ಬೆಂಗಳೂರು: ಬಾಕ್ಸ್ ಆಫೀಸ್‌ನಲ್ಲಿ ಹೊಸದೊಂದು ಇತಿಹಾಸ ಸೃಷ್ಟಿಗೆ ಸಮಯ ಸನ್ನಿಹಿತವಾಗಿದೆ. ಈ ವರ್ಷದ ಬಹುನಿರೀಕ್ಷಿತ ಚಿತ್ರ ʼಕಾಂತಾರ: ಚಾಪ್ಟರ್ 1' (Kantara Chapter 1) ಅಕ್ಟೋಬರ್ 2ರಂದು ವಿಶ್ವಾದ್ಯಂತ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ (Kantara Chapter 1 Advance Booking) ಚಿತ್ರ ಕೋಟಿ ಕೋಟಿ ರೂ. ಬಾಚಿಕೊಂಡಿದ್ದು, ರಿಲೀಸ್ ಆದ ಬಳಿಕ ಯಾವೆಲ್ಲ ದಾಖಲೆ ಬ್ರೇಕ್ ಮಾಡಲಿದೆ ಎನ್ನುವ ಚರ್ಚೆ ಆರಂಭವಾಗಿದೆ. ಈಗಾಗಲೇ ಚಿತ್ರದ ಒಟಿಟಿ ರೈಟ್ಸ್, ಡಿಜಿಟಲ್ ಹಕ್ಕು ಮಾರಾಟದ ಮೂಲಕ ಬಜೆಟ್‌ನಷ್ಟು ಹಣ ಮರಳಿ ಬಂದಿದೆ ಎನ್ನಲಾಗಿದ್ದು, ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎನ್ನುವ ಕುತೂಹಲ ಮೂಡಿದೆ.
ಹೊಂಬಾಳೆ ಫಿಲ್ಮ್ಸ್-ರಿಷಬ್ ಶೆಟ್ಟಿ ಕಾಂಬಿನೇಷನ್‌ನಲ್ಲಿ 2022ರಲ್ಲಿ ತೆರೆಗೆ ಬಂದ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, 3 ವರ್ಷಗಳ ಹಿಂದೆಯೇ ಘೋಷಣೆಯಾಗಿತ್ತು. ಅಂದಿನಿಂದಲೇ ಜಾಗತಿಕ ಸಿನಿಪ್ರಿಯರ ಕುತೂಹಲ ಕೆರಳಿಸಿದ್ದ ಈ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಕೆಲವು ದಿನಗಳ ಹಿಂದೆ ಆರಂಭವಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಸುದ್ದಿಯನ್ನೂ ಓದಿ: Kantara: Chapter 1: ದೇಶಾದ್ಯಂತ ಏಳು ಸಾವಿರ ಸ್ಕ್ರೀನ್ ನಲ್ಲಿ ಕಾಂತಾರ ಚಾಪ್ಟರ್ 1 ರಿಲೀಸ್- ಟಿಕೆಟ್ ದರ ಕಂಡ್ರೆ ಶಾಕ್ ಆಗೋದು ಗ್ಯಾರಂಟಿ!
ಕನ್ನಡ ಮಾತ್ರವಲ್ಲ ಎಲ್ಲ ಭಾಷೆಗಳ ಟಿಕೆಟ್‌ಗೆ ಭರ್ಜರಿ ಬೇಡಿಕೆ ಕಂಡು ಬಂದಿದೆ. ಮೂಲಗಳ ಪ್ರಕಾರ 'ಕಾಂತಾರ: ಚಾಪ್ಟರ್ 1' ಚಿತ್ರದ ಸುಮಾರು 4 ಲಕ್ಷಕ್ಕಿಂತ ಅಧಿಕ ಟಿಕೆಟ್ ಈಗಾಗಲೇ ಬಿಕರಿಯಾಗಿದೆ. ಕನ್ನಡ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಸ್ಪಾನಿಷ್, ಬೆಂಗಾಳಿ, ಇಂಗ್ಲಿಷ್‌ನಲ್ಲೂ ತೆರೆಗೆ ಬರಲಿದೆ. ಜತೆಗೆ 2ಡಿ ಮತ್ತು ಐಮ್ಯಾಕ್ಸ್ (IMAX)ನಲ್ಲಿ ಫಾರ್ಮಮ್ಯಾಟ್‌ನಲ್ಲಿ ರಿಲೀಸ್ ಆಗಿದೆ.
ʼಕಾಂತಾರ: ಚಾಪ್ಟರ್ 1ʼ ಅಡ್ವಾನ್ಸ್ ಬುಕ್ಕಿಂಗ್‌ನಿಂದಲೇ ಮೊದಲ ದಿನ ವಿವಿಧ ಭಾಷೆಗಳಲ್ಲಿ 13.07 ಕೋಟಿ ರೂ. ಗಳಿಸಿದೆ ಎಂದು ಅಂದಾಜಿಸಲಾಗಿದೆ. ದೇಶದ 12,511 ಶೋಗಳ ಒಟ್ಟು 4.75 ಲಕ್ಷ ಟಿಕೆಟ್ ಸೇಲ್ ಆಗಿದೆ. ಅತೀ ಹೆಚ್ಚು ಕಲೆಕ್ಷನ್ ಕನ್ನಡದಿಂದಲೇ ಹರಿದುಬಂದಿದೆ. ಕನ್ನಡದ 2,28,947 ಟಿಕೆಟ್ ಮಾರಾಟವಾಗಿದ್ದು 7.88 ಕೋಟಿ ರೂ. ಗಳಿಸಿದೆ. ಇನ್ನು ಹಿಂದಿಯ 69,512 ಟಿಕೆಟ್ ಬಿಕರಿಯಾಗಿ 2.10 ಕೋಟಿ ರೂ. ಕಲೆಕ್ಷನ್ ಆಗಿದೆ. ತಮಿಳು ಮತ್ತು ಮಲಯಾಳಂ ವರ್ಷನ್‌ನಿಂದ ಕ್ರಮವಾಗಿ 74.67 ಲಕ್ಷ ರೂ. ಮತ್ತು 1 ಕೋಟಿ ರೂ. ಆದಾಯ ಬಂದಿದೆ. ತೆಲುಗು ವರ್ಷನ್ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಬ್ಲಾಕ್ ಆಗಿರುವ ಸೀಟನ್ನು ಪರಿಗಣಿಸಿದರೆ ಒಟ್ಟು 20.83 ಕೋಟಿ ರೂ. ಗಳಿಸಿದಂತಾಗಿದೆ.
ಸದ್ಯ ದೇಶಾದ್ಯಂತ ʼಕಾಂತಾರʼ ಹವಾ ಜೋರಾಗಿಯೇ ಬೀಸುತ್ತಿದ್ದು, ವಿವಿಧ ಭಾಗಗಳಲ್ಲಿ ಬುಧವಾರ ಪೇಯ್ಡ್ ಪ್ರೀಮಿಯರ್ ಆಯೋಜಿಸಲಾಗಿದೆ. ಗುರುವಾರ ಬೆಳಗ್ಗೆ 6 ಗಂಟೆಯಿಂದಲೇ ಶೋ ಆರಂಭವಾಗಲಿದೆ. ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಹೊರ ಬಂದಿರುವ, ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆಯ ಹಾಡುಗಳು ಸಂಚಲನ ಸೃಷ್ಟಿಸಿವೆ.