ಬೆಂಗಳೂರು: ಈ ವರ್ಷದ ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್ 1ʼ (Kantara Chapter 1) ಚಿತ್ರದ ಟ್ರೈಲರ್ ರಿಲೀಸ್‌ಗೆ ಕ್ಷಣಗಣನೆ ಆರಂಭವಾಗಿದೆ (Kantara Chapter 1 Trailer). ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರ ಮಧ್ಯಾಹ್ನ 12:45ಕ್ಕೆ ವಿವಿಧ ಭಾಷೆಗಳಲ್ಲಿ ಏಕಕಾಲಕ್ಕೆ ಟ್ರೈಲರ್ ಬಿಡುಗಡೆಯಾಗಲಿದ್ದು, ಚಿತ್ರದ ಝಲಕ್ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. 7 ಭಾಷೆಗಳಲ್ಲಿ ಚಿತ್ರ ಮೂಡಿ ಬಂದಿದೆ. ಕನ್ನಡ ಹೊರತುಪಡಿಸಿ ಉಳಿದ ಭಾಷೆಗಳ ಟ್ರೈಲರ್ ಆಯಾ ಭಾಷೆಗಳ ಸೂಪರ್ ಸ್ಟಾರ್‌ಗಳು ಅನಾವರಣಗೊಳಿಸಿದ್ದಾರೆ. ಕನ್ನಡ ಟ್ರೈಲರ್ ಅನ್ನು ಕನ್ನಡ ಜನತೆಯೇ ಬಿಡುಗಡೆ ಮಾಡಲಿದ್ದಾರೆ. ಇದೀಗ ಚಿತ್ರತಂಡ ಪ್ರೇಕ್ಷಕರಿಗೆ ಸುವರ್ಣಾವಕಾಶ ನೀಡಿದೆ. ವಿಶೇಷ ಎಂದರೆ ನೀವೂ ಟ್ರೈಲರ್ ರಿಲೀಸ್ ಮಾಡಬಹುದು. ಈ ಬಗ್ಗೆ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸಿದೆ. ಇದಕ್ಕಾಗಿ ನೀವೇನು ಮಾಡಬೇಕು ಎನ್ನುವುದನ್ನೂ ತಿಳಿಸಿದೆ.
ʼʼಕನ್ನಡ ಜನತೆಗೆ ನಮಸ್ಕಾರ. 'ಕಾಂತಾರ: ಚಾಪ್ಟರ್ 1' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಇದೊಂದು ಅಪ್ಪಟ ಸುವರ್ಣಾವಕಾಶʼʼ ಎಂದು ಬರೆದುಕೊಂಡಿರುವ ಚಿತ್ರತಂಡ ಈ ಕುರಿತಾದ ಸಂಪೂರ್ಣ ಮಾಹಿತಿಯನ್ನು ನೀಡಿದೆ.
- ಮೊದಲಿಗೆ https://kantara.world ವೆಬ್‌ಸೈಟ್‌ಗೆ ಭೇಟಿ ನೀಡಿ.
- ಬಳಿಕ ಅಲ್ಲಿ ನಿಮ್ಮ ಮಾಹಿತಿಯನ್ನು ನಮೂದಿಸಿ.
- ನಂತರ ನೀವು ನಿಮ್ಮ ಹೆಸರಿನಲ್ಲಿರುವ ವಿಶೇಷ ಟ್ರೈಲರ್ ಬಿಡುಗಡೆ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ಹಾಗೂ ಅದನ್ನು ಎಲ್ಲರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ.
- ಟ್ರೈಲರ್ ಬಿಡುಗಡೆ ಮಾಡಲು ಸೆಪ್ಟೆಂಬರ್ 22ರ ಮಧ್ಯಾಹ್ನ 12:35ಕ್ಕೆ ವೆಬ್‌ಸೈಟ್‌ಗೆ ಭೇಟಿ ನೀಡಿ.
ಸದ್ಯ ಈ ವಿಚಾರ ತಿಳಿದು ಅಭಿಮಾನಿಗಳು ಥ್ರಿಲ್ ಆಗಿದ್ದು, ಬಹುನಿರೀಕ್ಷಿತ ಸಿನಿಮಾದ ಭಾಗವಾಗಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಈ ಸುದ್ದಿಯನ್ನೂ ಓದಿ: Kantara Chapter 1 Trailer: ʼಕಾಂತಾರ ಚಾಪ್ಟರ್ 1ʼ ಕನ್ನಡ ಟ್ರೈಲರ್ ರಿಲೀಸ್‌ಗೆ ವಿಶೇಷ ವ್ಯಕ್ತಿಗಳನ್ನು ಆಯ್ಕೆ ಮಾಡಿದ ಚಿತ್ರತಂಡ
2022ರಲ್ಲಿ ತೆರೆಕಂಡ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸಿದೆ. ಈ ಭಾಗದ ನಿರ್ದೇಶನದ ಜವಾಬ್ದಾರಿಯನ್ನೂ ರಿಷಬ್ ಶೆಟ್ಟಿ ಹೊತ್ತುಕೊಂಡಿದ್ದು, ನಾಯಕನಾಗಿ ಅಭಿನಯಿಸಿದ್ದಾರೆ. ಇದೇ ಕಾರಣಕ್ಕೆ ಘೋಷಣೆಯಾದಾಗಿನಿಂದಲೂ ಭಾರಿ ಕುತೂಹಲ ಮೂಡಿಸಿದ್ದು, ಸುಮಾರು 250 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ಚಿತ್ರತಂಡ ಮೇಕಿಂಗ್ ವಿಡಿಯೊ ರಿಲೀಸ್ ಮಾಡಿ ರಿಷಬ್ ಆ್ಯಂಡ್ ಟೀಂನ ಪರಿಶ್ರಮವನ್ನು ಪರಿಚಯಿಸುವ ಜತೆಗೆ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿತ್ತು.
ಕೆಲವು ತಿಂಗಳ ಹಿಂದೆಯೇ ಹೊಂಬಾಳೆ ಫಿಲ್ಮ್ಸ್ ಬಿಡುಗಡೆ ದಿನಾಂಕ ಘೋಷಿಸಿದ್ದರೂ ಚಿತ್ರದ ಬಗ್ಗೆ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಬೆರಳೆಣಿಕೆಯ ಪೋಸ್ಟರ್, ಮೇಕಿಂಗ್ ವಿಡಿಯೊ ಹರಿಯಬಿಟ್ಟಿದ್ದು ಬಿಟ್ಟರೆ ರಹಸ್ಯ ಬಹಿರಂಗಪಡಿಸಿರಲಿಲ್ಲ. ಶೂಟಿಂಗ್ ವೇಳೆಯೂ ಚಿಕ್ಕ ಮಾಹಿತಿಯೂ ಹೊರಬಾರದಂತೆ ಎಚ್ಚರಿಕೆ ವಹಿಸಿ ಕುತೂಹಲ ಕಾಯ್ದುಕೊಂಡಿತ್ತು.
ರಿಷಬ್ ಶೆಟ್ಟಿ ಬಿಟ್ಟರೆ ಇತರ ಪಾತ್ರಗಳಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ ಎನ್ನುವ ವಿಚಾರವೂ ಇತ್ತೀಚಿನವರೆಗೆ ಹೊರ ಬಿದ್ದಿರಲಿಲ್ಲ. ಕೆಲವು ದಿನಗಳ ಹಿಂದೆ ಚಿತ್ರತಂಡ ಒಂದೊಂದೇ ಪೋಸ್ಟರ್ ರಿಲೀಸ್ ಮಾಡಿ ಪಾತ್ರಗಳ ಪರಿಚಯ ಮಾಡಿಕೊಟ್ಟಿದೆ. ಕನಕವತಿಯಾಗಿ ನಾಯಕಿ ಪಾತ್ರದಲ್ಲಿ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಬಾಲಿವುಡ್ ನಟ ಗುಲ್ಶನ್ ದೇವಯ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಶೂಟಿಂಗ್ ಎಲ್ಲ ಪೂರ್ಣವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.