ದೆಹಲಿ: ಪಾಕಿಸ್ತಾನದ ಉಗ್ರರನ್ನು ಗುರಿಯಾಗಿಸಿಕೊಂಡು ಮೇಯಲ್ಲಿ ಭಾರತ ನಡೆಸಿದ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಕದನ ವಿರಾಮಕ್ಕೆ ಪಾಕ್ ಕಡೆಯಿಂದಲೇ ಮನವಿ ಬಂದಿತ್ತು ಎಂದು ತಿಳಿಸಿದರು. ಭಾರತ ಈ ರೀತಿ ಪ್ರತಿದಾಳಿ ನಡೆಸಲಿದೆ ಎನ್ನುವ ಕಲ್ಪನೆಯೂ ಪಾಕಿಸ್ತಾನಕ್ಕೆ ಇರಲಿಲ್ಲ ಎಂದು ಹೇಳಿದರು.
ʼʼಭಾರತದ ಪ್ರತಿದಾಳಿಗೆ ಬೆಚ್ಚಿಬಿದ್ದ ಪಾಕಿಸ್ತಾನ ನಮ್ಮ ಡಿಜಿಎಂಒ (ಮಿಲಿಟರಿ ವ್ಯವಹಾರಗಳ ಮಹಾನಿರ್ದೇಶಕರು) ಅವರಿಗೆ ಕರೆ ಮಾಡಿ ದಾಳಿಯನ್ನು ಈಗ ನಿಲ್ಲಿಸಿ. ನೀವು ನಮ್ಮನ್ನು ಸೋಲಿಸಿದ್ದೀರಿ. ಇನ್ನು ದಾಳಿಯನ್ನು ನಾವು ಸಹಿಸಲಾರೆವು ಎಂದು ಹೇಳಿತ್ತು. ಮೇ 7ರಂದು ನಮ್ಮ ಗುರಿಯನ್ನು ಸಾಧಿಸಿದ್ದೇವೆ. ಪ್ರತಿದಾಳಿ ಮಾಡಿದರೆ ಪರಿಣಾಮ ನೆಟ್ಟಗಿರಲ್ಲ ಎನ್ನುವ ಸಂದೇಶ ರವಾನಿಸಿದೆವು. ಇದು ಭಾರತದ ಸ್ಪಷ್ಟ ರಾಜಕೀಯ ಮತ್ತು ಮಿಲಿಟರಿ ಕಾರ್ಯತಂತ್ರದ ಭಾಗʼʼ ಎಂದು ಮೋದಿ ತಿಳಿಸಿದರು.
ಈ ಸುದ್ದಿಯನ್ನೂ ಓದಿ: Narendra Modi: ʼʼಏ. 22ರ ಭಯೋತ್ಪಾದಕ ದಾಳಿಗೆ 22 ನಿಮಿಷದಲ್ಲೇ ಸೇಡು ತೀರಿಸಿಕೊಂಡಿದ್ದೇವೆʼʼ: ಮೋದಿ
ಮೋದಿ ಅವರ ಭಾಷಣದ ಹೈಲೈಟ್ ಇಲ್ಲಿದೆ:
- ಪಹಲ್ಗಾಮ್ ದಾಳಿ ನಡೆದ ಏ. 22ರಂದು ನಾನು ವಿದೇಶದಲ್ಲಿದ್ದೆ. ಹಿಂದಿರುಗಿದ ನಂತರ ಉನ್ನತ ಮಟ್ಟದ ಸಭೆ ಕರೆದು, ಭಯೋತ್ಪಾದನೆಗೆ ಸೂಕ್ತ ಪ್ರತ್ಯುತ್ತರ ನೀಡುವಂತೆ ಸೂಚಿಸಿದ್ದೆ.
- ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನನಗೆ ಹೆಮ್ಮೆ ಇದೆ. ಕಾರ್ಯಾಚರಣೆಗೆ ವೇಳೆ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಯಿತು. ಕಾರ್ಯಾಚರಣೆಯನ್ನು ಯಾವಾಗ, ಎಲ್ಲಿ ಮತ್ತು ಹೇಗೆ ನಡೆಸಬೇಕೆಂದು ನಿರ್ಧರಿಸುವಂತೆ ನಾವು ಅವರಿಗೆ ಹೇಳಿದೆವು. ನಾವು ಅವರಿಗೆ ಕಠಿಣ ಪಾಠ ಕಲಿಸಿದೆವು. ಇಂದಿಗೂ ಪಾಕಿಸ್ತಾನದವರು ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ.
- ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನಿ ಪಡೆಗಳು ಭಾರತದಿಂದ ಪ್ರತಿದಾಳಿ ನಿರೀಕ್ಷಿಸಿದ್ದವು. ಅವರು ನಮಗೆ ಪರಮಾಣು ಬೆದರಿಕೆ ಒಡ್ಡಿದರು. ಮೇ 6-7ರ ರಾತ್ರಿ ನಾವು ಬಯಸಿದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ ಮತ್ತು ಪಾಕಿಸ್ತಾನಕ್ಕೆ ಏನೂ ಮಾಡಲು ಸಾಧ್ಯವಾಗಲಿಲ್ಲ. 22 ನಿಮಿಷಗಳಲ್ಲಿ ಏ. 22ರ ದಾಳಿಗೆ ನಾವು ಸೇಡು ತೀರಿಸಿಕೊಂಡೆವು.
- ನಮ್ಮ ಪಡೆಗಳು ಭಯೋತ್ಪಾದಕ ಕೇಂದ್ರಗಳನ್ನು ನಾಶ ಮಾಡಿದವು.
- ಭಾರತವು ಯಾವ ರೀತಿ ಕಾರ್ಯನಿರ್ವಹಿಸಬಹುದು ಎನ್ನುವುದನ್ನು ಜಗತ್ತು ನೋಡಿದೆ. ಭಾರತದ ಮೇಲೆ ದಾಳಿ ನಡೆಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಪಾಕಿಸ್ತಾನ ಮತ್ತು ಭಯೋತ್ಪಾದಕ ನಾಯಕರು ಆಪರೇಷನ್ ಸಿಂದೂರ್ ಮೂಲಕ ಅರಿತುಕೊಂಡಿದ್ದಾರೆ.
- ಏ. 22ರ ದಾಳಿಯ 3-4 ದಿನಗಳ ನಂತರ ಕಾಂಗ್ರೆಸ್ ನಾಯಕರು ಮೋದಿ ವಿಫಲರಾದರು. ಮೋದಿ ಎಲ್ಲಿದ್ದಾರೆ? ಎಂದೆಲ್ಲ ಪ್ರಶ್ನೆಗಳನ್ನು ಕೇಳ ತೊಡಗಿದರು. ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಅವರು ನನ್ನ ಮೇಲೆ ದಾಳಿ ಮಾಡುತ್ತಿದ್ದರು. ಅವರ ಹೇಳಿಕೆಗಳು ನಮ್ಮ ಸೇನಾ ಪಡೆಗಳ ಮನೋಬಲವನ್ನು ಕುಗ್ಗಿಸುತ್ತಿದ್ದವು. ಅವರು ಸೇನೆಯನ್ನು ನಂಬುವುದಿಲ್ಲ ಮತ್ತು ಅದಕ್ಕಾಗಿಯೇ ಅವರು ಆಪರೇಷನ್ ಸಿಂಧೂರ್ ಅನ್ನು ಪ್ರಶ್ನಿಸುತ್ತಿದ್ದಾರೆ. ನೀವು ಜನರ ಹೃದಯದಲ್ಲಿ ಜಾಗ ಪಡೆಯಲು ಸಾಧ್ಯವಿಲ್ಲ.
- ಇಂದಿನ ಭಾರತವು ಆತ್ಮವಿಶ್ವಾಸ, ಸ್ವಾವಲಂಬನೆಯಿಂದ ಕೂಡಿದೆ. ಜತೆಗೆ ಪೂರ್ಣ ಆತ್ಮವಿಶ್ವಾಸದಿಂದ ಮುಂದುವರಿಯುತ್ತಿದೆ. ಭಾರತವು ಸ್ವಾವಲಂಬನೆಯೊಂದಿಗೆ ಮುಂದುವರಿಯುವುದನ್ನು ಜಗತ್ತು ನೋಡುತ್ತಿದೆ. ಆದರೆ ಕಾಂಗ್ರೆಸ್ ಪಾಕಿಸ್ತಾನವನ್ನು ಬೆಂಬಲಿಸುತ್ತಿದೆ.
- ದುರದೃಷ್ಟವಶಾತ್ ಕಾಂಗ್ರೆಸ್ ಪಾಕಿಸ್ತಾನದಿಂದ ಸಮಸ್ಯೆಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಸೇನಾ ಪಡೆಗಳ ಧೈರ್ಯಗುಂದಿಸಲು ಕೃತಕ ಬುದ್ಧಿಮತ್ತೆ ಬಳಸಲಾಗುತ್ತದೆ. ದುರದೃಷ್ಟವಶಾತ್ ಕಾಂಗ್ರೆಸ್ ಪಾಕಿಸ್ತಾನದ ವಕ್ತಾರನಂತೆ ವರ್ತಿಸುತ್ತಿದೆ.