Youtuber Sameer: ಯೂಟ್ಯೂಬರ್ ಸಮೀರ್ ಮನೆ ಬಾಗಿಲಿಗೆ ಪೊಲೀಸ್ ನೋಟೀಸ್, ಬಂಧನ ಭೀತಿಯಿಂದ ನಾಪತ್ತೆ
SIT: ಬಂಧನ ಭೀತಿಯಲ್ಲಿರುವ ಸಮೀರ್ ಈಗ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜಾಮೀನು ಪಡೆದಿರುವ ಸಮೀರ್ ನಾಳೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕಿದೆ. ನಾಳೆ ವಿಚಾರಣೆಗೆ ಹಾಜರಾಗದೇ ಇದ್ದರೆ ಕೋರ್ಟ್ ಆದೇಶ ಉಲ್ಲಂಘನೆಯಾಗಿ ನ್ಯಾಯಾಂಗ ನಿಂದನೆಯಾಗಲಿದೆ.

ಸಮೀರ್

ಬೆಂಗಳೂರು : ಧರ್ಮಸ್ಥಳದ (Dharmasthala case) ವಿರುದ್ಧ ಅಪಪ್ರಚಾರ ಆರೋಪದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಸಮೀರ್ (Youtuber Sameer) ಎಂಬಾತನಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪೊಲೀಸರು ಬರುವ ಸುಳಿವು ತಿಳಿದು ಸಮೀರ್ ಪರಾರಿಯಾಗಿದ್ದು, ಆತನ ಮನೆಗೆ ಪೊಲೀಸರು ನೋಟಿಸ್ ಅಂಟಿಸಿದ್ದಾರೆ. ಇದಲ್ಲದೆ, ಧರ್ಮಸ್ಥಳ ದೇವಸ್ಥಾನದ ವಿರುದ್ಧ ಹಸಿ ಸುಳ್ಳುಗಳ ಎಐ ವಿಡಿಯೋ ಮಾಡಿದ್ದ ಯೂಟ್ಯೂಬರ್ ಸಮೀರ್ ಮೇಲೆ ಮತ್ತೆ ಮೂರು ಎಫ್‌ಐಆರ್ (FIR) ದಾಖಲಾಗಿವೆ.
ಆಗಸ್ಟ್ 24ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಯೂಟ್ಯೂಬರ್ ಸಮೀರ್‌ಗೆ ನೋಟಿಸ್ ನೀಡಿದ್ದಾರೆ. ಎಐ ವೀಡಿಯೋ ಸೃಷ್ಟಿಸಿ ಗಲಭೆಗೆ ಪ್ರಚೋದನೆ ನೀಡಿದ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೋ ಪ್ರಕರಣ ಯೂಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ದಾಖಲಾಗಿತ್ತು. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಆಗಸ್ಟ್ 19ರಂದು ಮಂಗಳೂರಿನ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಈತ ಅರ್ಜಿ ಸಲ್ಲಿಸಿದ್ದ. ಈ ಪ್ರಕರಣದಲ್ಲಿ ಯೂಟ್ಯೂಬರ್ ಸಮೀರ್ ಎಂ.ಡಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಒಂದು ಪ್ರಕರಣದಲ್ಲಿ ಮಂಗಳೂರು ನ್ಯಾಯಾಲಯದಿಂದ ಜಾಮೀನು ಸಿಕ್ಕ ಬಳಿಕ ಭಂಡ ಧೈರ್ಯ ತಂದುಕೊಂಡಿದ್ದ ಸಮೀರ್ ಮತ್ತೆ ಲೈವ್‌ಗೆ ಬಂದಿದ್ದ. ಈಗಾಗಲೇ ಪೊಲೀಸರು ಈತನ ನಿವಾಸಕ್ಕೂ ತೆರಳಿ ನೋಟಿಸ್ ಅಂಟಿಸಿದ್ದಾರೆ. ಬಂಧನ ಭೀತಿಯಲ್ಲಿರುವ ಸಮೀರ್ ಈಗ ಯಾರ ಸಂಪರ್ಕಕ್ಕೆ ಸಿಗುತ್ತಿಲ್ಲ. ಜಾಮೀನು ಪಡೆದಿರುವ ಸಮೀರ್ ನಾಳೆ ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾಗಬೇಕಿದೆ. ಒಂದು ವೇಳೆ ನಾಳೆ ವಿಚಾರಣೆಗೆ ಹಾಜರಾಗದೇ ಇದ್ದರೆ ಕೋರ್ಟ್ ಆದೇಶ ಉಲ್ಲಂಘನೆಯಾಗಿ ನ್ಯಾಯಾಂಗ ನಿಂದನೆಯಾಗಲಿದೆ.
ಈ ನಡುವೆ ಇನ್ನೂ ಎರಡು ಬೆಳವಣಿಗೆಗಳು ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ಆಗಿವೆ. ನನ್ನ ಮಗಳು ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎಂದು ಹೇಳಿಕೊಂಡು ಬಂದಿದ್ದ ಸುಜಾತ ಭಟ್ ಎಂಬ ಮಹಿಳೆ ಇದೀಗ, ನನಗೆ ಮಗಳೇ ಇಲ್ಲ, ಅನನ್ಯಾ ಭಟ್ ಪಾತ್ರವನ್ನು ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಹೇಳಿದ್ದಂತೆ ನಾನು ಹೇಳಿದ್ದೆ ಎಂದು ಹೇಳಿ ಉಲ್ಟಾ ಹೊಡೆದಿದ್ದಾರೆ.
ಇನ್ನೊಂದು ಬೆಳವಣಿಗೆಯಲ್ಲಿ, ಧರ್ಮಸ್ಥಳದಲ್ಲಿ ತಾನು ಹೂತು ಹಾಕಿದ ಹೆಣಗಳನ್ನು ತೋರಿಸುತ್ತೇನೆ ಎಂಧೂ ಬಂದಿದ್ದ ಮುಸುಕುಧಾರಿಯನ್ನು ವಿಶೇಷ ತನಿಖಾ ತಂಡ (SIT) ನಿನ್ನೆ ರಾತ್ರಿಯಿಡೀ ವಿಚಾರಣೆಗೆ ಒಳಪಡಿಸಿತು. ಈತ ಹೇಳುತ್ತಿರುವುದೆಲ್ಲಾ ಸುಳ್ಳು ಎಂದು ಗೊತ್ತಾಗಿರುವ ಹಿನ್ನೆಲೆಯಲ್ಲಿ, ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೊಂದು ಕಡೆ ಜಾರಿ ನಿರ್ದೇಶನಾಲಯ (ED) ಕೂಡ ಧರ್ಮಸ್ಥಳ ವಿರೋಧಿ ಹೋರಾಟಗಾರರ ದಾಖಲೆಗಳನ್ನು ಕೆದಕಲು ಆರಂಭಿಸಿದೆ.
ಇದನ್ನೂ ಓದಿ: Dharmasthala Case: ಯೂಟ್ಯೂಬರ್ ಸಮೀರ್ ಮನೆ ಸುತ್ತುವರಿದ ಪೊಲೀಸರು, ಸಮೀರ್ ಪರಾರಿ