ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

V.S. Achuthanandan: ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್‌.ಅಚ್ಯುತಾನಂದನ್‌ ಇನ್ನಿಲ್ಲ

ಕೇರಳದ ಮಾಜಿ ಮುಖ್ಯಮಂತ್ರಿ, ಕಮ್ಯುನಿಸ್ಟ್‌ ಹಿರಿಯ ನಾಯಕ ವಿ.ಎಸ್‌.ಅಚ್ಯುತಾನಂದನ್‌ ಸೋಮವಾರ (ಜುಲೈ 21) ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 101 ವರ್ಷ ವಯಸ್ಸಾಗಿತ್ತು. ಅವರು 2006ರಿಂದ 2011ರವರೆಗೆ ಕೇರಳದ ಮುಖ್ಯಮಂತ್ರಿಯಾಗಿದ್ದರು. ಹಲವು ಸಮಯಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ವಿ.ಎಸ್‌.ಅಚ್ಯುತಾನಂದನ್‌.

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ, ಕಮ್ಯುನಿಸ್ಟ್‌ ಹಿರಿಯ ನಾಯಕ ವಿ.ಎಸ್‌.ಅಚ್ಯುತಾನಂದನ್‌ (V.S. Achuthanandan) ಸೋಮವಾರ (ಜುಲೈ 21) ತಿರುವನಂತಪುರಂನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 101 ವರ್ಷ ವಯಸ್ಸಾಗಿತ್ತು. ಅವರು 2006ರಿಂದ 2011ರವರೆಗೆ ಕೇರಳದ ಮುಖ್ಯಮಂತ್ರಿಯಾಗಿದ್ದರು. ಹಲವು ಸಮಯಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರ ನಿಧಕ್ಕೆ ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

2019ರಲ್ಲಿ ಅನಾರೋಗ್ಯಕ್ಕೆ ತುತ್ತಾದ ನಂತರ ಅಚ್ಯುತಾನಂದನ್ ಸಾರ್ವಜನಿಕ ಜೀವನದಿಂದ ಹಿಂದೆ ಸರಿದಿದ್ದರು. ಅಂದಿನಿಂದ ಅವರು ತಿರುವನಂತಪುರಂನಲ್ಲಿರುವ ತಮ್ಮ ಮಗ ವಿ. ಅರುಣ್ ಕುಮಾರ್ ಅವರ ನಿವಾಸದಲ್ಲಿ ತಂಗಿದ್ದರು. ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ಅವರು ಕೇರಳದ ಕಮ್ಯುನಿಸ್ಟ್ ಚಳವಳಿಯನ್ನು ಹಲವು ವರ್ಷಗಳ ಕಾಲ ಮುನ್ನಡೆಸಿದ್ದರು. ವಿಶೇಷ ಎಂದರೆ 2006ರಲ್ಲಿ ಮುಖ್ಯಮಂತ್ರಿಯಾದಾಗ ಅವರಿಗೆ 82 ವರ್ಷವಾಗಿತ್ತು.



ಈ ಸುದ್ದಿಯನ್ನೂ ಓದಿ: Entrepreneur T N Rajgopalredy died: ಖ್ಯಾತ ಉದ್ಯಮಿ ಟಿ.ಎನ್.ರಾಜಗೋಪಾಲರೆಡ್ಡಿ ನಿಧನ

ವಿ.ಎಸ್‌.ಅಚ್ಯುತಾನಂದನ್‌ ಅವರ ಹಿನ್ನೆಲೆ

ವೆಲಿಕ್ಕಕಾಥು ಶಂಕರನ್‌ ಅಚ್ಯುತಾನಂದನ್‌ 1923ರ ಅಕ್ಟೋಬರ್‌ 20ರಂದು ಆಲಪ್ಪುಳ ಜಿಲ್ಲೆಯ ಪುನ್ನಪ್ಪಾರಾದಲ್ಲಿ ಜನಿಸಿದರು. 4ನೇ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಮತ್ತು 11ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು. ಹೀಗಾಗಿ ಅವರು 7ನೇ ತರಗತಿಗೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಬೇಕಾಯ್ತು.

ರಾಜಕೀಯಕ್ಕೆ ಎಂಟ್ರಿ

ಅಚ್ಯುತಾನಂದನ್‌ 1938ರಲ್ಲಿ ತಮ್ಮ 15ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಟೈಲರ್‌ ಆಗಿಯೂ ಕಾರ್ಯ ನಿರ್ವಹಿಸಿದರು. 1956ರಲ್ಲಿ ಅವರು ಆಲಪ್ಪುಳ ಜಿಲ್ಲೆಯ ಸಿಪಿಐ ಕಾರ್ಯದರ್ಶಿಯಾಗಿ ನೇಮಕಗೊಂಡರು. 1965ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಅದಾದ ಬಳಿಕ ರಾಜಕೀಯ ಜೀವನದಲ್ಲಿ ಒಂದೊಂದೇ ಹಂತದಲ್ಲಿ ಮೇಲೇರಿ ಮುಖ್ಯಮಂತ್ರಿಯಾದರು. ಅವರು 3 ಬಾರಿ ವಿರೋಧ ಪಕ್ಷದ ನಾಯಕರಾಗಿದ್ದರು.

ಅಚ್ಯುತಾನಂದನ್ ಪತ್ನಿ ಕೆ. ವಸುಮತಿ ಮತ್ತು ಇಬ್ಬರು ಮಕ್ಕಳಾದ ವಿ.ವಿ. ಆಶಾ ಮತ್ತು ವಿ.ಎ. ಅರುಣ್ ಕುಮಾರ್ ಹಾಗೂ ಮೊಮ್ಮಕ್ಕಳು ಅವರನ್ನು ಅಗಲಿದ್ದಾರೆ. ಜುಲೈ 22ರಂದು ಅಚ್ಯುತಾನಂದನ್ ಅವರ ಪಾರ್ಥೀವ ಶರೀರವನ್ನು ಆಳಪ್ಪುಳಕ್ಕೆ ತೆಗೆಕೊಂಡು ಹೋಗಲಾಗುತ್ತದೆ ಮತ್ತು ಜುಲೈ 23ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಜೂನ್‌ 23ರಂದು ಹೃದಯಾಘಾತಕ್ಕೊಳಗಾದ ಅವರನ್ನು ತಿರುವನಂತಪುರಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.