ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rachita Ram in Coolie: ರಜನಿಕಾಂತ್‌ ʼಕೂಲಿʼಗೆ ಮಿಶ್ರ ಪ್ರತಿಕ್ರಿಯೆ; ರಚಿತಾ ರಾಮ್‌ಗೆ ಫುಲ್‌ ಮಾರ್ಕ್ಸ್‌

Rachita Ram: ಈ ವರ್ಷದ ಬಹುನಿರೀಕ್ಷಿತ ಚಿತ್ರ ʼಕೂಲಿʼ ರಿಲೀಸ್‌ ಆಗಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ನಿರ್ದೇಶಕ ಲೋಕೇಶ್‌ ಕನಕರಾಜ್‌ ಕಾಂಬಿನೇಷನ್‌ನ ಈ ಆ್ಯಕ್ಷನ್ ಕ್ರೈಂ ಥ್ರಿಲ್ಲರ್‌ ಮೂಲಕ ರಚಿತಾ ರಾಮ್‌ ಮೊದಲ ಬಾರಿಗೆ ಕಾಲಿವುಡ್‌ಗೆ ಕಾಲಿಟ್ಟಿದ್ದಾರೆ. ಅವರ ಪಾತ್ರಕ್ಕೂ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಚೆನ್ನೈ: ಈ ವರ್ಷದ ಬಹುನಿರೀಕ್ಷಿತ ಚಿತ್ರ ʼಕೂಲಿʼ (Coolie) ರಿಲೀಸ್‌ ಆಗಿದೆ. ಸೂಪರ್‌ ಸ್ಟಾರ್‌ ರಜನಿಕಾಂತ್‌ (Rajinikanth) ಮತ್ತು ನಿರ್ದೇಶಕ ಲೋಕೇಶ್‌ ಕನಕರಾಜ್‌ (Lokesh Kanagaraj) ಕಾಂಬಿನೇಷನ್‌ನ ಈ ಆ್ಯಕ್ಷನ್ ಕ್ರೈಂ ಥ್ರಿಲ್ಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡಿದೆ. ವಿಮರ್ಶಕರು ನಿರೀಕ್ಷೆ ತಕ್ಕ ಮೂಡಿ ಬಂದಿಲ್ಲ, ಸಾಧಾರಣ ಎಂದಿದ್ದರೂ ರಜನಿಕಾಂತ್‌ ಫ್ಯಾನ್ಸ್‌ ಶಿಳ್ಳೆ ಹಿಡೆದು ಸಿನಿಮಾವನ್ನು ಸ್ವಾಗತಿಸಿದ್ದಾರೆ. ಎಂದಿನಂತೆ ಅವರ ಸ್ಟೈಲ್‌, ಮ್ಯಾನರಿಸಂ ಮತ್ತು ಆ್ಯಕ್ಷನ್‌ಗೆ ಅಭಿಮಾನಿಗಳು ಪೂರ್ಣಾಂಕ ನೀಡಿದ್ದು, ಈ ಇಳಿವಯಸ್ಸಿನಲ್ಲೂ ಚಿಮ್ಮುವ ಅವರ ಎನರ್ಜಿಗೆ ಫಿದಾ ಆಗಿದ್ದಾರೆ. ಜತೆಗೆ ಅನಿರುದ್ಧ್‌ ರವಿಚಂದ್ರನ್‌ ಸಂಗೀತವೂ ಪ್ರೇಕ್ಷಕರನ್ನು ಆಕರ್ಷಿಸಿದೆ. ಇವೆಲ್ಲದರ ಮಧ್ಯೆ ಕನ್ನಡತಿ ರಚಿತಾ ರಾಮ್‌ ಮೊದಲ ತಮಿಳು ಚಿತ್ರದಲ್ಲೇ ಕಾಲಿವುಡ್‌ನ ಗಮನ ಸೆಳೆದಿದ್ದಾರೆ (Rachita Ram in Coolie). ʼಕೂಲಿʼಯಲ್ಲಿ ಅವರು ಚಿಕ್ಕ ಪಾತ್ರ ನಿರ್ವಹಿಸಿದರೂ ಇಡೀ ಚಿತ್ರವನ್ನೇ ಆವರಿಸಿದ್ದಾರೆ. ರಜನಿಕಾಂತ್‌, ಸೌಬಿನ್‌ ಶಹೀರ್‌ ಜತೆಗೆ ರಚಿತಾ ರಾಮ್‌ ಅವರನ್ನೂ ಪ್ರೇಕ್ಷಕರು ಒಪ್ಪಿ, ಅಪ್ಪಿಕೊಂಡಿದ್ದಾರೆ.

2023ರಲ್ಲಿ ತೆರೆಕಂಡ ರಜನಿಕಾಂತ್‌ ನಟನೆಯ ʼಜೈಲರ್‌ʼ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವ ರಾಜ್‌ಕುಮಾರ್‌ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನರಸಿಂಹ ಪಾತ್ರ ನಿರ್ವಹಿಸಿದ್ದ ಅವರು ತೆರೆ ಮೇಲೆ ಕೆಲವೇ ಕೆಲವು ನಿಮಿಷ ಕಾಣಿಸಿಕೊಂಡಿದ್ದರೂ ತಮಿಳು ಪ್ರೇಕ್ಷಕರ ಗಮನ ಸೆಳೆದಿದ್ದರು. ಅದಾದ ಬಳಿಕ ತಮಿಳುನಾಡಿನಲ್ಲಿ ಅವರಿಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಇದೀಗ ರಚಿತಾ ರಾಮ್‌ ಪಾತ್ರವನ್ನೂ ಇದಕ್ಕೆ ಹೋಲಿಸಲಾಗುತ್ತದೆ. ʼಕೂಲಿʼ ಚಿತ್ರದ ಕಥೆಗೆ ಬಹುಮುಖ್ಯ ತಿರುವು ಕೊಡುವ ಪಾತ್ರದಲ್ಲಿ ರಚಿತಾ ರಾಮ್‌ ಕಾಣಿಸಿಕೊಂಡಿದ್ದು, ಅದ್ಭುತ ಅಭಿನಯದಿಂದ ಕಲ್ಯಾಣಿ ದಿಲೀಪ್‌ ಪಾತ್ರಕ್ಕೆ ಜೀವ ತುಂಬಿದ್ದಾರೆ.



