ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ನಡೆಯುವ ಜಾಲಿವುಡ್​ ಸ್ಟುಡಿಯೋಸ್​ಗೆ ಬೀಗ; ಮನೆಯಿಂದ ಹೊರಬಂದ ಸ್ಪರ್ಧಿಗಳು; ಶೋ ಕಥೆ ಏನು?

ಸೆಪ್ಟೆಂಬರ್‌ 28ರಂದು ಆರಂಭವಾದ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ಕ್ಕೆ ಇದೀಗ ವಿಘ್ನ ಎದುರಾಗಿದೆ. ಶೋ 2ನೇ ವಾರಕ್ಕೆ ಕಾಲಿಟ್ಟ ಬೆನ್ನಲ್ಲೇ ಅಂತ್ಯವಾಗುವ ಆತಂಕ ಮೂಡಿದೆ. ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಶೋ ನಡೆಯುತ್ತಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋಸ್ & ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ.ಗೆ ಅಧಿಕಾರಿಗಳು ಬೀಗ ಜಡಿದಿದ್ದು, 17 ಸ್ಪರ್ಧಿಗಳನ್ನು ಬಿಗ್‌ ಬಾಸ್‌ ಮನೆಯಿಂದ ಹೊರಗೆ ಕರೆ ತರಲಾಗಿದೆ.

ಬೆಂಗಳೂರು: ಸೆಪ್ಟೆಂಬರ್‌ 28ರಂದು ಕಿಚ್ಚ ಸುದೀಪ್‌ ಸಾರಥ್ಯದಲ್ಲಿ ಅದ್ಧೂರಿಯಾಗಿ ಆರಂಭವಾದ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ಕ್ಕೆ ಇದೀಗ ವಿಘ್ನ ಎದುರಾಗಿದೆ (Bigg Boss Kannada 12). ಸ್ಪರ್ಧಿಗಳ ಕಾರಣಕ್ಕೆ ಗಮನ ಸೆಳೆದ ಶೋ 2ನೇ ವಾರಕ್ಕೆ ಕಾಲಿಟ್ಟ ಬೆನ್ನಲ್ಲೇ ಅಂತ್ಯವಾಗುವ ಆತಂಕ ಮೂಡಿದೆ. ನಿಯಮ ಉಲ್ಲಂಘಿಸಿರುವ ಆರೋಪ ಕೇಳಿ ಬಂದ ಬೆನ್ನಲ್ಲೇ ಶೋ ನಡೆಯುತ್ತಿರುವ ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಜಾಲಿವುಡ್ ಸ್ಟುಡಿಯೋಸ್ & ಎಂಟರ್‌ಟೈನ್‌ಮೆಂಟ್‌ ಪ್ರೈ.ಲಿ.ಗೆ ಅಧಿಕಾರಿಗಳು ಬೀಗ ಜಡಿದಿದ್ದು, 17 ಸ್ಪರ್ಧಿಗಳನ್ನು ಬಿಗ್‌ ಬಾಸ್‌ ಮನೆಯಿಂದ ಹೊರಗೆ ಕರೆತಂದು ಥಿಯೇಟರ್‌ನಲ್ಲಿ ಕೂರಿಸಲಾಗಿದೆ.

ತ್ಯಾಜ್ಯ ನೀರು ಸಂಸ್ಕಾರಣಾ ಘಟಕ ನಿರ್ಮಾಣ ಮಾಡದಿರುವುದಕ್ಕೆ ಬಿಗ್ ಬಾಸ್ ಮನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಕಳುಹಿಸಲಾಗಿತ್ತು. ನೋಟಿಸ್‌ಗೆ ಸರಿಯಾದ ಪ್ರತಿಕ್ರಿಯೆ ನೀಡದ ಹಿನ್ನೆಲೆ ಜಾಲಿವುಡ್ ಸ್ಟುಡಿಯೋಸ್‌ಗೆ ರಾಮನಗರ ತಹಶೀಲ್ದಾರ್‌ ತೇಜಸ್ವಿನಿ ಅವರ ಜತೆ ಅಧಿಕಾರಿಗಳು ತೆರಳಿ ಮಂಗಳವಾರ (ಅಕ್ಟೋಬರ್‌ 7) ಬೀಗ ಹಾಕಿದ್ದಾರೆ.

ಜಾಲಿವುಡ್ ಸ್ಟುಡಿಯೋಸ್ ಬೀಗ ಜಡಿದ ಅದಿಕಾರಿಗಳು; ಇಲ್ಲಿದೆ ವಿಡಿಯೊ:



ಈ ಸುದ್ದಿಯನ್ನೂ ಓದಿ: Bigg Boss Kannada 12: ಬಿಗ್‌ ಬಾಸ್‌ ಶೋಗೆ ಬಿಗ್‌ ಸಂಕಷ್ಟ, ಪ್ರತಿಭಟನೆ, ಪೊಲೀಸ್‌ ಅನುಮತಿಯೂ ಇಲ್ಲ

