ನವದೆಹಲಿ: ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST) ಸಮುದಾಯಕ್ಕೆ(SC/ST Status) ಸೇರಿದವರ ವಿರುದ್ಧದ ದೌರ್ಜನ್ಯ ತಡೆಯುವ ಅಟ್ರಾಸಿಟಿ ಕಾನೂನಿನ(Atrocities Act) ಬಗ್ಗೆ ಸುಪ್ರೀಂ ಕೋರ್ಟ್(Supreme Court) ಮಹತ್ವದ ಆದೇಶವನ್ನು ನೀಡಿದೆ. ಈ ಕಾನೂನು ದುರುಪಯೋಗಗೊಂಡಿರುವ ಪ್ರಕರಣಗಳು ಆಗಾಗ ಬೆಳಕಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶ ನೀಡಿದ್ದು, ದೂರುದಾರರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂಬ ಒಂದೇ ಒಂದು ಕಾರಣಕ್ಕೆ ಅಟ್ರಾಸಿಟಿ ಕೇಸ್ ದಾಖಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಕಾನೂನು ಅನ್ವಯವಾಗಲು ಸಂತ್ರಸ್ತರ ಜಾತಿ ಅಥವಾ ಬುಡಕಟ್ಟು ಗುರುತಿನ ಆಧಾರದ ಮೇಲೆ ಅಪರಾಧವನ್ನು ನಿರ್ದಿಷ್ಟವಾಗಿ ಮಾಡಿರಬೇಕು ಎಂದು ನ್ಯಾಯಾಲಯ ಪುನರುಚ್ಚರಿಸಿದೆ. ಜುಲೈ 22 ರಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿದ್ದು, ಪತಿ ಪತ್ನಿ ನಡುವಿನ ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 294, 323 ಮತ್ತು 506 ರ ಜೊತೆಗೆ SC/ST ಕಾಯ್ದೆಯ ಸೆಕ್ಷನ್ 3(1)(r) ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆಗಳನ್ನು ಪ್ರಾರಂಭಿಸುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ವೇಳೆ ಈ ಮಹತ್ವದ ಅಂಶವನ್ನು ಪ್ರಸ್ತಾಪಿಸಿದೆ.
ವಿವಾದದಲ್ಲಿ ಯಾವುದೇ ಜಾತಿ ಆಧಾರಿತ ಅಂಶವಿಲ್ಲ ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ವಾದಿಸಿ, ವಿಚಾರಣೆಯನ್ನು ರದ್ದುಗೊಳಿಸುವಂತೆ ಕೋರಿ ಮೇಲ್ಮನವಿ ಸಲ್ಲಿಸಿದ್ದರು. ಮಧ್ಯಪ್ರದೇಶ ಹೈಕೋರ್ಟ್ ಈ ಹಿಂದೆ ಕ್ರಿಮಿನಲ್ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತ್ತು.
ಈ ಸುದ್ದಿಯನ್ನೂ ಓದಿ: Supreme Court: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತ್ಮಹತ್ಯೆ; ಮಾನಸಿಕ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಬಿಡುಗಡೆ
ಹೈಕೋರ್ಟ್‌ನ ಆದೇಶವನ್ನು ಬದಿಗಿಟ್ಟು, ಸುಪ್ರೀಂ ಕೋರ್ಟ್, SC/ST ಕಾಯ್ದೆಯ ಸೆಕ್ಷನ್ 3(1)(r) ವ್ಯಾಪ್ತಿಗೆ ಬರುವ ಅಪರಾಧಕ್ಕೆ, SC/ST ಸಮುದಾಯಗಳಿಗೆ ಸೇರಿದ ವ್ಯಕ್ತಿಯನ್ನು ಅವಮಾನಿಸುವ ಅಥವಾ ಬೆದರಿಸುವ ನಿರ್ದಿಷ್ಟ ಉದ್ದೇಶವಿರಬೇಕು ಮತ್ತು ಅಷ್ಟೇ ಅಲ್ಲದೇ ಅದು ಸಾರ್ವಜನಿಕ ಸ್ಥಳದಲ್ಲಿ ಸಂಭವಿಸಬೇಕು ಎಂದು ಸ್ಪಷ್ಟಪಡಿಸಿತು. ಅದಕ್ಕಿಂತಲೂ ಹೆಚ್ಚು ಮುಖ್ಯವಾಗಿ ಒಬ್ಬ ವ್ಯಕ್ತಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವನು ಎಂಬ ಕಾರಣಕ್ಕೆ ಆತನನ್ನು ಗುರಿಯಾಗಿಸಿ ನಡೆದಿರುವ ಕೃತ್ಯವಾಗಿರಬೇಕು. ಹಾಗಾದಾಗ ಮಾತ್ರ ಅದನ್ನು ಅಟ್ರಾಸಿಟಿ ಕಾನೂನಿನಡಿಯಲ್ಲಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ದೂರುದಾರರು SC/ST ಸಮುದಾಯದ ಸದಸ್ಯರಾಗಿರುವ ಕಾರಣ ಮಾತ್ರ ಈ ಕಾನೂನನ್ನು ಅನ್ವಯಿಸಲಾಗುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ. ಪ್ರಸ್ತುತ ಪ್ರಕರಣ ಒಂದು ಕೌಟುಂಬಿಕ ಕಲಹವೇ ಹೊರತು ಅದರಲ್ಲಿ ಅಟ್ರಾಸಿಟಿ ಕೇಸ್‌ಗೆ ಪೂರಕವಾದ ಅಂಶಗಳಿಲ್ಲ. ಆಕೆಯ ಜಾತಿಯ ಉದ್ದೇಶಕ್ಕೆ ಆಕೆಯ ಮೇಲೆ ಪತಿ ದೌರ್ಜನ್ಯ ಎಸಗಿದ್ದಲ್ಲ ಎಂಬುದನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.