ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Vijay: ಸಿಂಹ ಯಾವತ್ತಿದ್ದರೂ ಸಿಂಹವೇ; ಬಿಜೆಪಿ, ಡಿಎಂಕೆ ಜತೆಗಿನ ಮೈತ್ರಿ ಸಾಧ್ಯತೆ ಮತ್ತೊಮ್ಮೆ ತಳ್ಳಿ ಹಾಕಿದ ವಿಜಯ್‌

TVK: ತಮಿಳಗ ವೆಟ್ರಿ ಕಳಗಂ ಪಕ್ಷ ಹುಟ್ಟುಹಾಕಿ ರಾಜಕೀಯಕ್ಕೆ ಕಾಲಿಟ್ಟಿರುವ ನಟ ವಿಜಯ್‌ ಇದೀಗ ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ಮೈತ್ರಿ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಚೆನ್ನೈ: ಕಾಲಿವುಡ್‌ನಲ್ಲಿ ದಳಪತಿಯಾಗಿ ಮೆರೆದು ಸದ್ಯ ರಾಜಕೀಯ ಅಂಗಳಕ್ಕೆ ಕಾಲಿಟ್ಟಿರುವ ನಟ ವಿಜಯ್‌ (Actor Vijay) ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಹುಟ್ಟುಹಾಕಿದ್ದಾರೆ. ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamil Nadu Assembly Elections-2026) ಟಿವಿಕೆ ಸ್ಪರ್ಧಿಸಲಿದೆ. ಹಿಂದಿನಿಂದಲೂ ಬಿಜೆಪಿ ಮತ್ತು ಡಿಎಂಕೆಯೊಂದಿಗೆ ಯಾವುದೇ ಕಾರಣಕ್ಕೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿಕೊಂಡೇ ಬಂದಿದ್ದ ಅವರು ಅದನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಬಿಜೆಪಿ ಮತ್ತು ಡಿಎಂಕೆಯನ್ನು ಸೈದ್ಧಾಂತಿಕವಾಗಿ, ರಾಜಕೀಯವಾಗಿ ವಿರೋಧಿಸುವುದಾಗಿ ಹೇಳಿದ್ದಾರೆ. ಮಧುರೈ ಜಿಲ್ಲೆಯ ಪರಪತ್ತಿಯಲ್ಲಿ ನಡೆದ ಪಕ್ಷದ ರಾಜ್ಯ ಸಮ್ಮೇಳನದಲ್ಲಿ ಮಾತನಾಡಿ ಈ ನಿರ್ಧಾರ ತಿಳಿಸಿದರು.

ಭಾಷಣದಲ್ಲಿ ವಿಜಯ್ ತಮ್ಮ ರಾಜಕೀಯ ನಿಲುವನ್ನು ಪುನರುಚ್ಚರಿಸುತ್ತ, "ನಮ್ಮ ಏಕೈಕ ಸೈದ್ಧಾಂತಿಕ ಶತ್ರು ಬಿಜೆಪಿ. ಏಕೈಕ ರಾಜಕೀಯ ಶತ್ರು ಡಿಎಂಕೆ. ಟಿವಿಕೆ ಯಾರಿಗೂ ಹೆದರುವ ಅಥವಾ ಭೂಗತ ಮಾಫಿಯಾ ವ್ಯವಹಾರ ಹೊಂದಿರುವ ಪಕ್ಷವಲ್ಲ. ಇಡೀ ತಮಿಳುನಾಡು ನಮ್ಮೊಂದಿಗಿದೆ. ಫ್ಯಾಸಿಸ್ಟ್ ಬಿಜೆಪಿ, ಅಪಾಯಕಾರಿ ಡಿಎಂಕೆಯನ್ನು ಸೋಲಿಸಬೇಕಿದೆʼʼ ಎಂದರು.



ಈ ಸುದ್ದಿಯನ್ನೂ ಓದಿ: TVK Vijay: ಮುಂದಿನ ತಮಿಳುನಾಡು ಚುನಾವಣೆಗೆ ಟಿವಿಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ನಟ ವಿಜಯ್ ಆಯ್ಕೆ

"ಯಾವುದೇ ಮೈತ್ರಿಕೂಟಕ್ಕೆ ಸೇರುವ ಅಗತ್ಯವಿಲ್ಲ. ನಮ್ಮದು ಸ್ವಾರ್ಥ ಮೈತ್ರಿಯಾಗುವುದಿಲ್ಲ. ಬದಲಾಗಿ ಸ್ವಾಭಿಮಾನ ಆಧಾರಿತ ಮೈತ್ರಿ" ಎಂದು ವಿಜಯ್ ಘೋಷಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಅವರು, ಬಿಜೆಪಿ ತಮಿಳುನಾಡನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದರು. "ನಮಗೆ ಮುಖ್ಯವಾದದ್ದನ್ನು ನೀವು ಮಾಡುತ್ತಿಲ್ಲ. ನೀವು ಆರ್‌ಎಸ್‌ಎಸ್‌ ಜತೆ ಮೈತ್ರಿ ಮಾಡಿಕೊಳ್ಳುತ್ತಿದ್ದೀರಿ. ಆ ಮೂಲಕ 2029ರವರೆಗೆ ಸುಗಮವಾಗಿ ಆಡಳಿತ ನಡೆಸಬಹುದು ಎಂದು ನೀವು ಭಾವಿಸುತ್ತೀರಿ. ಆದರೆ ನಾನು ಸ್ಪಷ್ಟಪಡಿಸುತ್ತೇನೆ. ನೀರಿನ ಹನಿಗಳು ಕಮಲದ ದಳಗಳ ಮೇಲೆ ಅಂಟಿಕೊಳ್ಳುವುದಿಲ್ಲ. ಅದೇ ರೀತಿ ತಮಿಳರು ಬಿಜೆಪಿಗೆ ಅಂಟಿಕೊಳ್ಳುವುದಿಲ್ಲʼʼ ಎಂದು ಸವಾಲು ಒಡ್ಡಿದರು.

