ದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕ್‌ರ್ (Jagdeep Dhankhar Resigns) ಸೋಮವಾರ (ಜು. 21) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮುಂಗಾರು ಅಧಿವೇಶನದ ಮೊದಲ ದಿನವೇ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. 74 ವರ್ಷದ ಅವರು ಅನಾರೋಗ್ಯದ ಕಾರಣಕ್ಕೆ ರಾಜೀನಾಮೆ ನೀಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅಂಗೀಕರಿಸಿದ್ದಾರೆ. ಜಗದೀಪ್ 2022ರಲ್ಲಿ ಉಪರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕಸಿದ್ದರು. ಅವರ ಅಧಿಕಾರಾವಧಿ 2027ರ ತನಕ ಇತ್ತು. ಇದೀಗ ಮುಂದಿನ ಉಪರಾಷ್ಟ್ರಪತಿ ಯಾರಾಗಲಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ. ಇದೀಗ ಕೆಲವು ಪ್ರಮುಖ ನಾಯಕ ಹೆಸರು ಈ ಹುದ್ದೆಗೆ ಕೇಳಿ ಬಂದಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಾಂಗ್ರೆಸ್ ಸಂಸದ ಶಶಿ ತರೂರ್ ಮುಂತಾದವರ ಹೆಸರು ಉಪರಾಷ್ಟ್ರಪತಿ ಹುದ್ದೆಗೆ ಕೇಳಿ ಬಂದಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎನ್ನುವ ಕುತೂಹಲ ಮನೆ ಮಾಡಿದೆ.
ಈ ಸುದ್ದಿಯನ್ನೂ ಓದಿ: Jagdeep Dhankhar: ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್ ಧನಕರ್
ನಿತೀಶ್ ಕುಮಾರ್
ಬಿಹಾರ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ನಿತೀಶ್ ಕುಮಾರ್ ಉಪರಾಷ್ಟ್ರಪತಿಯಾಗಲಿದ್ದಾರೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬಿಹಾರ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಉಳಿದಿದ್ದು, ನಿತೀಶ್ ಅವರಿಗೆ ಬಿಜೆಪಿ ಉಪರಾಷ್ಟ್ರಪತಿ ಹುದ್ದೆ ನೀಡಲಿದೆ ಎಂದು ವರದಿಯೊಂದು ತಿಳಿಸಿದೆ. ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬೇರೆ ನಾಯಕರೊಬ್ಬರನ್ನು ನೇಮಿಸಲಿದೆ. ಜೆಡಿಯುಗೆ ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆ. ಉಪಮುಖ್ಯಮಂತ್ರಿಯಾಗಿ ನಿತೀಶ್ ಅವರ ಪುತ್ರ ನಿಶಾಂತ್ ನೇಮಕವಾಗುವ ಸಾಧ್ಯತೆ ಇದೆ. ನಿತೀಶ್ ಉಪರಾಷ್ಟ್ರಪತಿಯಾದರೆ ಧನ್‌ಕರ್ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ.
ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಉಪರಾಷ್ಟ್ರಪತಿಯಾಗುವ ಗಣ್ಯರ ಸಂಭಾವ್ಯ ಪಟ್ಟಿಯಲ್ಲಿದ್ದಾರೆ. 2022ರಲ್ಲಿಯೂ ರಾಜನಾಥ್ ಸಿಂಗ್ ಅವರು ಹೆಸರು ಕೇಳಿ ಬಂದಿತ್ತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಅವರ ಬಗ್ಗೆ ಚರ್ಚೆ ಆರಂಭವಾಗಿದೆ.
2 prominent NDA union ministers and Shashi Tharoor are possible contenders for V-P.
— Rahul Shivshankar (@RShivshankar) July 22, 2025
ಶಶಿ ತರೂರ್
ಸದ್ಯ ಕೇಂದ್ರ ಸರ್ಕಾರದ ಪರವಾಗಿ ಬ್ಯಾಟ್ ಬೀಸುತ್ತಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಬಿಜೆಪಿ ಉಪರಾಷ್ಟ್ರಪತಿ ಪಟ್ಟ ಕಟ್ಟಲಿದೆ ಎನ್ನುವ ಸುದ್ದಿ ಹಬ್ಬಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಪಾಕಿಸ್ತಾನದ ಮುಖವಾಡ ಕಳಚಲು ವಿದೇಶಕ್ಕೆ ಕಳುಹಿಸಿದ್ದ ಸಂಸದರ ನಿಯೋಗದಲ್ಲಿಯೂ ಶಶಿ ತರೂರ್ ಇದ್ದರು. ಅದಾದ ಬಳಿಕವೂ ಅವರು ಮೋದಿ ನೇತೃತ್ವದ ಸರ್ಕಾರವನ್ನು ಹೊಗಳುತ್ತಲೇ ಇದ್ದಾರೆ. ಸದ್ಯ ಅವರು ಬಿಜೆಪಿ ಸೇರುವ ಬಗ್ಗೆಯೂ ಊಹಾಪೋಹಗಳಿವೆ.
ಜೆ.ಪಿ. ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರೂ ಸಂಭಾವ್ಯ ಉಪರಾಷ್ಟ್ರಪತಿಗಳ ಪಟ್ಟಿಯಲ್ಲಿದ್ದಾರೆ. ಶೀಘ್ರದಲ್ಲೇ ಬಿಜೆಪಿ ರಾಷ್ಟ್ರಾಧ್ಯಕ್ಷರ ನೇಮಕವಾಗಲಿದ್ದು, ಉಪರಾಷ್ಟ್ರಪತಿಯಾಗಿ ಅವರು ಹೊಸ ಜವಾಬ್ದಾರಿ ಹೊರಲಿದ್ದಾರೆ ಎನ್ನಲಾಗುತ್ತಿದೆ. ಇವರು ಬಿಜೆಪಿಯ ಹಿರಿಯ ನಾಯಕರಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಅವರು ಉಪರಾಷ್ಟ್ರಪತಿ ಸ್ಥಾನಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿದೆ.
ಹರಿವನ್ಶ್ ನಾರಾಯಣ್ ಸಿಂಗ್
ಸದ್ಯ ರಾಜ್ಯಸಭೆಯ ಉಪಾಧ್ಯಕ್ಷರಾಗಿರುವ ಜೆಡಿಯು ಸಂಸದ ಹರಿವನ್ಶ್ ನಾರಾಯಣ ಸಿಂಗ್ ಕೂಡ ರೇಸ್‌ನಲ್ಲಿದ್ದಾರೆ. ಅವರು 2020ರಿಂದಲೂ ಉಪ ಸಭಾಧ್ಯಕ್ಷರಾಗಿದ್ದು, ಇವರಿಗೆ ಉಪರಾಷ್ಟ್ರಪತಿ ಪಟ್ಟ ದೊರೆಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.