ಬೆಂಗಳೂರು: ಹೃದಯಾಘಾತದಿಂದ ಹಿರಿಯ ಪತ್ರಕರ್ತ, ಬರಹಗಾರ ಟಿ.ಜೆ.ಎಸ್. ಜಾರ್ಜ್ (TJS George) ಶುಕ್ರವಾರ (ಅಕ್ಟೋಬರ್ 3) ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 97 ವರ್ಷ ವಯಸ್ಸಾಗಿತ್ತು. 1928ರಲ್ಲಿ ಕೇರಳದ ಪತ್ತನಂತಿಟ್ಟ ಜಿಲ್ಲೆಯ ತುಂಬಮಣಿ ಎಂಬಲ್ಲಿ ಜನಿಸಿದ ಅವರ ಪೂರ್ಣ ಹೆಸರು ತಯ್ಯಿಲ್ ಜೇಕಬ್ ಸೋನಿ ಜಾರ್ಜ್ (TJS George). ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಾಹಿತ್ಯ ಮತ್ತು ಪತ್ರಿಕೋದ್ಯಮಕ್ಕೆ ಸಲ್ಲಿಸಿದ ಅನನ್ಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ 2011ರಲ್ಲಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿತ್ತು. ಪತ್ರಕರ್ತರಿಗೆ ಕೇರಳ ಸರ್ಕಾರ ನೀಡುವ ಅತೀ ದೊಡ್ಡ ಪುರಸ್ಕಾರ ಸ್ವದೇಶಾಭಿಮಾನಿ ಕೇಸರಿ ಪ್ರಶಸ್ತಿ 2019ರಲ್ಲಿ ಟಿ.ಜೆ.ಎಸ್. ಜಾರ್ಜ್ ಅವರನ್ನು ಅರಸಿಕೊಂಡು ಬಂದಿತ್ತು.
ಪತ್ರಕರ್ತ, ಅಂಕಣಕಾರ, ಲೇಖಕ ಹೀಗೆ ಹಲವು ಹೆಸರಿನಿಂದ ಗುರುತಿಸಿಕೊಂಡಿದ್ದ ಅವರು ಮಲಯಾಳಂ ಮತ್ತು ಇಂಗ್ಲಿಷ್‌ನಲ್ಲಿ ಅನೇಕ ಕೃತಿ ರಚಿಸಿದ್ದಾರೆ. ಏಷ್ಯನ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂ ಚೇರ್‌ಮ್ಯಾನ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: S L Bhyrappa: ಸಾಹಿತಿ ಎಸ್.ಎಲ್.ಭೈರಪ್ಪ ನಿಧನ; ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಸಂತಾಪ
ಶಿಕ್ಷಣ ಮತ್ತು ವೃತ್ತಿ ಜೀವನ
ತಿರುವನಂತಪುರಂ ಮತ್ತು ಚೆನ್ನೈಯ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ಟಿ.ಜೆ.ಎಸ್. ಜಾರ್ಜ್ ಉದ್ಯೋಗ ಅರಸಿ ಮುಂಬೈಗೆ ತೆರಳಿ ಆಕಸ್ಮಿಕವಾಗಿ ಪತ್ರಿಕೋದ್ಯಮಕ್ಕೆ ಕಾಲಿಟ್ಟರು.
1950ರಲ್ಲಿ ಫ್ರಿ ಪ್ರೆಸ್ ಜರ್ನಲ್ ಮೂಲಕ ವೃತ್ತಿ ಜೀವನ ಆರಂಭಿಸಿದ ಅವರು ಭಾರತ ಮತ್ತು ವಿದೇಶಗಳಲ್ಲಿ ಸುಮಾರು 50 ವರ್ಷಗಳ ಕಾಲ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಇಂಟರ್‌ನ್ಯಾಷನಲ್ ಪ್ರೆಸ್ ಇನ್‌ಸ್ಟಿಟ್ಯೂಟ್, ದಿ ಸರ್ಚ್‌ಲೈಟ್, ಫಾರ್ ಈಸ್ಟರ್ನ್ ಇಕಾನಾಮಿಕ್ ರಿವ್ಯೂ ಮುಂತಾದ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. ಹಾಂಗ್ ಕಾಂಗ್‌ನ ಏಷ್ಯಾವೀಕ್‌ನ ಸ್ಥಾಪಕ ಸಂಪಾದಕರೂ ಹೌದು.
ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸಂಪಾದಕೀಯ ಸಲಹಾ ಮಂಡಳಿಯಲ್ಲಿದ್ದ ಜಾರ್ಜ್ ಸಾಮಾಜಿಕ ನ್ಯಾಯದ ಪ್ರಮುಖ ಧ್ವನಿಯಾಗಿ ಗುರುತಿಸಿಕೊಂಡಿದ್ದರು. ಭ್ರಷ್ಟಾಚಾರ, ಧರ್ಮ ಆಧಾರಿತ ಅಸಮಾನತೆಯನ್ನು ಖಂಡಿಸುತ್ತಿದ್ದರು. ಅವರ ವಾರದ ಅಂಕಣ ʼಪಾಯಿಂಟ್ ಆಫ್ ವ್ಯೂವ್ʼ ಸುಮಾರು 25 ವರ್ಷಗಳ ಕಾಲ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟಗೊಂಡು ಇತಿಹಾಸ ನಿರ್ಮಿಸಿದೆ. ಈ ಅಂಕಣದ ಕೊನೆಯ ಲೇಖನ 2022ರ ಜೂನ್‌ನಲ್ಲಿ ಪ್ರಕಟಗೊಂಡಿತು.
ಜೈಲು ವಾಸ
1965ರಲ್ಲಿ ಬಿಹಾರ ಮುಖ್ಯಮಂತ್ರಿಯಾಗಿದ್ದ ಕೆ.ಬಿ. ಸಹಾಯ್ ವಿರುದ್ಧ ಧ್ವನಿ ಎತ್ತಿದ ಕಾರಣಕ್ಕೆ ಜೈಲುವಾಸ ಅನುಭವಿಸಿದರು. ಆ ಮೂಲಕ ಸ್ವತಂತ್ರ ಭಾರತದಲ್ಲಿ ಜೈಲುಶಿಕ್ಷೆಗೆ ಗುರಿಯಾದ ಮೊದಲ ಪತ್ರಿಕೆಯೊಂದರ ಸಂಪಾದಕ ಎನಿಸಿಕೊಂಡರು. ಅಂದಿನ ರಕ್ಷಣಾ ಸಚಿವರಾಗಿದ್ದ ವಿ.ಕೆ. ಕೃಷ್ಣ ಮೆನನ್ ಈ ವೇಳೆ ಜಾರ್ಜ್‌ಗಾಗಿ ಕೋರ್ಟ್‌ನಲ್ಲಿ ವಾದಿಸಿದ್ದರು. ಜಾರ್ಜ್ ತಾವು ಪತ್ರಕರ್ತರಾಗಿದ್ದಾಗಿನ ಅನುಭವವನ್ನು ಅಕ್ಷರ ರೂಪಕ್ಕಿಳಿಸಿದ ʼಘೋಷಯಾತ್ರಾʼ ಕೃತಿ ಗಮನ ಸೆಳೆದಿದೆ. ವಿ.ಕೆ. ಕೃಷ್ಣ ಮೆನನ್, ನರ್ಗೀಸ್, ಎಂ.ಎಸ್, ಸುಬ್ಬುಲಕ್ಷ್ಮೀ, ಸಿಂಗಾಪುರದ ಮಾಜಿ ಅಧ್ಯಕ್ಷ ಲೀ ಕ್ವಾನ್ ಯೆವ್ ಮುಂತಾದವರ ಜೀವನ ಚರಿತ್ರೆಯನ್ನೂ ರಚಿಸಿದ್ದಾರೆ. ಜಾರ್ಜ್ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.