Rukmini Vasanth: ರುಕ್ಮಿಣಿ ವಸಂತ್ 'ಕಾಂತಾರ ಚಾಪ್ಟರ್ 1'ನ ಕನಕವತಿಯಾಗಿದ್ದು ಹೇಗೆ? ಇಲ್ಲಿದೆ ತೆರೆ ಹಿಂದಿನ ಕಸರತ್ತು
ಎಲ್ಲರ ನಿರೀಕ್ಷೆಯಂತೆಯೇ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಸ್ಯಾಂಡಲ್‌ವುಡ್‌ನ ಹೆಮ್ಮೆಯ ʼಕಾಂತಾರ ಚಾಪ್ಟರ್ 1' ಹೊರ ಹೊಮ್ಮಿದೆ. ಅಕ್ಟೋಬರ್ 2ರಂದು ವಿವಿಧ ಭಾಷೆಗಳಲ್ಲಿ, 30ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಗೆ ಬಂದ ಈ ಚಿತ್ರವನ್ನು ನಿರ್ದೇಶಿಸುವ ಜತೆಗೆ ರಿಷಬ್ ಶೆಟ್ಟಿ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. ಅವರ ಬೆರ್ಮೆ ಪಾತ್ರದಷ್ಟೇ ಮೆಚ್ಚುಗೆ ಸಿಕ್ಕಿದ್ದು ನಾಯಕಿ ಕನಕವತಿಗೆ. ತಮಗೆ ಸಿಕ್ಕ ಅವಕಾಶವನ್ನು ರುಕ್ಮಿಣಿ ಸಮರ್ಥವಾಗಿ ಬಳಸಿಕೊಂಡಿದ್ದು, ಚೆಲುವಿನ ಜತೆಗೆ ಅಭಿನಯದಿಂದಲೂ ಗಮನ ಸೆಳೆದಿದ್ದಾರೆ. ಇದೀಗ ಅವರ ಕನಕವತಿಯಾಗಿ ತಾವು ಬದಲಾಗಿದ್ದು ಹೇಗೆ ಎನ್ನುವುದರ ಗುಟ್ಟು ಬಿಟ್ಟು ಕೊಟ್ಟಿದ್ದಾರೆ. ಶೂಟಿಂಗ್ ಸೆಟ್‌ನ ಸರಣಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಬುಡಕಟ್ಟು ಸಮುದಾಯ- ಸಾಮಂತ ರಾಜರ ನಡುವಿನ ಘರ್ಷಣೆ
ಹೊಂಬಾಳೆ ಫಿಲ್ಮ್ಸ್ ಅದ್ಧೂರಿಯಾಗಿ ನಿರ್ಮಿಸಿರುವ ʼಕಾಂತಾರ ಚಾಪ್ಟರ್ 1' ಚಿತ್ರ 4ನೇ ಶತಮಾನದ ಕಥೆಯನ್ನು ಒಳಗೊಂಡಿದೆ. ಕರಾವಳಿ ಪ್ರದೇಶದ ಕಾಡಿನ ಬುಡಕಟ್ಟು ಸಮುದಾಯ ಮತ್ತು ಸಾಮಂತ ರಾಜರ ಮಧ್ಯೆ ನಡೆಯುವ ಘರ್ಷಣೆ ಈ ಸಿನಿಮಾದಲ್ಲಿದೆ. ರುಕ್ಮಿಣಿ ವಸಂತ್ ರಾಜಕುಮಾರಿ ಕನಕವತಿಯಾಗಿ ನಟಿಸಿದ್ದಾರೆ.
ಕಥೆಗೆ ಟ್ವಿಸ್ಟ್ ನೀಡುವ ಕನಕವತಿ
ಕನಕವತಿ ಪಾತ್ರಕ್ಕೆ ಬಹು ಆಯಾಮವಿದ್ದು ಚಿತ್ರದುದ್ದಕ್ಕೂ ಕಾಣ ಸಿಗುತ್ತದೆ. ಈ ಪಾತ್ರದಿಂದಲೇ ಚಿತ್ರಕ್ಕೆ ಮುಖ್ಯ ತಿರುವು ಕೂಡ ಸಿಗುತ್ತದೆ. ಅದನ್ನು ಅಷ್ಟೇ ಸಮರ್ಥವಾಗಿ ನಿಭಾಯಿಸಿರುವ ರುಕ್ಮಿಣಿ ಭವಿಷ್ಯದ ಉತ್ತಮ ಕಲಾವಿದೆಯಾಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದಾರೆ.
