Beauty Trend 2025: ಯುವತಿಯರ ಕಂಗಳ ಸೌಂದರ್ಯಕ್ಕೆ ಫೇಕ್ ಐ ಲ್ಯಾಶಸ್ ಸಾಥ್
Beauty Trend 2025: ಇತ್ತೀಚೆಗೆ ಯುವತಿಯರ ಕಂಗಳ ಸೌಂದರ್ಯ ಹೆಚ್ಚಿಸುತ್ತಿರುವ ಫೇಕ್ ಐ ಲ್ಯಾಶಸ್‌ಗೆ ಮೊದಲಿಗಿಂತ ಬೇಡಿಕೆ ಹೆಚ್ಚಿದೆ. ಇವುಗಳನ್ನು ಬಳಸುವ ಮುನ್ನ ವಹಿಸಬೇಕಾದ ಎಚ್ಚರಿಕೆ ಏನು? ಈ ಎಲ್ಲದರ ಕುರಿತಂತೆ ಮೇಕಪ್ ಆರ್ಟಿಸ್ಟ್‌ಗಳು ವಿವರಿಸಿದ್ದಾರೆ.
ಫೇಕ್ ಐ ಲ್ಯಾಶಸ್‌ಗಳು ಇದೀಗ ಯುವತಿಯರ ಸೌಂದರ್ಯಕ್ಕೆ ಸಾಥ್ ನೀಡುತ್ತಿವೆ. ಅದರಲ್ಲೂ, ಇತ್ತೀಚೆಗೆ ಈ ಫೇಕ್ ಐ ಲ್ಯಾಶಸ್ ಯಾವ ಮಟ್ಟಿಗೆ ಟ್ರೆಂಡಿಯಾಗಿವೆ ಎಂದರೇ, ಪ್ರತಿ ಮಹಿಳೆಯ ಮೇಕಪ್‌ನ ಭಾಗವಾಗಿವೆ.
ಸಾಮಾನ್ಯ ಹುಡುಗಿಯರನ್ನು ಸೆಳೆದ ಫೇಕ್ ಐ ಲ್ಯಾಶಸ್
ಮೇಕಪ್ ಆರ್ಟಿಸ್ಟ್ ರೆಮೊ ಪ್ರಕಾರ, ಕೇವಲ ಸೆಲೆಬ್ರೆಟಿಗಳಿಗೆ ಮಾತ್ರ ಸೀಮಿತವಾಗಿದ್ದ ಆರ್ಟಿಫಿಶಿಯಲ್ ಫೇಕ್ ಕಣ್ಣಿನ ರೆಪ್ಪೆಗಳು ಇದೀಗ ಸಾಮಾನ್ಯ ಹುಡುಗಿಯರ, ಮಾನನಿಯರ ಮೇಕಪ್ ಬಾಕ್ಸ್ ಸೇರಿವೆ. ಬಾಲಿವುಡ್, ಸ್ಯಾಂಡಲ್‌ವುಡ್ ಹಾಗೂ ಮಾಡೆಲ್‌ಗಳ ಡೈಲಿ ರುಟೀನ್ ಮೇಕಪ್ ಕಿಟ್‌ನಲ್ಲಿಯೂ ಅಗ್ರಸ್ಥಾನ ಪಡೆದಿವೆ.
ಏನಿದು ಫೇಕ್ ಐ ಲ್ಯಾಶಸ್?
