ದೆಹಲಿ: ʼʼಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತ 22 ನಿಮಿಷದಲ್ಲೇ ಸೇಡು ತೀರಿಸಿಕೊಂಡಿದೆ. ಮೇ 6 ಮತ್ತು 7ನೇ ತಾರೀಕಿನ ಮಧ್ಯೆ ನಡೆದ ಆಪರೇಷನ್ ಸಿಂದೂರ್ (Operation Sindoor) ಮೂಲಕ ಕೇವಲ 22 ನಿಮಿಷಗಳ ಕಾರ್ಯಾಚರಣೆಯಲ್ಲಿ ಉಗ್ರರ ತಾಣಗಳನ್ನು ಧ್ವಂಸಗೊಳಿಸಿದ್ದೇವೆʼʼ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಆಪರೇಷನ್ ಸಿಂದೂರ್ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಅವರು ಮಾತನಾಡಿದರು (Parliament Monsoon Session). ಈ ವೇಳೆ ಅವರು ಕಾರ್ಯಾಚರಣೆಗೆ ಬೆಂಬಲ ನೀಡಿದ ಭಾರತದ 140 ಕೋಟಿ ನಾಗರಿಕರಿಗೆ ಧನ್ಯವಾದ ಅರ್ಪಿಸಿದರು.
ʼʼಆಪರೇಷನ್ ಸಿಂದೂರ್ ಸಮಯದಲ್ಲಿ ಅಚಲ ಬೆಂಬಲ ನೀಡಿದ ಭಾರತದ 140 ಕೋಟಿ ನಾಗರಿಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅವರ ನಂಬಿಕೆ ಮತ್ತು ಒಗ್ಗಟ್ಟಿಗೆ ನಾನು ಋಣಿʼʼ ಎಂದು ಹೇಳಿದರು.
ʼʼಪಹಲ್ಗಾಮ್‌ನಲ್ಲಿ ಪ್ರವಾಸಿಗರ ವೇಳೆ ನಡೆದ ದಾಳಿ ಅತ್ಯಂತ ಕ್ರೂರವಾದುದು. ಅದರಲ್ಲಿಯೂ ಪ್ರವಾಸಿಗರ ಧರ್ಮವನ್ನು ಪರಿಶೀಲಿಸಿ ದಾಳಿ ನಡೆಸಿದ್ದು ಖಂಡನೀಯ. ದಾಳಿ ನಡೆದ ಏ. 22ರಂದು ನಾನು ವಿದೇಶದಲ್ಲಿದೆ. ಕೂಡಲೇ ಭಾರತಕ್ಕೆ ಮರಳಿ ಉನ್ನತ ಮಟ್ಟದ ಸಭೆ ನಡೆಸಿದೆ. ಈ ವೇಳೆ ಉಗ್ರರಿಗೆ ಸರಿಯಾಗಿ ತಿರುಗೇಟು ನೀಡಬೇಕೆಂದು ನಿರ್ಧರಿಸಿದೆವು. ಹೀಗಾಗಿ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರ ನೀಡಿದೆವುʼʼ ಎಂದು ತಿಳಿಸಿದರು.
ʼʼನಮ್ಮ ಸೇನೆ ಪಾಕಿಸ್ತಾನದಲ್ಲಿದ್ದ ಉಗ್ರರ ತಾಣಗಳನ್ನು ಧ್ವಂಸಗೊಳಿಸಿದೆ. ಭಾರತ ಯಾವತ್ತೂ ಪಾಕಿಸ್ತಾನದ ಅಣ್ವಸ್ತ್ರ ಬ್ಲ್ಯಾಕ್‌ಮೇಲ್‌ಗೆ ಹೆದರುವುದಿಲ್ಲ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಅವರ ತಾಣಗಳು ಈಗಲೂ ದುಸ್ಥಿತಿಯಲ್ಲಿವೆʼʼ ಎಂದು ವಿವರಿಸಿದರು.