ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

No-Fly Zone: ತಿರುಮಲ ದೇವಸ್ಥಾನದ ಮೇಲೆ ವಿಮಾನ ಹಾರಾಟ; ನೋ ಫ್ಲೈ ಝೋನ್‌ ಘೋಷಿಸಲು ಹೆಚ್ಚಾಯ್ತು ಆಗ್ರಹ

Tirumala Temple: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಮೇಲೆ ಭಾನುವಾರ (ಜೂ. 1) ವಿಮಾನವೊಂದು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ್ದು, ಈ ಪ್ರದೇಶವನ್ನು ನೋ ಫ್ಲೈಯಿಂಗ್‌ ಝೋನ್‌ ಆಗಿ ಘೋಷಿಸಬೇಕೆಂಬ ಕೂಗು ಜೋರಾಗಿದೆ. ಆಗಮ ಶಾಸ್ತ್ರದ ಪ್ರಕಾರ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿಯ ಮೇಲೆ ವಿಮಾನ, ಹೆಲಿಕಾಪ್ಟರ್‌, ಡ್ರೋನ್‌ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ತಿರುಪತಿ: ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ (Tirumala Temple) ಮೇಲೆ ಭಾನುವಾರ (ಜೂ. 1) ವಿಮಾನವೊಂದು ಕಡಿಮೆ ಎತ್ತರದಲ್ಲಿ ಹಾರಾಟ ನಡೆಸಿದ್ದು, ಭಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ದೇವಾಲಯದ ಪಾವಿತ್ರ್ಯದ ಉಲ್ಲಂಘನೆಯ ಆರೋಪ ಕೇಳಿ ಬಂದಿದೆ. ಆಗಮ ಶಾಸ್ತ್ರದ ಪ್ರಕಾರ ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನದ ಗರ್ಭಗುಡಿಯ ಮೇಲೆ ವಿಮಾನ, ಹೆಲಿಕಾಪ್ಟರ್‌, ಡ್ರೋನ್‌ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೀಗಾಗಿ ಈ ಪ್ರದೇಶವನ್ನು ವಿಮಾನ ಹಾರಾಟ ನಿಷೇಧ ವಲಯ (No-Fly Zone) ಆಗಿ ಘೋಷಿಸಬೇಕೆಂಬ ಕೂಗು ಜೋರಾಗಿದೆ.

ತಿರುಮಲ ದೇವಸ್ಥಾನದ ಮೇಲೆ ಹಾರುತ್ತಿರುವ ವಿಮಾನದ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಪ್ರದೇಶವನ್ನು ನೋ ಫ್ಲೈ ಝೋನ್‌ ಎಂದು ಘೋಷಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎನ್ನುವ ಟೀಕೆಯೂ ಕೇಳಿ ಬಂದಿದೆ.

ದೇವಾಸ್ಥಾನದ ಮೇಲೆ ವಿಮಾನಗಳ ಹಾರಾಟ ಧಾರ್ಮಿಕ ಸಂಪ್ರದಾಯಗಳನ್ನು ಉಲ್ಲಂಘಿಸುತ್ತದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ (TTD)ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಹಾರಾಡಿದ ವಿಮಾನ:



ಈ ಸುದ್ದಿಯನ್ನೂ ಓದಿ: ಶಾಕಿಂಗ್‌: ತಿರುಮಲ ದೇವಸ್ಥಾನದ ಬಳಿ ಮುಸ್ಲಿಂ ವ್ಯಕ್ತಿಯಿಂದ ನಮಾಜ್‌; ವಿವಾದ ಸೃಷ್ಟಿಸಿದ ವೈರಲ್‌ ವಿಡಿಯೊ ಇಲ್ಲಿದೆ

