ದೆಹಲಿ: ʼʼಪಾಕಿಸ್ತಾನದ ವಿರುದ್ಧ ನಡೆದ ಕಾರ್ಯಾಚರಣೆಯ ವೇಳೆ ಇಡೀ ವಿಶ್ವದ ಬೆಂಬಲ ಸಿಕ್ಕಿದ್ದರೂ ಕಾಂಗ್ರೆಸ್ ನಮ್ಮೊಂದಿಗೆ ಕೈಜೋಡಿಸಲಿಲ್ಲʼʼ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಷಾದ ವ್ಯಕ್ತಪಡಿಸಿದರು. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ನಡೆದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯ ಚರ್ಚೆಗೆ ಉತ್ತರಿಸಿ ಅವರು ಮಾತನಾಡಿದರು. ʼʼಕಾರ್ಯಾಚರಣೆ ನಿಲ್ಲಿಸುವಂತೆ ವಿಶ್ವದ ಯಾವ ನಾಯಕರೂ ಸೂಚಿಸಲಿಲ್ಲ. ಆಪರೇಷನ್ ಸಿಂದೂರ್ ಮೂಲಕ ಭಾರತೀಯ ಸೇನೆ ಪರಾಕ್ರಮ ಮೆರೆದಿದೆ. ಆಪರೇಷನ್ ಸಿಂದೂರವನ್ನು ಯಶಸ್ವಿಯಾಗಿ ನಡೆಸಿದ ಸೇನೆಗೆ ಧನ್ಯವಾದಗಳು. ಇಡೀ ದೇಶದ ಪರವಾಗಿ ಸೇನೆಗೆ ಅಭಿನಂದನೆಗಳುʼʼ ಎಂದು ಅವರು ಹೇಳಿದರು.
ಪಹಲ್ಗಾಮ್ ದಾಳಿ ನಡೆಸಿದ ಭಯೋತ್ಪಾದಕರು ಪಾಕಿಸ್ತಾನದವರು ಮತ್ತು 26 ಜನರ ಸಾವಿಗೆ ಕಾರಣವಾದ ಈ ದಾಳಿಯನ್ನು ಪಾಕ್ ಉಗ್ರರು ಸಂಘಟಿಸಿದ್ದಾರೆ ಎಂಬ ಸರ್ಕಾರದ ಹೇಳಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಪ್ರಶ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
#OperationSindoor | PM Narendra Modi says, "Armed Forces were given a free hand. They were told to decide the when, where and how...We are proud that terrorists were punished, and it was such a punishment that the terrorist masterminds have sleepless nights even to this day." pic.twitter.com/2DD1pSjYSD
— ANI (@ANI) July 29, 2025
ಈ ಸುದ್ದಿಯನ್ನೂ ಓದಿ: Narendra Modi: ʼʼಏ. 22ರ ಭಯೋತ್ಪಾದಕ ದಾಳಿಗೆ 22 ನಿಮಿಷದಲ್ಲೇ ಸೇಡು ತೀರಿಸಿಕೊಂಡಿದ್ದೇವೆʼʼ: ಮೋದಿ
ಪ್ರಧಾನಿ ಮೋದಿ ಅವರಿಗಿಂತ ಮೊದಲ ಮಾತನಾಡಿದ್ದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಭಾರತ-ಪಾಕ್ ಕದನ ವಿರಾಮಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು. ಆ ಮೂಲಕ ಸರ್ಕಾರವು ಭಾರತೀಯ ವಿದೇಶಾಂಗ ನೀತಿಯ ನಿಯಂತ್ರಣವನ್ನು ಅಮೆರಿಕನ್ನರಿಗೆ ಬಿಟ್ಟುಕೊಟ್ಟಿದೆ ಎಂದು ಆರೋಪಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, "ಆಪರೇಷನ್ ಸಿಂದೂರ್ ನಂತರ ಭಾರತಕ್ಕೆ ದೊರೆತ ಜಾಗತಿಕ ಬೆಂಬಲದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ವಿಶ್ವದ ಯಾವುದೇ ದೇಶವು ಭಾರತದ ಕಾರ್ಯಾಚರಣೆಯನ್ನು ತಡೆಯಲಿಲ್ಲ. ವಾಸ್ತವವಾಗಿ 193 ದೇಶಗಳಲ್ಲಿ ಕೇವಲ ಮೂರು ದೇಶಗಳು ಪಾಕಿಸ್ತಾನವನ್ನು ಬೆಂಬಲಿಸಿದವು" ಎಂದು ಪ್ರಧಾನಿ ಹೇಳಿದರು.
