Vishwavani Pustaka: ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿದಂತೆ ವಿಶ್ವವಾಣಿ ಪುಸ್ತಕದ 8 ಕೃತಿಗಳ ಲೋಕಾರ್ಪಣೆ; ಫೋಟೋ ನೋಡಿ
ವಿಶ್ವೇಶ್ವರ ಭಟ್ ಅವರ ನಾಲ್ಕು ಪುಸ್ತಕ ಸೇರಿದಂತೆ ವಿಶ್ವವಾಣಿ ಪುಸ್ತಕ (Vishwavani Pustaka) ಪ್ರಕಾಶನದ 8 ಕೃತಿಗಳು ಜುಲೈ 26ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌ನಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು.
ಪತ್ರಕರ್ತ ವಿಶ್ವೇಶ್ವರ ಭಟ್ ಅವರ ನಾಲ್ಕು ಪುಸ್ತಕ ಸೇರಿದಂತೆ ವಿಶ್ವವಾಣಿ ಪುಸ್ತಕ ಪ್ರಕಾಶನದ 8 ಕೃತಿಗಳು ಜುಲೈ 26ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌ನಲ್ಲಿರುವ ಎಫ್‌ಕೆಸಿಸಿಐ ಸಭಾಂಗಣದಲ್ಲಿ ಲೋಕಾರ್ಪಣೆ ಗೊಂಡಿತು. ಖ್ಯಾತ ಕಾದಂಬರಿಕಾರ ಎಸ್.ಎಲ್. ಭೈರಪ್ಪ . ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಸಭಾ ಸದಸ್ಯರಾದ ತೇಜಸ್ವಿ ಸೂರ್ಯ ಮತ್ತು ರಿಪಬ್ಲಿಕ್ ಕನ್ನಡ ಸುದ್ದಿ ವಾಹಿನಿ ಸಂಪಾದಕರಾದ ಶೋಭಾ ಮಳವಳ್ಳಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಮಾತನಾಡಿದ್ದು, ಓದಿನಿಂದ ವಿಭಿನ್ನ ಪ್ರಯೋಜನಗಳಿರುತ್ತವೆ. ನಾನು ಭಟ್ಟರ ಬರಹಗಳ ಅಭಿಮಾನಿ. ಪತ್ನಿ ಹೇಮಾವತಿ ಹೆಗ್ಗಡೆ ಕೂಡ ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮಗಳು ನಿರಂತರ ಕೇಳುಗರು ಎಂದು ಹೇಳಿದ್ದಾರೆ.
ಲೋಕಸಭಾ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, '101 ಪುಸ್ತಕಗಳನ್ನು ಬರೆಯುವ ಮೂಲಕ ವಿಶ್ವೇಶ್ವರ ಭಟ್ ಕನ್ನಡ ಸಾರಸ್ವತ ಲೋಕದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿದ್ದಾರೆ. ಪತ್ರಿಕೆಗಳ ಓದುವಿಕೆ, ಪುಸ್ತಕಗಳ ಅಧ್ಯಯನ ಪ್ರವೃತ್ತಿ ನಶಿಸುತ್ತಿರುವ ಈ ಸಂದರ್ಭದಲ್ಲಿ ವಿಶ್ವೇಶ್ವರ ಭಟ್ ನೂರಾರು ಕೃತಿಗಳನ್ನು ರಚಿಸುವ ಮೂಲಕ ಅಸಂಖ್ಯಾತ ಹೊಸ ಓದುಗರನ್ನು ಸೃಷ್ಟಿಸಿದ್ದಾರೆ ಎಂದು ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಕಾರ್ಯಕ್ರಮದಲ್ಲಿ ಭಾಹವಹಿಸಿದ್ದರು. ''ವಿಶ್ವೇಶ್ವರ ಭಟ್ ನನಗೆ ದ್ರೋಣಾಚಾರ್ಯ ಇದ್ದ ಹಾಗೆ. ಅವರ ಲೇಖನಗಳು, ಅಂಕಣಗಳನ್ನು ಓದಿ ನಾನು ಬೆಳೆದವನು. ಅವರ ನಾಯಕತ್ವ ಗುಣವನ್ನು ಕಂಡು ಕಲಿಯುವುದು ಬಹಳಷ್ಟಿದೆ. ಬೇರೆಯವರಲ್ಲಿರುವ ಒಳ್ಳೆಯ ಗುಣಗಳನ್ನು, ಪ್ರತಿಭೆಗಳನ್ನು ಎಲ್ಲರ ಎದುರೇ ಹೇಳುತ್ತಾರೆ. ಪ್ರೋತ್ಸಾಹಿಸುತ್ತಾರೆ. ಆದರೆ ತಿದ್ದಿಕೊಳ್ಳಬೇಕಾಗಿರುವುದನ್ನು ಗೌಪ್ಯವಾಗಿ ತಿಳಿ ಹೇಳುತ್ತಾರೆ ಎಂದು ಅವರು ಹೇಳಿದ್ದಾರೆ.
ನಿನ್ನೆ ನಡೆದ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಪಾರ ಪುಸ್ತಕಾಭಿಮಾನಿಗಳು, ವಿಶ್ವೇಶ್ವರ ಭಟ್ ಅವರ ಅಭಿಮಾನಿಗಳು ನೆರೆದಿದ್ದರು. ಉದ್ಯಮಿ ಹಾಗೂ ಲೇಖಕರಾದ ಎಸ್. ಷಡಕ್ಷರಿ, ಉದ್ಯಮಿ ಮತ್ತು ಅಂಕಣಕಾರರಾದ ಕಿರಣ್ ಉಪಾಧ್ಯಾಯ, ಪತ್ರಕರ್ತರಾದ ರಾಜು ಅಡಕಳ್ಳಿ, ನಿರೂಪಕಿ ಹಾಗೂ ಲೇಖಕಿ ರೂಪಾ ಗುರುರಾಜ್ ಅವರು ಉಪಸ್ಥಿತರಿದ್ದರು.