ಕೇಂದ್ರಕ್ಕೆ ಮನವಿ

ತಿರುಪತಿಯ ವೆಂಕಟೇಶ್ವರ ಸ್ವಾಮಿ ದೇಗುಲದ ಇಡೀ ಪ್ರದೇಶವನ್ನು ನೋ ಫ್ಲೈ ಝೋನ್‌ ಎಂದು ಘೋಷಿಸುವಂತೆ ಕೋರಿ ಕಳೆದ ಮಾರ್ಚ್‌ನಲ್ಲಿ ತಿರುಪತಿ ತಿರುಮಲ ದೇವಸ್ಥಾನಂ ಆಡಳಿತ ಮಂಡಳಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿತ್ತು. ದೇವಾಲಯದ ಪಾವಿತ್ರ್ಯತೆ ಸುರಕ್ಷತೆ ಮತ್ತು ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ತಿರುಮಲವನ್ನು ನೋ ಫ್ಲೈ ಝೋನ್‌ ಎಂದು ಘೋಷಿಸುವಂತೆ ಟಿಟಿಡಿ ಆಡಳಿತ ಮಂಡಳಿ ಅಧ್ಯಕ್ಷ ಬಿ.ಆರ್‌.ನಾಯ್ಡು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ ನಾಯ್ಡು ಅವರಿಗೆ ಪತ್ರ ಬರೆದಿದ್ದರು.

ತಿರುಮಲ ಬೆಟ್ಟದ ವಾಯು ಪ್ರದೇಶದಲ್ಲಿ ಕಡಿಮೆ ಎತ್ತರದಲ್ಲಿ ಹಾರಾಟ ನಡೆಸುವ ವಿಮಾನಗಳು ಮತ್ತು ಹೆಲಿಕಾಪ್ಟರ್‌ ದೇವಸ್ಥಾನದ ಪವಿತ್ರ ವಾತಾವರಣವನ್ನು ಹಾಳು ಮಾಡುತ್ತಿದೆ ಎಂದು ತಿಳಿಸಿದ್ದರು. ವಿಮಾನಗಳು ಪರ್ಯಾಯ ಮಾರ್ಗಗಳನ್ನು ಆಯ್ಕೆ ಮಾಡಲು ನ್ಯಾವಿಗೇಷನ್‌ ಮತ್ತು ಏರ್‌ ಟ್ರಾಫಿಕ್‌ ಕಂಟ್ರೋಲ್‌ (ATC) ಜತೆ ಚರ್ಚೆ ನಡೆಸುತ್ತಿರುವುದಾಗಿ ಸಚಿವರು ಪ್ರತಿಕ್ರಿಯಿಸಿದ್ದರು. ಇದೀಗ ನೋ ಫ್ಲೈ ಝೋನ್‌ ಕೂಗಿಗೆ ಇನ್ನಷ್ಟು ಬಲ ಸಿಕ್ಕಿದೆ.

ನಿಯಮ ಏನು ಹೇಳುತ್ತದೆ?

ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಎಲ್ಲ ಪೂಜೆಗಳು ಮತ್ತು ಸೇವೆಗಳನನು ಸಾವಿರಾರು ವರ್ಷಗಳ ಹಿಂದೆ ವೈಖಾನಸ ಋಷಿ ಸ್ಥಾಪಿಸಿದ ನಿಯಮಗಳ ಪ್ರಕಾರ ನಡೆಸಲಾಗುತ್ತವೆ. ಈ ನಿಯಮಗಳು ವೈಖಾನಸ ಭಗವತ್ ಆಗಮ ಶಾಸ್ತ್ರದಲ್ಲಿ ಉಲ್ಲೇಖಿತವಾಗಿವೆ. ಅದರ ಪ್ರಕಾರ, ದೇವಾಲಯದ ಮೇಲೆ ಯಾವುದೇ ರೀತಿಯ ಸಂಚಾರ ಅಥವಾ ವಿಮಾನ ಹಾರಾಟಕ್ಕೆ ಅನುಮತಿ ಇಲ್ಲ.

ತಿರುಮಲ ದೇವಸ್ಥಾನದ ಮೇಲಿನ ವಾಯುಪ್ರದೇಶವನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಅಧಿಕೃತವಾಗಿ 'ನೋ ಫ್ಲೈ ಝೋನ್' ಎಂದು ಘೋಷಿಸಿಲ್ಲ. ಅದಾಗ್ಯೂ ಭಕ್ತರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳನ್ನು ತಿರುಮಲ ದೇವಾಲಯದ ಮುಖ್ಯ ಗರ್ಭಗುಡಿ 'ಆನಂದ ನಿಲಯ'ದ ಹಾರಾಟ ನಡೆಸುವುದನ್ನು ತಪ್ಪಿಸುತ್ತಿದ್ದವು. ಆದರೆ ಇತ್ತೀಚೆಗೆ ಇಲ್ಲಿ ಹಾರಾಟ ನಡೆಸುತ್ತಿರುವುದು ಕಂಡು ಬಂದಿದೆ.