ಅಧಿಕಾರಿಗಳು ಮನೆಯೊಳಗೆ ಬರುವ ಮೊದಲೇ ʼʼಎಲ್ಲರೂ ಲಿವಿಂಗ್ ಏರಿಯಾಗೆ ಬನ್ನಿʼʼ ಎಂದು ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಸೂಚಿಸಿದ್ದಾರೆ. ʼʼಯಾರೂ ಹೆದರುವ ಅವಶ್ಯಕತೆ ಇಲ್ಲ. ಈ‌ ನ್ಯೂಸ್‌ನಿಂದ ನಿಮಗೆ ಬೇಸರ ಕೂಡ ಆಗಬಹುದು. ಆದರೆ ಇದು ಸ್ವಲ್ಪ ದಿನ ಮಾತ್ರ. ಈ ಕೂಡಲೇ ಮನೆ ಖಾಲಿ ಮಾಡಿ ಅಂತ ಹೇಳಿರೋ ಮೆಸೇಜ್ ಇದೆʼʼ ಎಂದು ಹೇಳಿದ್ದಾರೆ. ಅದರಂತೆ ಎಲ್ಲ ಸ್ಪರ್ಧಿಗಳನ್ನು ಮನೆಯಿಂದ ಹೊರಗೆ ಕರೆತಂದು ಥಿಯೇಟರ್‌ನಲ್ಲಿ ಕೂರಿಸಲಾಗಿದೆ.

ಮೊದಲ ಬಾರಿಗೆ ಸ್ಪರ್ಧಿಗಳಿಗೆ ಇಂತಹ ಸನ್ನಿವೇಶ ಎದುರಾಗಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಜಾಲಿವುಡ್‌ ಸ್ಟುಡಿಯೋಸ್‌ನ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. ಒಟ್ಟಿನಲ್ಲಿ ಕಲರ್ ಫುಲ್ ಆಗಿದ್ದ ಬಿಗ್ ಬಾಸ್ ಮನೆಗೆ ಕಗ್ಗತ್ತಲು ಆವರಿಸಿದೆ. ಕಾರುಗಳ ಮೂಲಕ ಸ್ಪರ್ಧಿಗಳು ಹೊರ ಬರಲಿದ್ದಾರೆ ಎನ್ನಲಾಗಿದೆ. ಖಾಸಗಿ ಹೊಟೇಲ್‌ನಲ್ಲಿ ಸ್ಪರ್ಧಿಗಳು ವಾಸ್ತವ್ಯ ಮಾಡಲಿದ್ದು, ಒಂದು ವೇಳೆ ಸಮಸ್ಯೆ ಸರಿಹೋದರೆ ಮತ್ತೆ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ. ಬಿಗ್ ಬಾಸ್ ಪ್ರಸಾರ ನಾಳೆಯಿಂದ ಇರುತ್ತಾ ಎನ್ನುವ ಕುತೂಹಲ ಸದ್ಯ ಮನೆ ಮಾಡಿದೆ.

ಏನಿದು ವಿವಾದ?

‘ಬಿಗ್​ ಬಾಸ್ ಕನ್ನಡ ಸೀಸನ್ 12’ ಶೋ ಆಯೋಜಕರು ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (Pollution Control Board) ನೋಟಿಸ್​ ನೀಡಿತ್ತು. ಜತೆಗೆ ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ಸೂಚಿಸಿತ್ತು. ಜಾಲಿವುಡ್ ಸ್ಟುಡಿಯೋದಲ್ಲಿ ನಿರ್ಮಿಸಿರುವ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು, ನೂರಾರು ಮಂದಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಸಾಕಷ್ಟು ತಾಜ್ಯ ಉಂಟಾಗುತ್ತದೆ. ಆದರೆ ಸಮರ್ಪಕ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎನ್ನುವ ದೂರು ಕೇಳಿ ಬಂದಿದೆ.

ಜಾಲಿವುಡ್‌ ಸ್ಟುಡಿಯೋ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆದಿಲ್ಲ ಎನ್ನಲಾಗಿದ್ದು, ಈ ಕಾರಣದಿಂದ ಶೋ ಆಯೋಜಕರಿಗೆ ನೋಟಿಸ್ ನೀಡಿ ಶೋ ಬಂದ್ ಮಾಡುವಂತೆ ಸೂಚಿಸಲಾಗಿತ್ತು. ಆದರೆ ಈ ನೋಟಿಸ್‌ಗೆ ಅಧಿಕೃತರು ಉತ್ತರ ನೀಡಿಲ್ಲ ಎನ್ನಲಾಗಿದೆ.

ಜಾಲಿವುಡ್ ಸ್ಟುಡಿಯೋದಿಂದ ದೊಡ್ಡ ಪ್ರಮಾಣದ ತಾಜ್ಯ ನೀರು ಹೊರಬರುತ್ತಿದೆ. ಅದನ್ನು ಸರಿಯಾಗಿ ಸಂಸ್ಕರಿಸದ ಕಾರಣ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ತ್ಯಾಜ್ಯವನ್ನು ಕೂಡ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂಬ ಆರೋಪ ಎದ್ದಿದೆ.