"ಭಾರತಕ್ಕೆ ಇಡೀ ಪ್ರಪಂಚದ ಬೆಂಬಲ ಸಿಕ್ಕಿತು. ಯಾವುದೇ ವಿಶ್ವ ನಾಯಕರು ಕಾರ್ಯಾಚರಣೆ ನಿಲ್ಲಿಸುವಂತೆ ಭಾರತಕ್ಕೆ ಸೂಚಿಸಲಿಲ್ಲ. ಆದರೆ ಕಾಂಗ್ರೆಸ್ ನಮ್ಮ ಸೈನಿಕರ ಶೌರ್ಯವನ್ನು ಬೆಂಬಲಿಸದಿರುವುದು ವಿಷಾದನೀಯ" ಎಂದು ಪ್ರಧಾನಿ ಪುನರುಚ್ಚರಿಸಿದರು.
ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಭಾರತ ಮತ್ತು ಪಾಕಿಸ್ತಾನಗಳು ಈ ಹಿಂದೆಯೂ ಸಂಘರ್ಷದಲ್ಲಿ ತೊಡಗಿದ್ದರೂ, ಪಾಕ್‌ನ ಭೇದಿಸಲಾಗದ ಗುರಿಗಳ ಮೇಲೆ ದಾಳಿ ನಡೆಸಿದ್ದು ಇದೇ ಮೊದಲು ಎಂದು ತಿಳಿಸಿದರು. "ಭಾರತೀಯ ಪಡೆಗಳು ಪಾಕ್ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಿವೆ" ಎಂದು ಒತ್ತಿ ಹೇಳಿದರು.
1,000 ಡ್ರೋನ್ ಧ್ವಂಸ
ʼʼಭಾರತವು ಮೇ 10ರಂದು ಮುರೀದ್ ಮತ್ತು ನೂರ್ ಖಾನ್ ಸೇರಿದಂತೆ ಪಾಕಿಸ್ತಾನದ ಹಲವು ವಾಯುನೆಲೆಗಳ ಮೇಲೆ ದಾಳಿ ನಡೆಸಿತು. ಪಾಕಿಸ್ತಾನವು ಭಾರತದಲ್ಲಿನ ವಾಯುನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಬಳಿಕವಷ್ಟೇ ಪ್ರತಿದಾಳಿ ನಡೆಸಿದ್ದೇವೆ. ಆಪರೇಷನ್ ಸಿಂದೂರ್ ವೇಳೆ ಭಾರತೀಯ ಸೇನೆ ಪಾಕಿಸ್ತಾನದ ಸುಮಾರು 1,000 ಡ್ರೋನ್‌ಗಳನ್ನು ಹೊಡೆದುರುಳಿಸಿದೆʼʼ ಎಂದು ಸ್ಪಷ್ಟಪಡಿಸಿದರು.
ʼʼಮೇ 9ರ ರಾತ್ರಿ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನನ್ನೊಂದಿಗೆ ಮಾತನಾಡಿ ಪಾಕಿಸ್ತಾನ ಭಾರತದ ವಿರುದ್ಧ ದಾಳಿ ನಡೆಸಲಿದೆ ಎಂದು ಎಚ್ಚರಿಸಿದ್ದರು. ಇದು ಪಾಕಿಸ್ತಾನದ ಉದ್ದೇಶವಾಗಿದ್ದರೆ ಅದು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದೆʼʼ ಎಂಬುದಾಗಿ ಮೋದಿ ವಿವರಿಸಿದರು.