ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ ವಿರೋಧಿಸಿ ಬ್ರಿಟಿಷ್‌ ಸರ್ಕಾರದ ವಿರುದ್ಧ ತೊಡೆ ತಟ್ಟಿದ ಶಂಕರನ್‌ ನಾಯರ್‌ ಹೋರಾಟ ಸ್ಮರಿಸಿದ ಮೋದಿ

Sankaran Nair: 1919ರ ಏ. 13ರಂದು ನಡೆದ ಜಲಿಯನ್ ವಾಲಾಭಾಗ್ ಹತ್ಯಾಕಾಂಡವನ್ನು ಆಧರಿಸಿ ಬಾಲಿವುಡ್‌ನಲ್ಲಿ ʼಕೇಸರಿ ಚಾಪ್ಟರ್‌ 2ʼ ಚಿತ್ರ ತಯಾರಾಗಿದೆ. ಇದು ಏ. 18ರಂದು ತೆರೆಗೆ ಬರಲಿದೆ. ಈ ಮಧ್ಯೆ ಜಲಿಯನ್ ವಾಲಾಭಾಗ್ ಹತ್ಯಾಕಾಂಡವನ್ನು ವಿರೋಧಿಸಿದ ವಕೀಲ ಶಂಕರನ್‌ ನಾಯರ್‌ ಅವರ ಹೋರಾಟವನ್ನು ಪ್ರಧಾನಿ ಮೋದಿ ಸ್ಮರಿಸಿದ್ದಾರೆ.

ಶಂಕರನ್‌ ನಾಯರ್‌ ಹೋರಾಟ ಸ್ಮರಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಮತ್ತು ʼಕೇಸರಿ ಚಾಪ್ಟರ್‌ 2ʼ ಚಿತ್ರದ ಪೋಸ್ಟರ್‌.

Profile Ramesh B Apr 14, 2025 7:39 PM

ಹೊಸದಿಲ್ಲಿ: ಸ್ವಾತಂತ್ರ್ಯ ಪೂರ್ವದಲ್ಲಿ ಪಂಜಾಬ್‌ನಲ್ಲಿ ನಡೆದ ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡ (Jallianwala Bagh massacre) ದೇಶದ ಇತಿಹಾಸದಲ್ಲಿ ಬಹುದೊಡ್ಡ ಕಪ್ಪು ಚುಕ್ಕೆಯಾಗಿ ಇಂದಿಗೂ ಉಳಿದಿದೆ. ಈ ಐತಿಹಾಸಿಕ ಘಟನೆ ಇದೀಗ ಬಾಲಿವುಡ್‌ ಚಲನಚಿತ್ರ ರೂಪದಲ್ಲಿ ಹೊರಬರುತ್ತಿದೆ. ಜಲಿಯನ್‌ ವಾಲಾಭಾಗ್‌ ಘಟನೆಯನ್ನು ಬಾಲಿವುಡ್‌ ಸೂಪರ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ (Akshay Kumar) ನಟನೆಯ ʼಕೇಸರಿ ಚಾಪ್ಟರ್‌ 2ʼ (Kesari Chapter 2) ಸಿನಿಮಾದಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಜಲಿಯನ್‌ ವಾಲಾಭಾಗ್‌ ದುರಂತದ ಬಳಿಕ ಬ್ರಿಟಿಷ್‌ ಆಡಳಿತದ ವಿರುದ್ಧ ತೊಡೆತಟ್ಟಿದ ಕೇರಳ ಮೂಲದ ವಕೀಲ ಚೆಟ್ಟೂರ್‌ ಶಂಕರನ್‌ ನಾಯರ್‌ (Chettur Sankaran Nair) ಅವರ ದೇಶಪ್ರೇಮವನ್ನು ವಿವರಿಸಲಾಗಿದೆ. ಶಂಕರನ್‌ ನಾಯರ್‌ ಪಾತ್ರದಲ್ಲಿ ಅಕ್ಷಯ್‌ ಕುಮಾರ್‌ ನಟಿಸುತ್ತಿದ್ದು, ಇತ್ತೀಚೆಗೆ ಚಿತ್ರದ ಟ್ರೈಲರ್‌ ಹೊರ ಬಂದು ಗಮನ ಸೆಳೆಯುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Narendra Modi) ಈ ಸಿನಿಮಾದ ಹೆಸರನ್ನು ಉಲ್ಲೇಖಿಸದೆ ಶಂಕರನ್‌ ನಾಯರ್‌ ಅವರ ದೇಶಪ್ರೇಮವನ್ನು ಹೊಗಳಿದ್ದಾರೆ.