ಪಾತ್ರದ ಸ್ಕೆಚ್
ಕನಕವತಿ ಪಾತ್ರವನ್ನು ತೆರೆ ಮೇಲೆ ಮೂಡಿಸಲು ರಿಷಬ್ ಮತ್ತು ತಂಡ ಸಾಕಷ್ಟು ಕಷ್ಟ ಪಟ್ಟಿದೆ. ಕದಂಬರ ಆಡಳಿತದ ಕಾಲದಲ್ಲಿ ಜನಜೀವನ ಹೇಗಿತ್ತು, ಅಂದಿನ ವೇಷ ಭೂಷಣ ಹೇಗಿತ್ತು ಎನ್ನುವುದರ ಬಗ್ಗೆ ಅಧ್ಯಯನ ನಡೆಸಿದೆ. ಪಾತ್ರದ ಪ್ರತಿ ದೃಶ್ಯವನ್ನು ಮೊದಲು ಸ್ಕೆಚ್‌ನಿಂದ ಬರೆದು ಬಳಿಕ ಅದಕ್ಕೆ ಸ್ಪಷ್ಟ ರೂಪ ನೀಡಲಾಗಿದೆ. ರುಕ್ಮಿಣಿ ವಸಂತ್ ತಾವು ಕನಕವತಿಯಾಗಲು ಯಾವ ರೀತಿ ತಯಾರಿ ನಡೆಸಿದೆ, ಯಾವ ರೀತಿ ಸ್ಕೆಚ್ ಬರೆಯಲಾಗಿತ್ತು ಎನ್ನುವುದರ ಫೋಟೊ ಹಂಚಿಕೊಂಡಿದ್ದಾರೆ.
ಕುದುರೆ ಸವಾರಿ
ಕನಕವತಿ ದಿಟ್ಟ, ಧೈರ್ಯವಂತ ರಾಜಕುಮಾರಿಯಾಗಿದ್ದು, ಎಲ್ಲರನ್ನೂ ತನ್ನ ಹಿಡಿತದಲ್ಲಿ ನಿಲ್ಲಿಸುವಷ್ಟು ಬಲಶಾಲಿ. ಎಲ್ಲ ವಿದ್ಯೆಯೂ ಅವಳಿಗೆ ಗೊತ್ತು. ಅದಕ್ಕೆ ತಕ್ಕಂತೆ ರುಕ್ಮಿಣಿ ಕುದುರೆ ಸವಾರಿಯನ್ನೂ ಕಲಿತಿದ್ದಾರೆ. ತಾವು ಕುದುರೆ ಓಡಿಸಿ ಚಿತ್ರಕ್ಕಾಗಿ ತಯಾರಾಗುತ್ತಿರುವ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.
ಕ ಫ್ರಮ್ ಕೊ
ಇತ್ತೀಚಿನ ದಿನಗಳಲ್ಲಿ ನಾಯಕಿಯೊಬ್ಬಳಿಗೆ ದೊರೆತ ಅತ್ಯುತ್ತಮ ಪಾತ್ರ ಇದಾಗಿದ್ದು, ಎಲ್ಲ ಭಾಷಿಕರೂ ರುಕ್ಮಿಣಿಯ ತಯಾರಿಯನ್ನು, ಬದ್ಧತೆಯನ್ನು, ನಟನೆಯನ್ನು ಹೊಗಳಿದ್ದಾರೆ. ಯುದ್ಧದ ಸನ್ನಿವೇಶದಲ್ಲಿಯೂ ಅವರ ಕಾಣಿಸಿಕೊಂಡಿದ್ದು, ಚಿತ್ರದ ದ್ವಿತೀಯಾರ್ಧದಲ್ಲಿ ನೀಡುವ ಟ್ವಿಸ್ಟ್ ಯಾರ ಊಹೆಗೂ ನಿಲುಕುವುದಿಲ್ಲ. ಈಗಾಗಲೇ ಮೀಮ್ಸ್ ಪೇಜ್ ಅವರನ್ನು ಕ ಫ್ರಮ್ ಕೊ (ಕನಕವತಿ ಫ್ರಮ್ ಕೊಳ್ಳೇಗಾಲ) ಎಂದು ಕರೆಯುತ್ತಿದ್ದಾರೆ. ಅಷ್ಟರ ಮಟ್ಟಿಗೆ ಪಾತ್ರ ಪ್ರಭಾವ ಬೀರಿದೆ.