ಅಬುದಾಬಿ: ಅರಬ್ ರಾಷ್ಟ್ರ ಯುಎಇನಲ್ಲಿರುವ ಕನ್ನಡಿಗರಿಗಾಗಿ ದುಬೈನಲ್ಲಿ ಅಕ್ಟೋಬರ್ 1ರಂದು ʼಕಾಂತಾರ ಚಾಪ್ಟರ್ 1ʼ (Kantara: Chapter 1) ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಈ ವಿಶೇಷ ಪ್ರದರ್ಶನದ ರೂವಾರಿ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್ (Fortune Group of hotels)ನ ಚೇರ್‌ಮನ್ ಪ್ರವೀಣ್ ಶೆಟ್ಟಿ (Praveen Shetty). ಪ್ರವೀಣ್ ಶೆಟ್ಟಿ ಯಾರಿಂದಲೂ ಯಾವುದೇ ಪ್ರಾಯೋಜಕತ್ವ ಪಡೆಯದೇ, ಅಲ್ಲಿಯ ಕನ್ನಡಿಗರಿಗಾಗಿ ತಾವೊಬ್ಬರೇ ʼಕಾಂತಾರ ಚಾಪ್ಟರ್ 1ʼ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು.
ಮತ್ತೊಂದು ವಿಶೇಷ ಏನೆಂದರೆ, ಚಿತ್ರ ವೀಕ್ಷಿಸಲು ಪುರುಷರಿಗೆ ಕಪ್ಪು ಬಣ್ಣದ ಶರ್ಟ್ ಮತ್ತು ಬಿಳಿ ಪಂಚೆ, ಮಹಿಳೆಯರಿಗೆ ಸಾಂಪ್ರದಾಯಿಕ ಉಡುಪಿನ ಡ್ರೆಸ್ ಕೋಡ್ ನಿಗದಿಪಡಿಸಲಾಗಿತ್ತು. ಭಾರತೀಯ ಪರಂಪರೆಯನ್ನು ಎತ್ತಿ ಹಿಡಿದಿರುವ ʼಕಾಂತಾರ ಚಾಪ್ಟರ್ 1ʼ ಚಿತ್ರವನ್ನು ಪ್ರದರ್ಶಿಸಲು ಇಲ್ಲಿಯ ಕನ್ನಡಿಗರನ್ನು ಒಂದೆಡೆ ಸೇರಿಸಿರುವ ಬಗ್ಗೆ ನನಗೆ ಹೆಮ್ಮೆ ಎನಿಸುತ್ತದೆ ಎಂದು ಪ್ರವೀಣ್ ಶೆಟ್ಟಿ ಅವರು ʼವಿಶ್ವವಾಣಿʼಗೆ ಪ್ರತಿಕ್ರಿಯಿಸಿದ್ದಾರೆ. ʼಕಾಂತಾರ ಚಾಪ್ಟರ್ 1ʼ ವಿಶೇಷ ಪ್ರದರ್ಶನ ಏರ್ಪಡಿಸಿರುವ ಬಗ್ಗೆ ದುಬೈನಲ್ಲಿರುವ ಕನ್ನಡಿಗರೂ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Kantara Chapter 1 First Review Out: ರಿಲೀಸ್‌ಗಿಂತ ಮೊದಲೇ ʼಕಾಂತಾರ: ಚಾಪ್ಟರ್ 1' ರಿವ್ಯೂ ಔಟ್; ಹೇಗಿದೆ ರಿಷಬ್ ಶೆಟ್ಟಿ ಚಿತ್ರ?
ನಾಳೆ ರಿಲೀಸ್
ಸ್ಯಾಂಡಲ್‌ವುಡ್‌ನ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ ಚಾಪ್ಟರ್ 1ʼ ಚಿತ್ರ ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. 30ಕ್ಕೂ ಹೆಚ್ಚು ದೇಶಗಳಲ್ಲಿ, ಸುಮಾರು 8 ಭಾಷೆಗಳಲ್ಲಿ ರಿಲೀಸ್ ಆಗುತ್ತಿದ್ದು, ಬುಧವಾರ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಪೇಯ್ಡ್ ಪ್ರೀಮಿಯರ್ ಶೋಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ಜೋಡಿಯಾಗಿ ರುಕ್ಮಿಣಿ ವಸಂತ್ ಕಾಣಿಸಿಕೊಂಡಿದ್ದಾರೆ. ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
