ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka swamy murder case) ಪ್ರಕರಣದಲ್ಲಿ ನಟ ದರ್ಶನ್‌ಗೆ (Actor Darshan)ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಂಡಿದೆ. ಬೇಲ್ ರದ್ದುಗೊಳಿಸಿ ಇಂದು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ತಕ್ಷಣ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದೆ. ಇನ್ನು ನಾಳೆ ಡೆವಿಲ್ ಸಿನಿಮಾದ ಬಹುನಿರೀಕ್ಷಿತ ಹಾಡು ರಿಲೀಸ್ ಹಿನ್ನೆಲೆ ದರ್ಶನ್ ತಮಿಳುನಾಡಿನಲ್ಲಿ ಪ್ರೊಮೋಶನ್‌ಗೆ ತೆರಳಿದ್ದಾರೆ ಎನ್ನಲಾಗಿದೆ. ಈಗಾಗಲೇ ಬೇಲ್ ರದ್ದಾಗಿರುವ ಮಾಹಿತಿ ದರ್ಶನ್‌ಗೆ ಸಿಕ್ಕಿದ್ದು, ಇಂದು ಸಂಜೆ ಅವರೇ ಪೊಲೀಸರ ಎದುರು ಹಾಜರಾಗುತ್ತಾರೆ ಎಂಬ ಮಾಹಿತಿ ಇದೆ.
ಇನ್ನೊಂದು ಮಾಹಿತಿ ಪ್ರಕಾರ ದರ್ಶನ್ ಎಲ್ಲೂ ಹೋಗಿಲ್ಲ. ಕರ್ನಾಟಕದಲ್ಲೇ ಇದ್ದಾರೆ. ಅವರು ಕೊಡಗಿನ ಕುಶಾಲನಗರದ ಸುಂಟಿಕೊಪ್ಪದಲ್ಲಿರುವ ತಮ್ಮ ಸ್ನೇಹಿತನ ಫಾರ್ಮ್ ಹೌಸ್‌ನಲ್ಲಿದ್ದಾರೆ. ಅಲ್ಲಿಂದ ಈಗಾಗಲೇ ನೇರವಾಗಿ ಬೆಂಗಳೂರಿಗೆ ಹೊರಟಿದ್ದಾರೆ ಎನ್ನಲಾಗಿದೆ. ಇನ್ನು ಮತ್ತೊರ್ವ ಆರೋಪಿ ಪವಿತ್ರಾ ಗೌಡ ಮನೆಗೆ ಪೊಲೀಸರು ಈಗಾಗಲೇ ಬಂದಿದ್ದು, ಇನ್ನೇನು ಕೆಲವೇ ಕ್ಷಣದಲ್ಲಿ ಆಕೆಯನ್ನು ವಶಕ್ಕೆ ಪಡೆದು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಿದ್ದಾರೆ.
ಕಳೆದ 2024 ಡಿಸೆಂಬರ್‌ನಲ್ಲಿ ಕರ್ನಾಟಕ ಹೈಕೋರ್ಟ್ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಜಾಮೀನು ನೀಡಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಇದೀಗ ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ.ಆರ್.ಮಹದೇವನ್ ಅವರ ಪೀಠ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಈ ಸುದ್ದಿಯನ್ನೂ ಓದಿ: Actor Darshan: ದರ್ಶನ್‌ಗೆ ಮತ್ತೆ ಜೈಲು; ಡೆವಿಲ್ ಸಾಂಗ್ ರಿಲೀಸ್ ಕಥೆಯೇನು?
ಸುಪ್ರೀಂ ಪೀಠದ ನ್ಯಾ.ಆರ್. ಮಹಾದೇವನ್ ಅವರು ತೀರ್ಪು ಓದಿದರು. ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ತಾಂತ್ರಿಕ ಕಾರಣಗಳಿಂದ ಜಾಮೀನು ನೀಡಿದ್ದಾರೆ ಎಂದರು. ಹೈಕೋರ್ಟ್ ಆದೇಶಗಳ ಲೋಪವನ್ನು ಇದೇ ವೇಳೆ ಸುಪ್ರೀಂ ಕೋರ್ಟ್ ಎತ್ತಿ ತೋರಿಸಿತು. ಅಲ್ಲದೆ ಶೀಘ್ರವಾಗಿ ಸಾಕ್ಷಿಗಳ ವಿಚಾರಣೆ ನಡೆಸಲು ಆದೇಶ ಹೊರಡಿಸಿದರು.
ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ಚಿಕ್ಕವರಲ್ಲ. ಆರೋಪಿಗಳಿಗೆ ಫೈವ್ ಸ್ಟಾರ್ ಟ್ರೀಟ್ಮೆಂಟ್ ನೀಡಲಾಗಿದೆ. ಜೈಲು ಸುಪರಿಂಟೆಂಡೆಂಟ್‌ನನ್ನು ಸಸ್ಪೆಂಡ್ ಮಾಡಬೇಕಿತ್ತು. ಇನ್ನು ಮುಂದೆ ರಾಜಾತಿಥ್ಯದ ಯಾವುದೇ ಫೋಟೋ ಕಂಡುಬಂದರೆ, ಆರೋಪಿ ಜೈಲಲ್ಲಿ ಕುಳಿತು ಸಿಗರೇಟ್ ಸೇದಿದರೆ ಜೈಲು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿ ಜಾಮೀನು ರದ್ದುಗೊಳಿಸಿದರು.