ಬೆಂಗಳೂರು: ಭಾರತೀಯ ಚಿತ್ರರಂಗದಲ್ಲೇ ಮತ್ತೊಂದು ಇತಿಹಾಸ ನಿರ್ಮಿಸಲು ಕನ್ನಡ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ (Hombale Films) ಸಜ್ಜಾಗಿದೆ. 2022ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಜತೆಗೆ ರಾಷ್ಟ್ರ ಪ್ರಶಸ್ತಿಗಳನ್ನೂ ಮುಡಿಗೇರಿಸಿಕೊಂಡಿದ್ದ ʼಕಾಂತಾರʼ (Kantara) ಚಿತ್ರದ ಪ್ರೀಕ್ವೆಲ್ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಅನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಿಸಿದ್ದು, ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಸಜ್ಜಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಈಗಾಗಲೇ ಕುತೂಹಲ ಕೆರಳಿಸಿದೆ. ಈ ಚಿತ್ರ ಬಿಡುಗಡೆಯ ಹೊಸ್ತಿಲಲ್ಲೇ ಹೊಂಬಾಳೆ ಪಿಲ್ಮ್ಸ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದೆ. ಬ್ರ್ಯಾಂಡ್ಸ್ ಆಫ್ ಭಾರತ್ (Brands Of Bharat) ಹೆಸರಿನಲ್ಲಿ ದೇಸಿ ಉತ್ಪನ್ನಗಳಿಗೆ ಉತ್ತೇಜನ ನೀಡಲು ಮುಂದಾಗಿದೆ.
ಹೊಂಬಾಳೆ ಫಿಲ್ಮ್ಸ್ ಈಗಾಗಲೇ ಹೊಂಬಾಳೆವರ್ಸ್ (HombaleVerse) ಹೆಸರಿನಲ್ಲಿ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಟೀಶರ್ಟ್, ಹೂಡಿ ಮುಂತಾದ ವಸ್ತುಗಳನ್ನು ಆನ್‌ಲೈನ್ ಮೂಲಕ ಗ್ರಾಹಕರಿಗೆ ತಲುಪಿಸುತ್ತಿದೆ. ಇದೀ ಹೊಂಬಾಳೆ ಫಿಲ್ಮ್ಸ್ ತನ್ನ ಹೊಂಬಾಳೆವರ್ಸ್‌ನಲ್ಲಿ ನಿಮ್ಮ ಉತ್ಪನ್ನಗಳನ್ನೂ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತಿದೆ. ಹೌದು, ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಈ ಬಗ್ಗೆ ಶುಕ್ರವಾರ ಅಧಿಕೃತ ಘೋಷಣೆ ಹೊರಡಿಸಿದೆ. ನಿಮ್ಮ ಹೆಸರು ನೋಂದಾಯಿಸಲು ಆಗಸ್ಟ್ 20 ಕೊನೆಯ ದಿನ.
This Independence Day, we plan to honour the spirit of India by supporting brands born from the soil of our land.
— Hombale Films (@hombalefilms) August 15, 2025
Hombale Films presents #BrandsOfBharat – an initiative for Made in India brands to be featured on the HombaleVerse platform.
Only a limited number of brands will be… pic.twitter.com/4W2TQSFOOD
ಹೊಂಬಾಳೆ ಫಿಲ್ಮ್ಸ್ ಪೋಸ್ಟ್‌ನಲ್ಲಿ ಏನಿದೆ?
ಈ ಬಗ್ಗೆ ಹೊಂಬಾಳೆ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಣೆ ಹೊರಡಿಸಿದೆ. ʼʼಈ ಸ್ವಾತಂತ್ರ್ಯ ದಿನದಂದು ನಮ್ಮ ನೆಲದ ಮಣ್ಣಿನಿಂದ ಹುಟ್ಟಿದ ಬ್ರ್ಯಾಂಡ್‌ಗಳನ್ನು ಬೆಂಬಲಿಸುವ ಮೂಲಕ ಭಾರತವನ್ನು ಗೌರವಿಸಲು ನಾವು ಮುಂದಾಗಿದ್ದೇವೆʼʼ ಎಂದು ತಿಳಿಸಿದೆ.
ʼʼಹೊಂಬಾಳೆ ಫಿಲ್ಮ್ಸ್ ಬ್ರ್ಯಾಂಡ್ಸ್ ಆಫ್ ಭಾರತ್ ಎನ್ನುವ ಯೋಜನೆಯ ಮೂಲಕ ಭಾರತದ ದೇಸಿ ಉತ್ಪನ್ನಗಳನ್ನು ಹೊಂಬಾಳೆವರ್ಸ್ ಫ್ಲ್ಯಾಟ್‌ಫಾರ್ಮ್‌ನಲ್ಲಿ ದೊರೆಯುವಂತೆ ಮಾಡಲಿದೆ. ಸೀಮಿತ ಸಂಖ್ಯೆಯ ಬ್ರ್ಯಾಂಡ್‌ಗಳಿಗೆ ಮಾತ್ರ ಈ ಅವಕಾಶʼʼ ಎಂದು ಹೇಳಿದೆ.
ಷರತ್ತುಗಳು
- ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ದೇಸಿ ಉತ್ಪನ್ನಗಳಾಗಿರಬೇಕು.
- ಉತ್ಪನ್ನಗಳು ಭಾರತದಲ್ಲೇ ತಯಾರಾಗಬೇಕು.
- ʼಕಾಂತಾರʼ ಜಗತ್ತಿನಿಂದ ಸ್ಫೂರ್ತಿಗೊಂಡ ವಸ್ತುಗಳಾಗಿರಬೇಕು.
- ಮಾರಾಟ ಮಾಡಬಹುದಾದ ಉತ್ಪನ್ನಗಳು: ಬುಡಕಟ್ಟು ಸಮುದಾಯದವರು ಧರಿಸುವ ಬಟ್ಟೆ, ಆಲಂಕಾರಿಕ ಉತ್ಪನ್ನಗಳು, ಮಸಾಲೆಗಳು, ಪ್ರಕೃತಿಸ್ನೇಹಿ ವಸ್ತುಗಳು, ಮಕ್ಕಳ ಉತ್ಪನ್ನಗಳು, ಆಧ್ಯಾತ್ಮಕ್ಕೆ ಸಂಬಂಧಿಸಿದ ವಸ್ತುಗಳು.
ಆಸಕ್ತರು ಆಗಸ್ಟ್ 20ರ ರಾತ್ರಿ 10:10ರೊಳಗೆ ತಮ್ಮ ಹೆಸರು ನೋಂದಾಯಿಸಬೇಕು.
ನೋಂದಾಯಿಸಲು ವೆಬ್‌ಸೈಟ್ ವಿಳಾಸ: www.kantara.world ಸಂಪರ್ಕಿಸಿ.
ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನಮ್ಮ ನೆಲದ ಉತ್ಪನ್ನಗಳಿಗೆ ಉತ್ತೇಜನ ನೀಡಲು ಮುಂದಾಗಿರುವುದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ʼಕಾಂತಾರ: ಚಾಪ್ಟರ್ 1ʼ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸಿದ್ದು, ವಿವಿಧ ಭಾಷೆಗಳಲ್ಲಿ ತೆರೆಗೆ ಬರಲಿದೆ. ಅದಕ್ಕೂ ಮುನ್ನವೇ ದೇಸಿ ಉತ್ಪನ್ನಗಳ ಮಾರಾಟಕ್ಕೆ ಮುಂದಾಗಿರುವುದು ಗಮನ ಸೆಳೆದಿದೆ.