ಚೆನ್ನೈ: ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ, ಸದಾ ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿರುವ ನಾಗ್ ಅಶ್ವಿನ್ (Nag Ashwin) 2024ರಲ್ಲಿ ರಿಲೀಸ್ ಆದ ʼಕಲ್ಕಿ 2898 ಎಡಿʼ (Kalki 2898 AD) ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಹೊಸದೊಂದು ಇತಿಹಾಸ ಬರೆದಿದ್ದಾರೆ. ಪ್ರಭಾಸ್-ದೀಪಿಕಾ ಪಡುಕೋಣೆ-ಅಮಿತಾಭ್ ಬಚ್ಚನ್ ನಟನೆಯ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಂಡ ಈ ಸೈನ್ಸ್ ಫಿಕ್ಷನ್‌ನ ಸೀಕ್ವೆಲ್‌ಗೆ ಈಗ ನಾಗ್ ಅಶ್ವಿನ್ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಪ್ರಭಾಸ್ ಬೇರೆ ಬೇರೆ ಪ್ರಾಜೆಕ್ಟ್‌ನಲ್ಲಿ ನಿರತರಾಗಿರುವ ಹಿನ್ನೆಲೆಯಲ್ಲಿ ನಾಗ್ ಅಶ್ವಿನ್ ಮತ್ತೊಂದು ಪ್ರಮುಖ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು ತಮಿಳು ಸೂಪರ್ ಸ್ಟಾರ್ ರಜನಿಕಾಂತ್‌ಗೆ (Rajinikanth) ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಈ ಸುದ್ದಿ ಕೇಳಿ ತಲೈವಾ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.
ಮೂಲಗಳ ಪ್ರಕಾರ ಸಿ. ಅಶ್ವಿನಿ ದತ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ನಾಗ್ ಅಶ್ವಿನ್ ಹೇಳಿದ ಒನ್‌ಲೈನ್ ಸ್ಟೋರಿಗೆ ರಜನಿಕಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಂಪೂರ್ಣ ಚಿತ್ರಕಥೆಯೊಂದಿಗೆ ತಮ್ಮನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಒಂದುವೇಳೆ ಈ ಸುದ್ದಿ ನಿಜವಾದರೆ ನಾಗ್ ಅಶ್ವಿನ್-ರಜನಿಕಾಂತ್ ಕಾಂಬಿನೇಷನ್‌ನ ಮೊದಲ ಸಿನಿಮಾ ಇದಾಗಲಿದೆ. ಇದು ಕೂಡ ಪ್ಯಾನ್ ಇಂಡಿಯಾ ಚಿತ್ರವಾಗಿ ಮೂಡಿ ಬರಲಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನೂ ಹೊರ ಬಿದ್ದಿಲ್ಲ.
ಈ ಸುದ್ದಿಯನ್ನೂ ಓದಿ: Rajinikanth Coolie: ಕಬಾಲಿ ರೆಕಾರ್ಡ್ ಬ್ರೇಕ್ ಮಾಡಿದ ಕೂಲಿ; ಗಳಿಸಿದ ಕಲೆಕ್ಷನ್ ಎಷ್ಟು ಗೊತ್ತಾ?
ವೈಜಯಂತಿ ಮೂವೀಸ್ ಬ್ಯಾನರ್‌ನಡಿಯಲ್ಲಿಯೇ ಈ ಚಿತ್ರವೂ ನಿರ್ಮಾಣವಾಗಲಿದೆ. ಈ ಹಿಂದೆ ಅಶ್ವಿನಿ ದತ್ ಮತ್ತು ರಜನಿಕಾಂತ್ ಕಾಂಬಿಮೇಷನ್‌ನಲ್ಲಿ ಚಿತ್ರವೊಂದು ಸೆಟ್ಟೇರಬೇಕಿತ್ತು. ಆದರೆ ಕಾರಣಾಂತರಗಳಿಂದ ನಿಂತು ಹೋಗಿತ್ತು.
ಪ್ರಸ್ತುತ ಪ್ರಭಾಸ್ ʼರಾಜಾ ಸಾಬ್ʼ ಮತ್ತು ಹನು ರಾಘವಪುಡಿ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ನಾಗ್ ಅಶ್ವಿನ್ ʼಕಲ್ಕಿʼ ಚಿತ್ರದ ಸೀಕ್ವೆಲ್ ಅನ್ನು ಸದ್ಯಕ್ಕೆ ಪಕ್ಕಕ್ಕಿಟ್ಟಿದ್ದು, ಈ ವೇಳೆ ರಜನಿಕಾಂತ್ ಸಿನಿಮಾ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.
ಬಾಕ್ಸ್ ಆಫೀಸ್‌ನಲ್ಲಿ ʼಕೂಲಿʼ ಕಮಾಲ್
ರಜನಿಕಾಂತ್-ಲೋಕೇಶ್ ಕನಕರಾಜ್ ಕಾಂಬಿನೇಷನ್‌ನ ಮೊದ ಚಿತ್ರ ʼಕೂಲಿʼ ಸದ್ಯ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಆಗಸ್ಟ್ 14ರಂದು ತೆರೆ ಕಂಡಿರುವ ಈ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 450 ಕೋಟಿ ರೂ. ಬಾಚಿಕೊಂಡಿದ್ದು, ಈ ವರ್ಷದ ಸೂಪರ್ ಹಿಟ್ ಚಿತ್ರ ಎನಿಸಿಕೊಂಡಿದೆ. ಜತೆಗೆ ಅತೀ ಹೆಚ್ಚು ಗಳಿಸಿದ 4ನೇ ತಮಿಳು ಸಿನಿಮಾವಾಗಿ ಹೊರ ಹೊಮ್ಮಿದೆ. ರಜನಿಕಾಂತ್ ಅವರ ʼ2.0ʼ ಮತ್ತು ʼಜೈಲರ್ʼ, ವಿಜಯ್ ನಟನೆಯ ʼಲಿಯೋʼ ಸಿನಿಮಾಗಳು ಈ ಪಟ್ಟಿಯ ಮೊದಲ 3 ಸ್ಥಾನದಲ್ಲಿವೆ. ಇನ್ನು ʼಕೂಲಿʼ ಭಾರತದಲ್ಲಿ ಇದು 256 ಕೋಟಿ ರೂ. ಕಲೆಕ್ಷನ್ ಮಾಡಿದೆ.
ʼಕೂಲಿʼ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಕಲೆಕ್ಷನ್‌ನಲ್ಲಿ ಹಿಂದೆ ಬಿದ್ದಿಲ್ಲ. ಈ ಚಿತ್ರದಲ್ಲಿ ಕನ್ನಡದ ರಚಿತಾ ರಾಮ್, ಮಲಯಾಳಂ ನಟ ಸೌಬಿನ್ ಶಹೀರ್ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದು, ಉಪೇಂದ್ರ ಮತ್ತು ಆಮೀರ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.