ʼʼಏ. 14ರಂದು ಪಂಜಾಬ್‌ನಲ್ಲಿ ಬೈಸಾಖಿ ಹಬ್ಬ ಆಚರಿಸಲಾಗುತ್ತಿದೆ. ಜತೆಗೆ ಇದು ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡದ 106ನೇ ವಾರ್ಷಿಕೋತ್ಸವವೂ ಹೌದು. ಈ ಹತ್ಯಾಕಾಂಡದ ಒಂದು ಅಂಶವು ಇಂದಿಗೂ ಗುಟ್ಟಾಗಿ ಉಳಿದಿದೆ. ಅದುವೇ ಅಡ್ವೋಕೇಟ್‌ ಶಂಕರನ್‌ ನಾಯರ್‌ ಅವರ ಹೋರಾಟ. ಇವರ ಹೆಸರನ್ನು ಅನೇಕರು ಕೇಳಿರಲಿಕ್ಕಿಲ್ಲ. ಅವರು ಬ್ರಿಟಿಷ್ ಸರ್ಕಾರದಲ್ಲಿ ಉನ್ನತ ಹುದ್ದೆಯನ್ನು ಹೊಂದಿದ್ದ ವಕೀಲರಾಗಿದ್ದರು. ಹತ್ಯಾಕಾಂಡದ ಬಳಿಕ ಅವರು ತಮಗೆ ಒದಗಿಸಲಾದ ಎಲ್ಲ ಸವಲತ್ತುಗಳು ತ್ಯಜಿಸಲು ನಿರ್ಧರಿಸಿದ್ದರು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೇಂದ್ರ ಸಚಿವ ಸುರೇಶ್‌ ಗೋಪಿ ಅವರ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: Kesari 2 Movie: ಕೇಸರಿ 2 ಚಿತ್ರದ ನೈಜ ಕಥೆಯೇನು? ಇದರ ಹಿಂದಿನ ರಿಯಲ್ ಹೀರೋ ಯಾರು?

"ಶಂಕರನ್‌ ನಾಯರ್‌ ಕೇರಳದವರಾಗಿದ್ದರು. ಘಟನೆ ಪಂಜಾಬ್‌ನಲ್ಲಿ ನಡೆದಿದ್ದರೂ ಅವರು ಈ ಪ್ರಕರಣದ ವಿರುದ್ಧ ಹೋರಾಡಿ ಬ್ರಿಟಿಷರನ್ನು ಎದುರು ಹಾಕಿಕೊಂಡರು. ಶಂಕರನ್ ನಾಯರ್ ಬ್ರಿಟಿಷ್ ಸರ್ಕಾರವನ್ನು ನ್ಯಾಯಾಲಯದ ಮುಂದೆ ಎಳೆದು ತಂದರು" ಎಂದು ಮೋದಿ ಸ್ಮರಿಸಿಕೊಂಡಿದ್ದಾರೆ.

ನಾಯರ್ ಅವರ ಕೊಡುಗೆಗಳನ್ನು ನೆನಪಿಟ್ಟುಕೊಳ್ಳುವಂತೆ ಅವರು ಕರೆ ನೀಡಿದ್ದಾರೆ. "ಪಂಜಾಬ್, ಹರಿಯಾಣ ಮತ್ತು ಹಿಮಾಚಲ ಪ್ರದೇಶದ ಜನರು ಶಂಕರನ್ ನಾಯರ್ ಬಗ್ಗೆ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ಅವರ ಹೋರಾಟವನ್ನು ಅರಿತುಕೊಳ್ಳಬೇಕು. ಅವರು ಸ್ಫೂರ್ತಿ ಮತ್ತು ದೇಶಭಕ್ತಿಯ ಸಂಕೇತʼʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೇಸರಿ 2 ಚಿತ್ರ ಟ್ರೈಲರ್‌ ಇಲ್ಲಿದೆ:



ಇತಿಹಾಸ ನೆನಪಿಸಲಿದೆ ʼಕೇಸರಿ 2ʼ

1919ರ ಏ. 13ರಂದು ಜಲಿಯನ್ ವಾಲಾಭಾಗ್ ಹತ್ಯಾಕಾಂಡ ನಡೆದಿತ್ತು. ಆ ಕಾಲಘಟ್ಟದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಭಾರತೀಯರ ಪರ ಧ್ವನಿ ಎತ್ತಿದ್ದ ನಾಯಕರಲ್ಲಿ‌ ಶಂಕರನ್ ನಾಯರ್ ಕೂಡ ಒಬ್ಬರು. ಕೇರಳ ಪಾಲಕಾಡ್ ಜಿಲ್ಲೆಯಲ್ಲಿ ಜನಿಸಿದ ಶಂಕರನ್ ನಾಯರ್ ಬ್ರಿಟಿಷ್‌ ಸರ್ಕಾರದ ವೈಸ್‌ರಾಯ್ ಕಾರ್ಯಕಾರಿ ಮಂಡಳಿಯ ಏಕೈಕ ಭಾರತೀಯ ಸದಸ್ಯರಾಗಿದ್ದರು. ಜಲಿಯನ್ ವಾಲಾಭಾಗ್ ಹತ್ಯಾಕಾಂಡದ ಬಳಿಕ ಅವರು ಹುದ್ದೆಗೆ ರಾಜೀನಾಮೆ ಸಲ್ಲಿಸಿ ಬ್ರಿಟಿಷ್ ಸರ್ಕಾರದ ಈ ಕೃತ್ಯವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ʼಕೇಸರಿ ಚಾಪ್ಟರ್‌ 2ʼ ಚಿತ್ರ ಶಂಕರ್‌ ನಾಯರ್‌ ಅವರ ಜೀವನದ ಮೇಲೆ ಬೆಳಕು ಚೆಲ್ಲಲಿದೆ. ಅವರ ಬದುಕಿನ ಪ್ರತಿಯೊಂದು ಹಂತವನ್ನೂ ಎಳೆಎಳೆಯಾಗಿ ಬಿಚ್ಚಿಡಲಿದೆ. ಕರಣ್‌ ಸಿಂಗ್‌ ತ್ಯಾಗಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ ಜತೆಗೆ ಆರ್‌.ಮಾಧವನ್‌, ಅನನ್ಯಾ ಪಾಂಡೆ ಮತ್ತಿತರರು ನಟಿಸಿದ್ದಾರೆ. ಏ. 18ರಂದು ಈ ಚಿತ್ರ ತೆರೆಗೆ ಬರಲಿದೆ.