ದೆಹಲಿ: ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯ (Rishabh Shetty) 3 ವರ್ಷಗಳ ಕಠಿಣ ಪರಿಶ್ರಮಕ್ಕೆ ಕೊನೆಗೂ ಸೂಕ್ತ ಪ್ರತಿಫಲ ಸಿಕ್ಕಿದೆ. 2022ರಲ್ಲಿ ಘೋಷಣೆಯಾದ ʼಕಾಂತಾರ: ಚಾಪ್ಟರ್ 1' (Kantara: Chapter 1) ಎನ್ನುವ ದೃಶ್ಯಕಾವ್ಯ, ರಿಷಬ್ ಶೆಟ್ಟಿಯ ಕನಸು, ಹೊಂಬಾಳೆ ಫಿಲ್ಮ್ಸ್‌ನ ನಿರ್ಮಾಪಕ ವಿಜಯ್ ಕಿರಗಂದೂರು ಅವರ ಬಹುನಿರೀಕ್ಷಿತ ಚಿತ್ರ ಅಕ್ಟೋಬರ್ 2ರಂದು ತೆರೆಕಂಡಿದ್ದು, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡ ಸಹಿತ ಒಟ್ಟು 7 ಭಾಷೆಗಳಲ್ಲಿ, 30 ದೇಶಗಳಲ್ಲಿ ರಿಲೀಸ್ ಆಗಿರುವ ಈ ಸಿನಿಮಾ 2 ದಿನದಲ್ಲೇ 100 ಕೋಟಿ ರೂ. ಕ್ಲಬ್ ಸೇರಿ ಬಾಕ್ಸ್ ಆಫೀಸ್‌ನಲ್ಲಿ ಹೊಸದೊಂದು ಇತಿಹಾಸ ಬರೆದಿದೆ. ಹೀಗೆ ಸಾಗಿದರೆ ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರ ಎನಿಸಿಕೊಳ್ಳಲಿದೆ. ಈ ಮಧ್ಯೆ ಚಿತ್ರ ಮತ್ತೊಂದು ಮಹತ್ವದ ಮೈಲಿಗಲ್ಲು ನೆಡಲು ಮುಂದಾಗಿದೆ. ಅಕ್ಟೋಬರ್ 5ರಂದು ರಾಷ್ಟ್ರಪತಿ ಭವನದಲ್ಲಿ (Rashtrapati Bhavan) ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಲಾಗಿದೆ. ಈ ಮೂಲಕ ಚಿತ್ರತಂಡಕ್ಕೆ ವಿಶೇಷ ಗೌರವ ಸಿಕ್ಕಂತಾಗಿದೆ.
ಈ ಬಗ್ಗೆ ಹಿಂದೂಸ್ಥಾನ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ. ಈ ವಿಶೇಷ ಪ್ರದರ್ಶನದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ, ನಾಯಕಿ ರುಕ್ಮಿಣಿ ವಸಂತ್, ನಿರ್ಮಾಪಕ ಚಲುವೇ ಗೌಡ ಭಾಗವಹಿಸಲಿದ್ದಾರೆ. ಅದಾಗ್ಯೂ ಈ ಬಗ್ಗೆ ಚಿತ್ರತಂಡ ಈ ಬಗ್ಗೆ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.
ಹೊಂಬಾಳೆ ಫಿಲ್ಮ್ಸ್‌ನ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Kantara Chapter 1: 2ನೇ ದಿನಕ್ಕೆ ಬಾಕ್ಸ್ ಆಫೀಸ್ ಉಡೀಸ್ ಮಾಡಿದ ‘ಕಾಂತಾರ: ಚಾಪ್ಟರ್ 1’ ಚಿತ್ರ; 100 ಕೋಟಿ ರೂ. ಕ್ಲಬ್‌ಗೆ ಎಂಟ್ರಿ
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಈ ʼಕಾಂತಾರ: ಚಾಪ್ಟರ್ 1'. 4-5ನೇ ಶತಮಾನದಲ್ಲಿ, ಕದಂಬ ರಾಜಾಡಳಿತ ಕಾಲದ ನಡೆದ ಕಾಲ್ಪನಿಕ ಕಥೆಗೆ ದೈವತ್ವವನ್ನು ಹದವಾಗಿ ಬೆರೆಸಿ ರಿಷಬ್ ಶೆಟ್ಟಿ ಅದ್ಭುತ ದೃಶ್ಯ ರೂಪಕವನ್ನು ತೆರೆಮೇಲೆ ತಂದಿದ್ದಾರೆ. ಅದರಲ್ಲಿಯೂ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತ, ಹಿನ್ನೆಲೆ ಸಂಗೀತ, ಅರವಿಂದ್ ಕಶ್ಯಪ್ ಅವರ ಸಿನಿಮಾಟೋಗ್ರಫಿ ಚಿತ್ರದ ಪ್ಲಸ್ ಪಾಯಿಂಟ್. ಗುಲ್ಶನ್ ದೇವಯ್ಯ, ಜಯರಾಮ್, ರಾಕೇಶ್ ಪೂಜಾರಿ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ನೈಜ ಕಾಡಿನಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಇದಕ್ಕಾಗಿ ಚಿತ್ರತಂಡ 250 ದಿನಗಳ ಕಾಲ ಕಷ್ಟಪಟ್ಟಿದೆ. ಚಿತ್ರತಂಡದ ಶ್ರಮ ತೆರೆಮೇಲೆ ಕಾಣಿಸುತ್ತಿದೆ.
ಕಾಂತಾರ ಎಂದರೆ ನಿಗೂಢತೆ ತುಂಬಿದ ದಟ್ಟ ಕಾಡು ಎಂದರ್ಥ. ಅದಕ್ಕೆ ತಕ್ಕಂತೆ ರಿಷಬ್ ಹೊಸದೊಂದು ಲೋಕವನ್ನೇ ಕಟ್ಟಿಕೊಟ್ಟಿದ್ದು, 4-5 ಶತಮಾನದ ಜನಜೀವನವನ್ನು ಸಮರ್ಥವಾಗಿ ತೆರೆಮೇಲೆ ಅನಾವರಣಗೊಳಿಸಿದ್ದಾರೆ. ಸದ್ಯ ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, ಭೂತಕೋಲ ನೋಡಿ, ಜಾನಪದ ವಾದ್ಯಗಳ ಧ್ವನಿ ಕೇಳಿ ರೋಮಾಂಚನಗೊಂದಿದ್ದಾರೆ.
ಕಲೆಕ್ಷನ್ ಎಷ್ಟಾಯ್ತು?
ʼಕಾಂತಾರ: ಚಾಪ್ಟರ್ 1ʼ ರಿಲೀಸ್ ಆದ ಮೊದಲ ದಿನ ಭಾರತದಲ್ಲಿ 61.85 ಕೋಟಿ ರೂ. ಗಳಿಸಿದೆ. ಇನ್ನು 2ನೇ ದಿನ 45 ಕೋಟಿ ರೂ. ದೋಚಿಕೊಂಡು ಒಟ್ಟು 106.85 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ಶನಿವಾರ ಮತ್ತು ಭಾನುವಾರ ರಜಾ ದಿನವಾಗಿರುವ ಹಿನ್ನೆಲೆಯಲ್ಲಿ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆ ಇದೆ.