ಬೆಳಗಾವಿ: ಜಿಲ್ಲೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದೆ. ಕಾರು- ಕೆಎಸ್ಆರ್‌ಟಿಸಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟು, ಒಬ್ಬ ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ (Athani Accident) ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ. ಕೊಲ್ಹಾಪುರ ಮಹಾಲಕ್ಷ್ಮಿ ದೇವಿ ದರ್ಶನ ಪಡೆದು ಕಾರಿನಲ್ಲಿ ವಾಪಸ್ಸಾಗುತ್ತಿದ್ದಾಗ ಈ ದುರಂತ ನಡೆದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮುರಗುಂಡಿ ಬಳಿ ದುರ್ಘಟನೆ ನಡೆದಿದೆ. ಮೃತರೆಲ್ಲರೂ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನವರು ಎಂದು ತಿಳಿದು ಬಂದಿದೆ. ಮೃತರನ್ನು ಗಿರೀಶ ಬಳ್ಳೋರಗಿ, ರಾಹುಲ್ ಮ್ಯಾಲೇಶಿ, ಸಂಗು ಅಮರಗೊಂಡ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ರಾಧಿಕಾ ಮ್ಯಾಲೇಶಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಇರಿದು ಪತ್ನಿಯನ್ನೇ ಕೊಲೆಗೈದ ಪತಿ!
ತುಮಕೂರು: ತುಮಕೂರಿನಲ್ಲಿ ಭೀಕರ ಕೊಲೆ ನಡೆದಿದ್ದು, ಪತಿ-ಪತ್ನಿ ನಡುವಿನ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ (Tumkur Murder Case) ನಡೆದಿದೆ. ಜಗಳದ ವೇಳೆ ಪತಿ ಚಾಕುವಿನಿಂದ 20ಕ್ಕೂ ಹೆಚ್ಚು ಬಾರಿ ಪತ್ನಿಗೆ ಇರಿದು ಕೊಲೆ ಮಾಡಿರುವುದು ತುಮಕೂರಿನ ಅಂತರಸನಹಳ್ಳಿಯಲ್ಲಿ ನಡೆದಿದೆ. ಗೀತಾ (20) ಕೊಲೆಯಾದ ಮಹಿಳೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ತುಮಕೂರು ಹೊರವಲಯದ ಅಂತರಸನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಎರಡು ವರ್ಷದ ಹಿಂದೆಯಷ್ಟೇ ನವೀನ್‌ನನ್ನು ಗೀತಾ ಮದುವೆಯಾಗಿದ್ದಳು. ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದರು. ಮನೆಯಲ್ಲಿ ದಂಪತಿಯ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಭಾನುವಾರ ಬೆಳಗ್ಗೆ ಮನೆಯ ಮಾಲೀಕ ಬಾಡಿಗೆ ಪಡೆಯಲೆಂದು ಮನೆಯ ಬಳಿ ಬಂದಿದ್ದರು. ಈ ವೇಳೆ ರಕ್ತದ ಮಾಡಿವಿನಲ್ಲಿ ನವೀನ್ ಪತ್ನಿ ಗೀತಾ ಬಿದ್ದಿದ್ದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.
ಈ ಸುದ್ದಿಯನ್ನೂ ಓದಿ: Self Harming: ಶುಲ್ಕ ನೀಡುವಂತೆ ಶಾಲೆಯಲ್ಲಿ ಕಿರುಕುಳ; ಮನನೊಂದು SSLC ವಿದ್ಯಾರ್ಥಿನಿ ಆತ್ಮಹತ್ಯೆ
ತಕ್ಷಣ ಮನೆಯ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕುಡಿದ ಮತ್ತಿನಲ್ಲಿ ನವೀನ್ ಪತ್ನಿ ಗೀತಾಳನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕುತ್ತಿಗೆ ಮುಖಕ್ಕೆ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ನವೀನ್ ಇರಿದಿದ್ದಾನೆ. ಸದ್ಯ ಪೊಲೀಸರು ಆರೋಪಿ ನವೀನ್ ಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.