"ನಮ್ಮ ತಮಿಳುನಾಡು ಮೀನುಗಾರರನ್ನು ಬಂಧಿಸಲಾಗಿದೆ. ದಯವಿಟ್ಟು ನಮ್ಮ ಮೀನುಗಾರರಿಗೆ ಕಚ್ಚತೀವುವನ್ನು ಹಿಂತಿರುಗಿಸಿ. ನಮಗೆ ನೀಟ್ ಪರೀಕ್ಷೆಯ ಅಗತ್ಯವಿಲ್ಲ. ದಯವಿಟ್ಟು ಅದನ್ನು ರದ್ದುಗೊಳಿಸಿ" ಎಂದು ಅವರು ಹೇಳಿದರು.

ಬಿಜೆಪಿ ಅಲ್ಪಸಂಖ್ಯಾತರಿಗೆ ವಿರುದ್ದವಾಗಿದೆ ಎಂದೂ ಹೇಳಿದರು. ಜತೆಗೆ ಎಐಎಡಿಎಂಕೆಯನ್ನೂ ಟೀಕಿಸಿದರು. "ಎಂಜಿಆರ್ ಪ್ರಾರಂಭಿಸಿದ ಪಕ್ಷ - ಅದನ್ನು ಯಾರು ರಕ್ಷಿಸುತ್ತಾರೆ? ಪಕ್ಷ ಈಗ ಹೇಗಿದೆ? ನಾನು ಅದನ್ನು ಹೇಳಬೇಕಾಗಿಲ್ಲ" ಎಂದು ಅವರು ಎಐಎಡಿಎಂಕೆಯ ಬಗ್ಗೆ ವ್ಯಂಗ್ಯವಾಡಿದರು.



ಡಿಎಂಕೆ ವಿರುದ್ಧವೂ ವಾಗ್ದಾಳಿ

ಆಡಳಿತಾರೂಢ ಡಿಎಂಕೆಯ ವಿರುದ್ಧ ವಾಗ್ದಾಳಿ ನಡೆಸಿದ ವಿಜಯ್‌ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ನನ್ನು ತರಾಟೆಗೆ ತೆಗೆದುಕೊಂಡರು. “ಸ್ಟಾಲಿನ್ ಅಂಕಲ್, ಏನಿದು? ಮಹಿಳೆಯರಿಗೆ 1,000 ರೂ. ನೀಡಿದರೆ ಸಾಕೇ? ಅಳುವ ಮಹಿಳೆಯರ ಶಬ್ದಗಳು ನಿಮಗೆ ಕೇಳಿಸುತ್ತವೆಯೇ? ತುಂಬಾ ತಪ್ಪು ಅಂಕಲ್, ತುಂಬಾ ತಪ್ಪು. ನೀವು ಮಹಿಳೆಯರನ್ನು, ಪರಂಧೂರ್ ವಿಮಾನ ನಿಲ್ದಾಣದ ಬಳಿಯ ರೈತರನ್ನು, ಮೀನುಗಾರರನ್ನು ವಂಚಿಸುತ್ತಿದ್ದೀರಿʼʼ ಎಂದರು.

ವಿಜಯ್ ತಮ್ಮ ರಾಜಕೀಯ ಪ್ರಯಾಣವನ್ನು ಸಿಂಹದ ಜೀವನಕ್ಕೆ ಹೋಲಿಸಿದರು. “ಸಿಂಹವು ಯಾವಾಗಲೂ ನಿರ್ದಿಷ್ಟ ಗುರಿಯನ್ನು ಹೊಂದಿರುತ್ತದೆ. ಅದು ಒಮ್ಮೆ ಘರ್ಜಿಸಿದರೆ 8 ಕಿಲೋ ಮೀಟರ್‌ ಪ್ರದೇಶ ಕಂಪಿಸುತ್ತದೆ. ಕಾಡಿನಲ್ಲಿ ಹಲವು ನರಿಗಳು ಇದ್ದರೂ ಒಂದೇ ಸಿಂಹ ಇರುತ್ತದೆ. ಅದು ಕಾಡಿನ ರಾಜ. ಸಿಂಹ ಯಾವಾಗಲೂ ಸಿಂಹವೇʼʼ ಎಂದು ತಮ್ಮ ಹೋರಾಟದ ಹಾದಿಯನ್ನು ಸ್ಪಷ್ಟಪಡಿಸಿದರು. 2026ರ ವಿಧಾನಸಭಾ ಚುನಾವಣೆಯಲ್ಲಿ ಟಿವಿಕೆ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದೂ ಎಂದು ಪ್ರಕಟಿಸಿದರು.