ್ಯಾನೇಜರ್ ಆಗಿದ್ದ ಶೋಭಾ ಮನೆ ಮೇಲೆ ಇಡಿ ದಾಳಿ ನಡೆದಿದೆ.


ಬೆಂಗಳೂರು: ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ನಲ್ಲಿ (Shivamogga DCC bank scam) ನಡೆದ ಚಿನ್ನಾಭರಣ ಅಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಶಿವಮೊಗ್ಗ ಮತ್ತು ಬೆಂಗಳೂರಿನಲ್ಲಿ (Bengaluru) ಜಾರಿ ನಿರ್ದೇಶನಾಲಯ (ED raid) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬ್ಯಾಂಕಿನ ಮಾಜಿ ಅಧ್ಯಕ್ಷ ಮಂಜುನಾಥ ಗೌಡರಿಗೆ ಇಡಿ ದಾಳಿ ಶಾಕ್ ನೀಡಿದೆ. ಬೆಂಗಳೂರಿನಲ್ಲಿ ಅವರ ನಿವಾಸಕ್ಕೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಗೌಡರನ್ನು ಅಧಿಕಾರಿಗಳು ಆಪೆಕ್ಸ್ ಬ್ಯಾಂಕ್ ಗೆಸ್ಟ್ ಹೌಸ್‌ನಲ್ಲಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಸುಮಾರು 10ಕ್ಕೂ ಹೆಚ್ಚು ಅಧಿಕಾರಿಗಳಿಂದ ಮಂಜುನಾಥ ಗೌಡ ವಿಚಾರಣೆ ನಡೆಯುತ್ತಿದೆ.
2014ರಲ್ಲಿ ಶಿವಮೊಗ್ಗದ ಡಿಸಿಸಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವು ಇಟ್ಟುಕೊಂಡು 62 ಕೋಟಿ ರೂಪಾಯಿ ಸಾಲ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಾಳಿ ನಡೆದಿದೆ. ಅಂದು ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಶೋಭಾ ಮನೆ ಮೇಲೆ ಕೂಡ ಇಡಿ ದಾಳಿ ಮಾಡಿದೆ. ಶಿವಮೊಗ್ಗದ ಗೋಪಾಲ ಗೌಡ ಬಡಾವಣೆಯಲ್ಲಿರುವ ಶೋಭಾ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ. 8ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದ್ದು, ಪರಿಶೀಲನೆ ನಡೆಸಲಾಗುತ್ತಿದೆ.
2014ರ ಜೂನ್‌ನಲ್ಲಿ ಶಿವಮೊಗ್ಗದ ಗಾಂಧಿ ಬಜಾರ್ ನಗರದಲ್ಲಿರುವ ಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಹಗರಣ ನಡೆದಿತ್ತು. ಆ ವೇಳೆ ಡಿಸಿಸಿ ಬ್ಯಾಂಕ್ ಶಾಖೆಯ ಮ್ಯಾನೇಜರ್ ಶೋಭಾ ಆಗಿದ್ದರು. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆ ನಡೆಸಿ ಪೊಲೀಸರು 2014ರ ಅ.18ರಂದು ಚಾರ್ಜ್ಶೀಟ್ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯಕ್ಕೆ ಮೊದಲ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಂಜುನಾಥ್ ಗೌಡಗೆ ಇಡಿ ಸಮನ್ಸ್ ಜಾರಿಗೊಳಿಸಿತ್ತು. ಕಳೆದ ವಾರವಷ್ಟೇ ಇಡಿ ಸಮನ್ಸ್ ಪ್ರಶ್ನಿಸಿದ್ದ ಮಂಜುನಾಥ್ ಗೌಡ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಬ್ಯಾಂಕಿನ ವಾಹನ ಚಾಲಕನಾಗಿದ್ದ ಶಿವಕುಮಾರ್ ಮನೆಯ ಮೇಲೂ ಇಡಿ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿರುವ ಇಡಿ ಅಧಿಕಾರಿಗಳ ತಂಡ ಇದೀಗ ಪರಿಶೀಲನೆ ನಡೆಸುತ್ತಿದೆ.
ಇದನ್ನೂ ಓದಿ: ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದಿದ್ದರೆ ಬ್ಯಾಂಕ್‌ಗಳಿಗೆ ದಂಡ: ಭಾರತೀಯ ರಿಸರ್ವ್ ಬ್ಯಾಂಕ್