ಬೆಂಗಳೂರು: ಕೊನೆಗೂ ಬಹುನಿರೀಕ್ಷಿತ ʼಕಾಂತಾರ ಚಾಪ್ಟರ್ 1' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ (Kantara Chapter 1 Trailer). ಹೊಂಬಾಳೆ ಫಿಲ್ಮ್ಸ್ (Hombale Films) ಅದ್ಧೂರಿ ನಿರ್ಮಾಣದ, ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ ಈ ಸಿನಿಮಾ ಘೋಷಣೆಯಾದಾಗಿನಿಂದಲೇ ಭಾರಿ ಕುತೂಹಲ ಕೆರಳಿಸಿದೆ. ಇದೀಗ ಟ್ರೈಲರ್ ಹೊರಬಿದ್ದಿದ್ದು ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮತ್ತೊಮ್ಮೆ ತುಳು ಜಾನಪದ ಹಿನ್ನೆಲೆಯ ಕಥೆಯನ್ನು ರಿಷಬ್ ಶೆಟ್ಟಿ ಹೇಳ ಹೊರಟಿದ್ದು, ಟ್ರೈಲರ್ ನೋಡಿ ಪ್ರೇಕ್ಷಕರು ಥ್ರಿಲ್ ಆಗಿದ್ದಾರೆ. ತುಳುನಾಡಿನ ಆದಿ ದೈವ ಬೆರ್ಮೆಯ ಕಥೆಯನ್ನು ಅವರು ಈ ಭಾಗದಲ್ಲಿ ಹೇಳ ಹೊರಟಿದ್ದು, ಅದರ ಸೂಚನೆ ಟ್ರೈಲರ್ ಸಿಕ್ಕಿದೆ.
3 ವರ್ಷಗಳ ಹಿಂದೆ ರಿಲೀಸ್ ಆಗಿದ್ದ 'ಕಾಂತಾರ' ಚಿತ್ರದಲ್ಲಿ ತುಳುನಾಡಿನ ದೈವಗಳು, ಅಲ್ಲಿನ ಸಂಸ್ಕೃತಿಯನ್ನು ರಿಷಬ್ ತೆರೆ ಮೇಲೆ ತಂದಿದ್ದರು. ಅದರಲ್ಲಿ ಪಂಜುರ್ಲಿ ದೈವಗಳ ವಿಚಾರಗಳನ್ನು ತಿಳಿಸಿದ್ದರು. ಇದೀಗ ಪ್ರೀಕ್ವೆಲ್‌ನಲ್ಲಿ ಅವರು ಆದಿ ದೈವ ಬೆರ್ಮೆಯ ಇತಿಹಾಸವನ್ನು ಹೇಳಹೊರಟಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗಿದೆ.
ಈ ಸುದ್ದಿಯನ್ನೂ ಓದಿ: Kantara: Chapter 1 trailer: ಕೊನೆಗೂ ರಿಲೀಸ್ ಆಯ್ತು ಕಾಂತಾರ-1 ಟ್ರೈಲರ್....ರಿಷಬ್ ಶೆಟ್ಟಿ ಪಾತ್ರದ ಹೆಸರೇನು ಗೊತ್ತಾ?