ಈ ಸುದ್ದಿಯನ್ನೂ ಓದಿ: Coolie-War 2 First Reactions: ಬಾಕ್ಸ್‌ ಆಫೀಸ್‌ನಲ್ಲಿ ರಜನಿಕಾಂತ್‌-ಹೃತಿಕ್‌, ಜೂ. ಎನ್‌ಟಿಆರ್‌ ಬಿಗ್‌ ಫೈಟ್‌; ಪ್ರೇಕ್ಷಕರ ಒಲವು ಯಾರ ಕಡೆಗೆ?



ರಚಿತಾ ರಾಮ್‌ ಅವರನ್ನು ತೆರೆಮೇಲೆ ನೋಡಿ ಪ್ರೇಕ್ಷಕರು ಮನಸೋತಿದ್ದು, ಅವರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಅವರ ಹಿಂದಿನ ಸಿನಿಮಾಗಳನ್ನು ಸರ್ಚ್‌ ಮಾಡತೊಡಗಿದ್ದಾರೆ. ಕನ್ನಡಿಗರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಅಂದಹಾಗೆ ʼಕೂಲಿʼ ಚಿತ್ರದಲ್ಲಿ ರಚಿತಾ ನಟಿಸುತ್ತಿರುವ ವಿಚಾರವನ್ನು ಗುಟ್ಟಾಗಿ ಇಡಲಾಗಿತ್ತು. ಚಿತ್ರ ಸೆಟ್ಟೇರಿದಾಗಲೇ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ಸುದ್ದಿ ಹರದಾಡಿತ್ತಾದರೂ ಅವರಾಗಲೀ, ಚಿತ್ರತಂಡವಾಗಲೀ ಸ್ಪಷ್ಟನೆ ನೀಡಿರಲಿಲ್ಲ. ಇತ್ತೀಚೆಗೆ ಟ್ರೈಲರ್‌ ರಿಲೀಸ್‌ ಅದಾಗ ಅದರಲ್ಲಿ ಅವರು ಕಂಡುಬಂದಿದ್ದರು. ಅದಾಗ್ಯೂ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿರಲಿಲ್ಲ.



ಪ್ರೇಕ್ಷಕರು ಏನಂದ್ರು?

ʼಕೂಲಿʼ ಚಿತ್ರದ ನೋಡಿದ ಪ್ರೇಕ್ಷಕರು ರಚಿತಾ ರಾಮ್‌ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ʼʼಸರ್‌ಪ್ರೈಸ್‌ ಎಂದರೆ ಅದು ರಚಿತಾ ರಾಮ್‌. ಅವರಿಗೆ ಮೊದಲ ಬಾರಿಗೆ ಅತ್ಯುತ್ತಮ ಪಾತ್ರ ಸಿಕ್ಕಿದೆʼʼ ಎಂದು ಒಬ್ಬರು ಹೇಳಿದ್ದಾರೆ. ʼʼರಚಿತಾ ಸರ್‌ಪ್ರೈಸ್‌ ಪ್ಯಾಕೇಜ್‌. ಇದನ್ನು ನಿರೀಕ್ಷಿಸಿರಲಿಲ್ಲʼʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ʼʼಉಪೇಂದ್ರ ಅವರಿಗಿಂತ ಹೆಚ್ಚಿನ ಸ್ಕ್ರೀನ್‌ ಸ್ಪೇಸ್‌ ರಚಿತಾ ರಾಮ್‌ಗೆ ಲಭಿಸಿದೆʼʼ ಎಂದು ಮತ್ತೊಬ್ಬರು ಹೇಳಿದ್ದಾರೆ. ಕೆಲವರು ಅವರ ಕಲ್ಯಾಣಿ ಪಾತ್ರವನ್ನು ಕಮಲ್‌ ಹಾಸನ್‌ ನಟನೆಯ ʼವಿಕ್ರಂʼ ಚಿತ್ರದ ಏಜೆಂಟ್‌ ಟಿನಾ ಪಾತ್ರದೊಂದಿಗೆ ಹೋಲಿಸಿದ್ದಾರೆ. ಒಟ್ಟಿನಲ್ಲಿ ಕಾಲಿವುಡ್‌ನಲ್ಲಿ ಅವರಿಗೆ ಭರ್ಜರಿ ಸ್ವಾಗತವೇ ಸಿಕ್ಕಿದೆ.

2013ರಲ್ಲಿ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಚಿತಾ ರಾಮ್‌ ಈಗ ಕನ್ನಡದ ಬಹು ಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. 2022ರಲ್ಲಿ ಟಾಲಿವುಡ್‌ಗೆ ಪ್ರವೇಶಿಸಿದ್ದ ಅವರು ಈ ವರ್ಷ ಕಾಲಿವುಡ್‌ಗೂ ಪದಾರ್ಪಣೆ ಮಾಡಿದ್ದಾರೆ. ʼಕೂಲಿʼ ಚಿತ್ರ ಅವರ ಕೆರಿಯರ್‌ಗೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.