ಬೆಂಗಳೂರು: ಘೋಷಣೆಯಾದಾಗಿನಿಂದಲೇ ಕುತೂಹಲ ಕೆರಳಿಸಿ, ಟ್ರೈಲರ್ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್‌ನ್ಯೂಸ್ ನೀಡಿದೆ. ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ ವಿಶ್ವಾದ್ಯಂತ ತೆರೆಗೆ ಬರಲಿರುವ ಈ ಚಿತ್ರ ಈಗಾಗಲೇ ಹವಾ ಸೃಷ್ಟಿಸಿದ್ದು, ರಿಲೀಸ್‌ಗೆ 1 ವಾರ ಬಾಕಿ ಉಳಿದಿರುವಾಗ ಸಿನಿಮಾತಂಡ ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ದಿನಾಂಕ ಘೋಷಿಸಿದೆ. ಸೆಪ್ಟೆಂಬರ್ 26ರ ಮಧ್ಯಾಹ್ನ 12:29ಕ್ಕೆ ನೀವು ಟಿಕೆಟ್ ಬುಕ್ ಮಾಡಬಹುದು.
ʼʼಮೊದಲ ಅಧ್ಯಾಯದ ಆರಂಭ. ಕರ್ನಾಟಕಾದ್ಯಂತ ʼಕಾಂತಾರ: ಚಾಪ್ಟರ್ 1' ಅಡ್ವಾನ್ಸ್ ಬುಕ್ಕಿಂಗ್ ಸೆಪ್ಟೆಂಬರ್ 26ರ 12:29ರಂದು ಆರಂಭವಾಗಲಿದೆʼʼ ಎಂದು ಚಿತ್ರತಂಡ ತಿಳಿಸಿದೆ. ಸದ್ಯ ಕರ್ನಾಟಕದಲ್ಲಿ ಮಾತ್ರ ಅಡ್ವಾನ್ಸ್ ಬುಕ್ಕಿಂಗ್ ಘೋಷಿಸಲಾಗಿದೆ. ಉಳಿದ ಕಡೆಗಳಲ್ಲಿನ ವಿವರ ಇನ್ನಷ್ಟೇ ಪ್ರಕಟವಾಗಬೇಕಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚಿತ್ರತಂಡ ಘೋಷಿಸಿದ್ದು, ಉಳಿದ ಕಡೆಗಳಲ್ಲಿಯೂ ಶೀಘ್ರದಲ್ಲೇ ಅಡ್ವಾನ್ಸ್ ಬುಕ್ಕಿಂಗ್ ಆರಂಭಿಸುವಂತೆ ಫ್ಯಾನ್ಸ್ ಆಗ್ರಹಿಸುತ್ತಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ: ಚಾಪ್ಟರ್ 1ʼ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಘೋಷಣೆಯಾದಾಗಿನಿಂದಲೇ ನಿರೀಕ್ಷೆ ಹುಟ್ಟು ಹಾಕಿರುವ ಇದು 2022ರಲ್ಲಿ ತೆರೆಕಂಡ ʼಕಾಂತಾರʼದ ಪ್ರೀಕ್ವೆಲ್. ತುಳುನಾಡಿನ ವಿಶಿಷ್ಟ ಭೂತಾರಾಧನೆಯನ್ನು ʼಕಾಂತಾರʼದಲ್ಲಿ ಪರಿಚಯಿಸಿದ್ದ ರಿಷಬ್ ಶೆಟ್ಟಿ ಈ ಬಾರಿಯೂ ಅಲ್ಲಿನ ಸಂಸ್ಕೃತಿಯನ್ನು ಪರಿಚಯಿಸಿರುವುದು ಟ್ರೈಲರ್‌ನಲ್ಲಿ ಕಂಡುಬಂದಿದೆ.
ಅತೀ ಹೆಚ್ಚು ಶೇರ್ ಆದ ಟ್ರೈಲರ್
ಸೆಪ್ಟೆಂಬರ್ 22ರಂದು ವಿವಿದ ಭಾಷೆಗಳಲ್ಲಿ ಹೊರಬಂದಿರುವ ʼಕಾಂತಾರ: ಚಾಪ್ಟರ್ 1ʼ ಟ್ರೈಲರ್ ಈಗಾಗಲೇ ಇಂಟರ್‌ನೆಟ್‌ನಲ್ಲಿ ಧೂಳೆಬ್ಬಿಸಿದೆ. ರಿಲೀಸ್ ಆದ 24 ಗಂಟೆಯಲ್ಲಿ ಅತೀ ಹೆಚ್ಚು ಶೇರ್ ಆದ ಭಾರತೀಯ ಚಿತ್ರದ ಟ್ರೈಲರ್ ಎನ್ನುವ ಇತಿಹಾಸ ಬರೆದಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದೇ ದಿನದಲ್ಲಿ 1.2 ಮಿಲಿಯನ್‌ಗಿಂತ ಅಧಿಕ ಶೇರ್ ಆಗಿ ಈ ದಾಖಲೆ ಬರೆದಿದೆ.
24 ಗಂಟೆಯಲ್ಲಿ ಯೂಟ್ಯೂಬ್ ಸೇರಿ ವಿವಿಧ ಡಿಜಿಟಲ್ ಫ್ಲಾಟ್‌ಫಾರ್ಮ್‌ನಲ್ಲಿ ʼಕಾಂತಾರ: ಚಾಪ್ಟರ್ 1ʼ ಟ್ರೈಲರ್ ಬರೋಬ್ಬರಿ 107 ಮಿಲಿಯನ್ (10.7 ಕೋಟಿ) ವೀಕ್ಷಣೆ ಕಂಡಿದೆ. ಇನ್ನು 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ ಕನ್ನಡ ವರ್ಷನ್ ಟ್ರೈಲರ್ 15 ಮಿಲಿಯನ್, ಹಿಂದಿ 26 ಮಿಲಿಯನ್, ತೆಲುಗು 14 ಮಿಲಿಯನ್, ತಮಿಳು 10 ಮಿಲಿಯನ್, ಮಲಯಾಳಂ 6.1 ಮಿಲಿಯನ್ ವ್ಯೂವ್ಸ್ ಕಂಡಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿನ ವೀಕ್ಷಣೆಯನ್ನೂ ಸೇರಿಸಿದರೆ 107 ಮಿಲಿಯನ್ ವೀಕ್ಷಣೆಯಾಗುತ್ತದೆ. ಒಟ್ಟು 7 ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದ್ದು, ಅಕ್ಟೋಬರ್ 2ರಂದು ಭಾರತವೂ ಸೇರಿದಂತೆ 30 ದೇಶಗಳಲ್ಲಿ ಸುಮಾರು 7 ಸಾವಿರ ಸ್ಕ್ರೀನ್‌ಗಳಲ್ಲಿ ತೆರೆಗೆ ಬರಲಿದೆ.
ಈ ಚಿತ್ರದ ಕಥೆ 4-5 ಶತಮಾನದಲ್ಲಿ ನಡೆಯಲಿದೆ. ಕದಂಬ ರಾಜಾಡಳಿತ ಕಾಲದಲ್ಲಿ ಕರಾವಳಿಯಲ್ಲಿ ಜನಜೀವನ ಯಾವ ರೀತಿ ಇತ್ತು ಎನ್ನುವುದನ್ನು ರಿಷಬ್ ತೆರೆಮೇಲೆ ತರಲಿದ್ದಾರೆ. ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದಾರೆ.