ಲಖನೌ: ಆಗಸ್ಟ್ 1ರಂದು ಜಾರಿಗೆ ಬರುವಂತೆ ಭಾರತದ ಮೇಲೆ ಶೇ. 25ರಷ್ಟು ಸುಂಕದ ಬರೆ ಹಾಕಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ತಿರುಗೇಟು ನೀಡಿದ್ದಾರೆ. ವಿಶ್ವ ಆರ್ಥಿಕತೆಯು ಅನಿಶ್ಚಿತತೆಯ ಅವಧಿಯನ್ನು ಎದುರಿಸುತ್ತಿದೆ ಎಂದು ಹೇಳಿದ ಅವರು 'ಸ್ವದೇಶಿ' (ಭಾರತದಲ್ಲಿ ತಯಾರಿಸಿದ) ಉತ್ಪನ್ನಗಳಿಗೆ ಒತ್ತು ನೀಡಬೇಕು ಎಂದು ಹೇಳಿದರು. ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದ ರ‍್ಯಾಲಿಯಲ್ಲಿ ಅವರು ಮಾತನಾಡಿದರು. ಭಾರತ ತನ್ನ ಆರ್ಥಿಕ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸಲಿದೆ ಮತ್ತು ಪ್ರತಿಯೊಬ್ಬ ನಾಗರಿಕನೂ ಸ್ವದೇಶಿ ಸ್ವದೇಶಿ ಖರೀದಿಸಲು ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.
"ಇಂದು ವಿಶ್ವ ಆರ್ಥಿಕತೆಯು ಅನೇಕ ಏರಿಳಿತಗಳನ್ನು ಎದುರಿಸುತ್ತಿದೆ. ಅನಿಶ್ಚಿತತೆಯ ವಾತಾವರಣವಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಂದು ದೇಶವೂ ತನ್ನದೇ ಆದ ಹಿತಾಸಕ್ತಿಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದೆ. ಭಾರತವು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ದೇಶದ ಹಿತಾಸಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು. ನಮ್ಮ ರೈತರು, ನಮ್ಮ ಕೈಗಾರಿಕೆಗಳು, ನಮ್ಮ ಯುವಜನರಿಗೆ ಉದ್ಯೋಗ, ಅವರ ಹಿತಾಸಕ್ತಿಗಳು - ಇವೆಲ್ಲವೂ ನಮಗೆ ಅತ್ಯಂತ ಮುಖ್ಯ. ಸರ್ಕಾರ ಈ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಪ್ರಧಾನಿ ಹೇಳಿದರು.
भारत को आत्मनिर्भर बनाने के लिए हमें वोकल फॉर लोकल के मंत्र के साथ आज यह संकल्प भी लेना होगा… pic.twitter.com/yCaxUNr3dA
— Narendra Modi (@narendramodi) August 2, 2025
ಈ ಸುದ್ದಿಯನ್ನೂ ಓದಿ: Russian oil imports: ರಷ್ಯಾದಿಂದ ತೈಲ ಆಮದು ನಿಂತಿದೆ ಎನ್ನುವ ವರದಿ ಸುಳ್ಳು: ಕೇಂದ್ರ ಸ್ಪಷ್ಟನೆ
ʼʼಭಾರತೀಯ ನಾಗರಿಕರಾಗಿ ನಮಗೂ ಒಂದಷ್ಟು ಜವಾಬ್ದಾರಿಗಳಿವೆ. ಭಾರತ ವಿಶ್ವದ 3ನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲು ಎಲ್ಲ ರಾಜಕೀಯ ಪಕ್ಷಗಳು, ನಾಯಕರು ದೇಶದ ಹಿತಾಸಕ್ತಿಯ ಬಗ್ಗೆ ಗಮನ ಹರಿಸಬೇಕು. ಜತೆಗೆ ಎಲ್ಲರೂ ಭಾರತದಲ್ಲೇ ತಯಾರಾಗುವ ಉತ್ಪನ್ನಗಳನ್ನು ಖರೀದಿಸುವತ್ತ ಗಮನ ಹರಿಸಬೇಕು. ನಾವು ಏನನ್ನಾದರೂ ಖರೀದಿಸಲು ನಿರ್ಧರಿಸಿದಾಗ, ಭಾರತೀಯರು ಬೆವರು ಸುರಿಸಿ ತಯಾರಿಸಿ ವಸ್ತುಗಳತ್ತ ಗಮನ ಹರಿಸಬೇಕು. ಭಾರತದ ಜನರು, ಭಾರತದ ಜನರ ಕೌಶಲ್ಯವನ್ನು ಬಳಸಿಕೊಂಡು ತಯಾರಿಸಿದ ಯಾವುದೇ ವಸ್ತು ಸ್ವದೇಶಿ ಎನಿಸಿಕೊಳ್ಳುತ್ತದೆ. ನಾವು ವೋಕಲ್ ಫಾರ್ ಲೋಕಲ್ ಮಂತ್ರವನ್ನು ಅಳವಡಿಸಿಕೊಳ್ಳಬೇಕು" ಎಂದು ಅವರು ವಿವರಿಸಿದರು.
'ಮೇಕ್ ಇನ್ ಇಂಡಿಯಾ' ಉತ್ಪನ್ನಗಳಿಗೆ ಉತ್ತೇಜನ ನೀಡಬೇಕು ಎಂದು ಕರೆ ನೀಡಿದ ಅವರು, ಜನರು ತಾವು ಖರೀದಿಸುವ ಎಲ್ಲ ಹೊಸ ವಸ್ತುಗಳು ಸ್ವದೇಶಿ ಆಗಿರಬೇಕು ಎಂದು ಸಂಕಲ್ಪ ಮಾಡಬೇಕು ಆಗ್ರಹಿಸಿದ್ದಾರೆ.
ʼʼವ್ಯಾಪಾರ ಜಗತ್ತಿನ ನನ್ನ ಸಹೋದರ ಸಹೋದರಿಯರಿಗೆ, ಅಂಗಡಿ ಮಾಲೀಕರಿಗೆ ವಿಶೇಷ ವಿನಂತಿಯನ್ನು ಮಾಡಲು ಬಯಸುತ್ತೇನೆ. ನಾವು ಸ್ಥಳೀಯ ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡುತ್ತೇವೆ ಎನ್ನುವ ಸಂಕಲ್ಪ ತೊಡಬೇಕು. ಇದು ನಿಜವಾದ ದೇಶ ಸೇವೆಯಾಗಲಿದೆ. ಪ್ರತಿಯೊಂದು ಕಡೆ ನಾವು ಬೆಳೆಸಿಕೊಳ್ಳುವ ಸ್ವದೇಶಿ ಭಾವನೆ ಭವಿಷ್ಯವನ್ನು ನಿರ್ಧರಿಸುತ್ತದೆ. ಇದು ಮಹಾತ್ಮ ಗಾಂಧಿ ಅವರಿಗೆ ನಾವು ಸಲ್ಲಿಸುವ ನಿಜವಾದ ಗೌರವವೂ ಆಗಿರುತ್ತದೆ. ಸಾಮೂಹಿಕ ಪ್ರಯತ್ನದಿಂದ ಮಾತ್ರ ನಾವು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಬಹುದು" ಎಂದು ಪ್ರಧಾನಿ ಹೇಳಿದರು.