ಬೆರ್ಮೆ ತುಳುನಾಡಿನ ಸೃಷ್ಟಿಕರ್ತ ಮತ್ತು ಎಲ್ಲ ದೈವಗಳ ಅಧಿನಾಯಕನೆಂದು ನಂಬಲಾಗುತ್ತದೆ. ಹೀಗಾಗಿ ತುಳುನಾಡಿನಲ್ಲಿ ಬೆರ್ಮೆ ದೈವಕ್ಕೆ ವಿಶಿಷ್ಟ ಸ್ಥಾನವಿದೆ. ಬೆರ್ಮೆರಾಧನೆ ತುಳುನಾಡಿನ ಮೂಲ ಧರ್ಮದ ಒಂದು ಭಾಗವೇ ಆಗಿದೆ. ಈ ದೈವದ ಸುತ್ತ ʼಕಾಂತಾರ ಚಾಪ್ಟರ್ 1ʼ ಕಥೆ ಸಾಗಲಿದೆ ಎನ್ನಲಾಗುತ್ತಿದೆ. ಬಹುತೇಕ ಕಥೆ ಕಾಡಿನಲ್ಲೇ ನಡೆಯುವ ಸೂಚನೆಯೂ ಟ್ರೈಲರ್‌ನಲ್ಲಿ ಸಿಕ್ಕಿದೆ. ಅರಣ್ಯವಾಸಿಗಳ ಬದುಕು ಬವಣೆ, ಕಾಡಿನ ಬುಡಕಟ್ಟು ಜನರ ಆಚಾರ-ವಿಚಾರ, ರಾಜಾಡಳಿತದ ಪ್ರಸ್ತಾವವನ್ನೂ ರಿಷಬ್ ಶೆಟ್ಟಿ ಮಾಡಿದ್ದಾರೆ. ಇನ್ನು ಬಿ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಟ್ರೈಲರ್‌ನಲ್ಲಿ ಗಮನ ಸೆಳೆದಿದ್ದು, ರಿಷಬ್ ಜತೆಗೆ ನಾಯಕಿ ರುಕ್ಮಿಣಿ ವಸಂತ್ ಅವರ ಕನಕವತಿ ಪಾತ್ರವೂ ಹೈಲೈಟ್ ಆಗಿದೆ. ಗುಲ್ಶನ್ ದೇವಯ್ಯ ವಿಲನ್ ಆಗಿ ಅಬ್ಬರಿಸಿದ್ದಾರೆ.
ಕನ್ನಡ ಜತೆಗೆ ಹಿಂದಿ, ತಮಿಳು, ತೆಲುಗು, ಮಲಯಾಳಂ, ಇಂಗ್ಲಿಷ್ ಮತ್ತು ಬೆಂಗಾಳಿಯಲ್ಲಿ ಚಿತ್ರ ಮೂಡಿಬಂದಿದ್ದು, ಅಕ್ಟೋಬರ್ 2ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ. ಸುಮಾರು 30 ದೇಶಗಳಲ್ಲಿ ತೆರೆಗೆ ಬರಲಿದೆ. ಅಕ್ಟೋಬರ್ 1ರಂದು ವಿವಿಧ ನಗರಗಳಲ್ಲಿ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಕೂಡ ನಡೆಯಲಿದೆ. ಈಗಾಗಲೇ ಟ್ರೈಲರ್ ಧೂಳೆಬ್ಬಿಸಿದ್ದು, ವಿವಿಧ ಭಾಷೆಗಳಲ್ಲಿ ಗಮನ ಸೆಳೆದಿದೆ. ಜತೆಗೆ ದಾಖಲೆಯ ವೀಕ್ಷಣೆ ಕಾಣುತ್ತಿದೆ. ಅರವಿಂದ್ ಎಸ್. ಕಶ್ಯಪ್ ಅವರ ಛಾಯಾಗ್ರಹಣ ಹಾಗೂ ಪ್ರಗತಿ ಶೆಟ್ಟಿ ಅವರ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ.
ಚಿತ್ರ ಬಿಡುಗಡೆಗೆ 10 ದಿನ ಬಾಕಿ ಉಳಿದಿದ್ದು, ವಿಶಿಷ್ಟ ಪ್ರಚಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾ, ತಂತ್ರಜ್ಞಾನ ಬಳಸಿ ಜನರ ಬಳಿ ತಲುಪುವ ಪ್ರಯತ್ನಕ್ಕೆ ಕೈ ಹಾಕಿದೆ. ಇದುವರೆಗೆ ಹೇಳಿಕೊಳ್ಳುವಂತಹ ಪ್ರಮೋಷನ್ ನಡೆಸದ ಚಿತ್ರತಂಡಕ್ಕೆ ಪೇಯ್ಡ್ ಪ್ರೀಮಿಯರ್ ಮೂಲಕ ಜನಮನ್ನಣೆ ಗಳಿಸುವ ಪ್ಲ್ಯಾನ್ ಮಾಡಿದೆ. ವಿವಿಧ ನಗರಗಳಲ್ಲಿ ಪ್ರೆಸ್‌ಮೀಟ್ ಆಯೋಜಿಸಲೂ ಮುಂದಾಗಿದೆ. ಒಟ್ಟಿನಲ್ಲಿ ಚಿತ್ರತಂಡದ ನಡೆ ಕುತೂಹಲ ಮೂಡಿಸಿದೆ.