ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IndiGo Flight: ದಿಲ್ಲಿಯಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಆಲಿಕಲ್ಲು ಮಳೆಯಿಂದ ಹಾನಿ; 227 ಪ್ರಯಾಣಿಕರು ಪಾರು

Turbulence: 200ಕ್ಕಿಂತ ಅಧಿಕ ಪ್ರಯಾಣಿಕರನ್ನು ಹೊತ್ತು ದಿಲ್ಲಿಯಿಂದ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ ತೀವ್ರ ಗಾಳಿಯ ಕ್ಷೋಭೆ ಅಥವಾ ಪ್ರಕ್ಷುಬ್ಧತೆಗೆ ಸಿಲುಕಿದ ಘಟನೆ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಹೊಸದಿಲ್ಲಿ: 200ಕ್ಕಿಂತ ಅಧಿಕ ಪ್ರಯಾಣಿಕರನ್ನು ಹೊತ್ತು ದಿಲ್ಲಿಯಿಂದ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನ (IndiGo Flight) ತೀವ್ರ ಗಾಳಿಯ ಕ್ಷೋಭೆ ಅಥವಾ ಪ್ರಕ್ಷುಬ್ಧತೆ (Turbulence)ಗೆ ಸಿಲುಕಿದ ಘಟನೆ ನಡೆದಿದೆ. ಅದೃಷ್ಟವಶಾತ್‌ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ. ವಿಮಾನಕ್ಕೆ ಚಿಕ್ಕ-ಪುಟ್ಟ ಹಾನಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇಂಡಿಗೋ 6ಇ2142 (6E2142) ವಿಮಾನ ಇದ್ದಕ್ಕಿದ್ದಂತೆ ಅಲುಗಾಡ ತೊಡಗಿದ್ದು, ಪ್ರಯಾಣಿಕರು, ಮಕ್ಕಳು ಭಯದಿಂದ ಕಿರುಚಾಡುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ʼʼಪ್ರಕ್ಷುಬ್ಧ ಹವಾಮಾನದಿಂದಾಗಿ ವಿಮಾನ ಟರ್ಬುಲೆನ್ಸ್‌ಗೆ ತುತ್ತಾಗಿದ್ದು, ಪೈಲಟ್ ಶ್ರೀನಗರದ ವಾಯು ಸಂಚಾರ ನಿಯಂತ್ರಣಕ್ಕೆ ತುರ್ತು ವರದಿ ಮಾಡಿದರು. ಕೊನೆಗೆ 227 ಪ್ರಯಾಣಿಕರಿದ್ದ ವಿಮಾನವು ಸಂಜೆ 6.30ಕ್ಕೆ ಸುರಕ್ಷಿತವಾಗಿ ಶ್ರೀನಗರಕ್ಕೆ ಬಂದಿಳಿಯಿತುʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Operation Sindoor: ಗಡಿ ಪ್ರದೇಶಗಳಲ್ಲಿ ಹೆಚ್ಚಿದ ಭದ್ರತೆ; ಇಂಡಿಗೋ, ಏರ್‌ ಇಂಡಿಯಾ ವಿಮಾನಗಳ ಹಾರಾಟ ರದ್ದು

"ಹಠಾತ್ ಆಲಿಕಲ್ಲು ಮಳೆಯಿಂದ ದಿಲ್ಲಿಯಿಂದ ಶ್ರೀನಗರಕ್ಕೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6ಇ2142 ಮಾರ್ಗಮಧ್ಯೆ ಪ್ರಕ್ಷುಬ್ಧತೆ ಎದುರಿಸಿತು. ಕೂಡಲೇ ವಿಮಾನ ಮತ್ತು ಕ್ಯಾಬಿನ್ ಸಿಬ್ಬಂದಿ ನಿಯಮ ಪಾಲಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ ಮತ್ತು ವಿಮಾನವು ಶ್ರೀನಗರದಲ್ಲಿ ಸುರಕ್ಷಿತವಾಗಿ ಇಳಿಯಿತು" ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

