ನವದೆಹಲಿ: ಕಳೆದ ಕೆಲವು ದಿನಗಳಿಂದ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ(PM Narendra Modi)ತಾಯಿಯ ಡೀಪ್ ಫೇಕ್ ವಿಡಿಯೊವನ್ನು ಎಲ್ಲಾ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ತೆಗೆದುಹಾಕುವಂತೆ ಪಾಟ್ನಾ ಹೈಕೋರ್ಟ್ ಬುಧವಾರ ಕಾಂಗ್ರೆಸ್‌ಗೆ ಆದೇಶಿಸಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಪಿ.ಬಿ. ಬಜಂತ್ರಿ ಈ ಆದೇಶ ಹೊರಡಿಸಿದ್ದಾರೆ.
ಕಾಂಗ್ರೆಸ್ ಬಿಹಾರ ಘಟಕವು ಎಐ-ರಚಿತ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ಕಾಂಗ್ರೆಸ್ ಪಕ್ಷವು ತೀವ್ರ ಟೀಕೆಗೆ ಗುರಿಯಾಗಿದೆ. ವಿಡಿಯೊದಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ದಿವಂಗತ ತಾಯಿ ಹೀರಾಬೆನ್ ಮೋದಿ ಬಗ್ಗೆ ಕನಸು ಕಾಣುತ್ತಿರುವುದನ್ನು ತೋರಿಸುತ್ತದೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. ವಿಡಿಯೋದಲ್ಲಿ ಪ್ರಧಾನಿ ಮೋದಿ ಹಾಗೂ ಅವರ ತಾಯಿ ಹೀರಾಬೆನ್ ಮೋದಿ ಹೋಲುವ ದೃಶ್ಯ ಸೃಷ್ಟಿಸಲಾಗಿದ್ದು, ವಿಡಿಯೋದಲ್ಲಿ ಮಗನೇ ತಮ್ಮನ್ನು ರಾಜಕೀಯಕ್ಕೆ ಎಳೆದು ತಂದಿರುವುದಕ್ಕೆ ಹೀರಾಬೆನ್ ಅವರು ದುಃಖ ವ್ಯಕ್ತಪಡಿಸುತ್ತಿರುವುದಾಗಿ ತೋರಿಸಲಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ: Narendra Modi: ವಾರಣಾಸಿಯಲ್ಲಿ ಮಾರಿಷಸ್ ಪ್ರಧಾನಿಯನ್ನು ಭೇಟಿಯಾದ ಪ್ರಧಾನಿ ಮೋದಿ
ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ದಿವಂಗತ ತಾಯಿಯ ಪ್ರತಿಷ್ಠೆಗೆ ಧಕ್ಕೆ ತರುವ AI ರಚಿತ ವಿಡಿಯೊವನ್ನು ಪ್ರಸಾರ ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ದೆಹಲಿ ಚುನಾವಣಾ ಕೋಶದ ಸಂಚಾಲಕ ಸಂಕೇತ್ ಗುಪ್ತಾ ಅವರು ದೂರು ದಾಖಲಿಸಿದ್ದರು. ದೂರಿನನ್ವಯ ಎಫ್‌ಐಆರ್ ದಾಖಲಿಸಲಾಯಿತು. ಆದಾಗ್ಯೂ, ಪ್ರಧಾನಿ ಅಥವಾ ಅವರ ತಾಯಿಯ ಬಗ್ಗೆ ಯಾವುದೇ ಅಗೌರವ ತೋರಿಸಲಾಗಿಲ್ಲ ಎಂದು ಕಾಂಗ್ರೆಸ್ ಸಮರ್ಥಿಸಿಕೊಂಡಿದೆ. ಕಳೆದ ವಾರ, ಬಿಹಾರ ಕಾಂಗ್ರೆಸ್ ಕೂಡ ವಿಡಿಯೊದ ಬಗ್ಗೆ ಆಂತರಿಕ ತನಿಖೆಯನ್ನು ಪ್ರಾರಂಭಿಸಿದೆ ಎಂದು ಹೇಳಿತ್ತು.