ಹೆಸರೇ ಹೇಳುವಂತೆ ಕೃತಕ ಕಣ್ಣಿನ ರೆಪ್ಪೆಗಳಿವು. ನಾನಾ ಬ್ರಾಂಡ್‌ಗಳಲ್ಲಿ ದೊರೆಯುತ್ತವೆ. ಬ್ಯೂಟಿ ಪ್ರಾಡಕ್ಸ್ಟ್ ದೊರೆಯುವ ಸ್ಥಳದಲ್ಲಿ ಸಿಗುತ್ತವೆ. ಕೆಲವು ಮೂರ್ನಾಲ್ಕು ಸೆಟ್‌ನಲ್ಲಿ ದೊರೆತರೆ, ಮತ್ತೆ ಕೆಲವು ಸಿಂಗಲ್ ಸೆಟ್‌ನಲ್ಲೂ ದೊರೆಯುತ್ತವೆ. ಜತೆಗೆ ಇದನ್ನು ಸುಲಭವಾಗಿ ಅಂಟಿಸುವ ಗ್ಲ್ಯೂನೊಂದಿಗೂ ದೊರೆಯುತ್ತವೆ. ಮೇಕಪ್ ಆರ್ಟಿಸ್ಟ್‌ಗಳು ಅತಿ ಹೆಚ್ಚಾಗಿ ಇವನ್ನು ಬಳಸುತ್ತಾರೆ. ಕೆಲವನ್ನು ಮರು ಬಳಕೆಯೂ ಮಾಡಬಹುದು ಎನ್ನುವ ಬ್ಯೂಟಿ ಎಕ್ಸ್‌ಪರ್ಟ್ಸ್ ಜಿಯಾ ಹೇಳುವಂತೆ, ಎಥ್ನಿಕ್ ಔಟ್‌ಫಿಟ್‌ಗಳಿಗೆ ಇವನ್ನು ಹೆಚ್ಚಾಗಿ ಬಳಸಲಾಗುತ್ತಿದೆ ಎನ್ನುತ್ತಾರೆ.
ಬಳಸುವುದು ಸುಲಭ
ಸಾಮಾನ್ಯ ಹುಡುಗಿಯು ಕೂಡ ಇಂದು ಯೂ ಟ್ಯೂಬ್ ನೋಡಿ ಐ ಲ್ಯಾಶಸ್ ಅಂಟಿಸಿಕೊಳ್ಳುವುದು ಅಥವಾ ಅಪ್ಲೈ ಮಾಡುವುದು ಇಂದು ಸಾಮಾನ್ಯವಾಗಿದೆ. ಇದನ್ನು ಬಳಸುವುದು ತೀರಾ ಸುಲಭವಾಗಿರುವುದರಿಂದ ಬಳಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಮಾರಾಟಗಾರರು.
ಫೇಕ್ ಐ ಲ್ಯಾಶಸ್ ಬಳಸುವವರಿಗೆ ಒಂದಿಷ್ಟು ಸಲಹೆಗಳು
- ಪ್ರತಿದಿನ ಫೇಕ್ ಐ ಲ್ಯಾಶಸ್ ಬಳಸುವುದರಿಂದ ರೆಪ್ಪೆ ಭಾಗಕ್ಕೆ ಸಮಸ್ಯೆಯಾಗಬಹುದು.
- ಕಣ್ಣಿನ ರೆಪ್ಪೆಯ ಮೇಲೆ ಅಂಟಿಸುವುದರಿಂದ ಒರಿಜಿನಲ್ ರೆಪ್ಪೆ ಕೂದಲು ಉದುರುವ ಸಾಧ್ಯತೆ ಹೆಚ್ಚು.
- ಅಂಟಿಸಿದ ರೆಪ್ಪೆ ತೆಗೆಯದೇ ಮಲಗಿದಲ್ಲಿ ಕಣ್ಣಿನ ಭಾಗಕ್ಕೆ ತೊಂದರೆಯಾಗಬಹುದು.
- ಆದಷ್ಟೂ ಗುಣಮಟ್ಟದ ಬ್ರಾಂಡೆಡ್ ಐ ಲ್ಯಾಶಸ್ ಖರೀದಿಸಿ.
- ಕಡಿಮೆ ದರದ ಲ್ಯಾಶಸ್ ಬಳಸಲೇಬೇಡಿ.
- ಲ್ಯಾಶಸ್ ಗಮ್‌ನಿಂದ ಚರ್ಮಕ್ಕೆ ಕಿರಿಕಿರಿಯಾದಲ್ಲಿ, ಬಳಸುವುದು ಬೇಡ.