"ವಿಮಾನ ಬಂದಿಳಿದ ಬಂದ ನಂತರ ನಿಲ್ದಾಣ ತಂಡವು ಗ್ರಾಹಕರ ಯೋಗಕ್ಷೇಮ ಮತ್ತು ಸೌಕರ್ಯಕ್ಕೆ ಆದ್ಯತೆ ನೀಡಿತು. ಬಳಿಕ ವಿಮಾನವನ್ನು ಅಗತ್ಯ ತಪಾಸಣೆಗೆ ಒಳಪಡಿಸಲಾಯಿತುʼʼ ಎಂದು ಹೇಳಿದೆ. ಎಲ್ಲ 227 ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ವಿಮಾನಯಾನ ಸಂಸ್ಥೆಯು ಯಾವುದೇ ಹಾನಿಯನ್ನು ದೃಢಪಡಿಸಿಲ್ಲ. ಅದಾಗ್ಯೂ ವೈರಲ್ ಆಗಿರುವ ವಿಡಿಯೊದಲ್ಲಿ ಪ್ರಕ್ಷುಬ್ಧತೆಯ ಪ್ರಭಾವದಿಂದಾಗಿ ವಿಮಾನದ ಮುಂಭಾಗಕ್ಕೆ ಹಾನಿಯಾಗಿರುವುದು ಕಂಡುಬಂದಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಬುಧವಾರ (ಮೇ 21) ಸಂಜೆ ದೆಹಲಿ-ಎನ್‌ಸಿಆರ್‌ನಲ್ಲಿ ಗಂಟೆಗೆ 79 ಕಿ.ಮೀ. ವೇಗದಲ್ಲಿ ಗಾಳಿಯೊಂದಿಗೆ ಭಾರೀ ಮಳೆಯೊಂದಿಗೆ ಆಲಿಕಲ್ಲು ಮಳೆ ಸುರಿದ ಪರಿಣಾಮ ಹಲವು ಪ್ರದೇಶಗಳಲ್ಲಿ ಸಮಸ್ಯೆ ಎದುರಾಯಿತು.

ಏನಿದು ಪ್ರಕ್ಷುಬ್ಧತೆ?

ವಿಮಾನ ಹಾರಲು ನೆರವಾಗುವ ಗಾಳಿಯ ಒತ್ತಡದಲ್ಲಿ ದಿಢೀರ್‌ ಬದಲಾವಣೆಯಾಗುವುದನ್ನು ಪ್ರಕ್ಷುಬ್ಧತೆ ಎಂದು ಕರೆಯಲಾಗುತ್ತದೆ. ಹವಾಮಾನ ವೈಪರೀತ್ಯದಿಂದ ಇದು ಸಂಭವಿಸುತ್ತದೆ. ಇದರಿಂದಾಗಿ ಹಾರುವ ವಿಮಾನವು ಏಕಾಏಕಿ ಅಲುಗಾಡಲು ಶುರುವಾಗುತ್ತದೆ. ಒಂದು ವಿಮಾನ ಹಾರುವಾಗ ಅದರ ಮೇಲೆ ಹಾಗೂ ಕೆಳಗೆ ಗಾಳಿಯ ಚಲನೆ ಅಥವಾ ಒತ್ತಡ ಇರುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ಗಾಳಿಯ ಒತ್ತಡದಲ್ಲಿ ಏರುಪೇರಾಗುವುದು ಸಹಜ. ಹೀಗೆ ಹವಾಮಾನದಲ್ಲಿ ಏಕಾಏಕಿ ಬದಲಾವಣೆಯಾದಾಗ ವಿಮಾನವು ತೊಂದರೆಗೆ ಸಿಲುಕುತ್ತದೆ ಎಂದು ತಜ್ಞರು ವಿವರಿಸುತ್ತಾರೆ.

ಟರ್ಬುಲೆನ್ಸ್‌ ಅಪಾಯಕಾರಿಯೇ?

ಕಳೆದ ವರ್ಷ ಸಿಂಗಾಪುರ ಏರ್‌ಲೈನ್ಸ್‌ ಕಂಪನಿಯ ವಿಮಾನವೊಂದು ತೀವ್ರ ಟರ್ಬುಲೆನ್ಸ್‌ಗೆ ಸಿಲುಕಿ 3 ನಿಮಿಷಗಳ ಅವಧಿಯಲ್ಲಿ 6 ಸಾವಿರ ಅಡಿಗಷ್ಟು ಕೆಳಗೆ ಕುಸಿದಿತ್ತು. ಇದರಿಂದ ವಿಮಾನದಲ್ಲಿದ್ದ ಬ್ರಿಟಿಷ್‌ ಪ್ರಜೆಯೊಬ್ಬರು ಮೃತಪಟ್ಟಿದ್ದರು. ಜತೆಗೆ 20ಕ್ಕೂ ಹೆಚ್ಚು ಮಂದಿ ಗಾಯವಾಗಿತ್ತು. ವಿಮಾನ ಲಂಡನ್‌ನ ಹೀಥ್ರೂ ನಿಲ್ದಾಣದಿಂದ ಸಿಂಗಾಪುರಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿತ್ತು.