Sports Drama Movies: ಕ್ರೀಡಾ ಅಭಿಮಾನಿಗಳಿಗೆ ಗುಡ್‌ನ್ಯೂಸ್; ಒಟಿಟಿಗೆ ಬಂದಿದೆ ಸಾಲು ಸಾಲು ಸ್ಪೋರ್ಟ್ಸ್ ಬೇಸ್ಡ್ ಸಿನಿಮಾ
ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಅವರ ಅಭಿನಯದ ʼಸೀತಾರೆ ಜಮೀನ್ ಪರ್ʼ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚುತ್ತಿದೆ. ವಿಶೇಷ ಚೇತನ ವ್ಯಕ್ತಿಗಳ ಬಾಸ್ಕೆಟ್ ಬಾಲ್ ತಂಡದ ಕೋಚ್ ಪಾತ್ರದಲ್ಲಿ ಆಮೀರ್ ಖಾನ್ ಕಾಣಿಸಿಕೊಂಡಿದ್ದು, ಈ ಸಿನಿಮಾವು ಜೂನ್ 20ರಂದು ತೆರೆ ಮೇಲೆ ಬರಲಿದೆ. ಈ ಚಿತ್ರದ ಬಿಡುಗಡೆಗೂ ಮುನ್ನವೇ ವಿವಿಧ ಭಾಷೆಗಳ ಕೆಲವು ಅದ್ಭುತ ಕ್ರೀಡಾ ಸಿನಿಮಾಗಳು ಒಟಿಟಿ ಪ್ರೀಮಿಯಂನಲ್ಲಿ ಸ್ಟ್ರೀಮ್ ಆಗುತ್ತಿದ್ದು, ಈ ಬಗ್ಗೆ ಮಾಹಿತಿ ಇಲ್ಲಿದೆ.
ಇಕ್ಬಾಲ್
ಹಿಂದಿಯಲ್ಲಿ ತೆರೆಕಂಡ ʼಇಕ್ಬಾಲ್ʼ ಸಿನಿಮಾವು ಕಿವುಡು ಮತ್ತು ಮೂಗನಾದ ಯುವಕ ಇಕ್ಬಾಲ್ ಕ್ರೀಡಾ ಸಾಧನೆಯ ಕಥೆಯನ್ನು ತೆರೆಮೇಲೆ ತೆರೆದಿಡುತ್ತದೆ. ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡಕ್ಕಾಗಿ ಆಡುವ ಇಕ್ಬಾಲ್ ತನ್ನ ದೈಹಿಕ ಅಡೆ ತಡೆಗಳನ್ನು ಕೂಡ ಎದುರಿಸಲು ಹೋರಾಡುತ್ತಾನೆ. ನಿವೃತ್ತ ತರಬೇತುದಾರನನ್ನು ಹುಡುಕುತ್ತ ಸಾಧನೆ ಮಾಡುವ ಈ ಕಥೆ ಕ್ರೀಡಾ ಸಾಧಕರಿಗೆ ಸ್ಫೂರ್ತಿ.
ಘೂಮರ್
ʼಘೂಮರ್ʼ ಚಲನಚಿತ್ರವು 2023ರಲ್ಲಿ ಮೆಲ್ಬೋರ್ನ್‌ನಲ್ಲಿ ನಡೆದ 12ನೇ ಭಾರತೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿತು. ಯುವ ಕ್ರಿಕೆಟ್ ಆಟಗಾರ್ತಿ ಅನಿನಾ ಪಾತ್ರದಲ್ಲಿ ನಟಿ ಸೈಯಾಮಿ ಖೇರ್ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಕ್ಕೆ ಚೊಚ್ಚಲ ಪ್ರವೇಶಕ್ಕೂ ಮೊದಲು ತನ್ನ ಬಲಗೈಯನ್ನು ಕಳೆದುಕೊಳ್ಳುವ ಅನಿನಾಳ ಪಾತ್ರ ಓರ್ವ ಉತ್ಸಾಹಿ ಕ್ರೀಡಾ ಪಟುವನ್ನು ಪ್ರತಿಬಿಂಬಿಸುತ್ತದೆ. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ಮಾಜಿ ಕ್ರಿಕೆಟಿಗನ ಪಾತ್ರದಲ್ಲಿ ಅನಿನಾಗೆ ಸಹಾಯ ಮಾಡುವ ಮೂಲಕ ಈ ಸಿನಿಮಾದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಗ್ರ್ಯಾನು ಟುರಿಸ್ಮೊ
ರೇಸಿಂಗ್ ಕ್ರೀಡೆಗಳು ಜಗತ್ತಿಗೆ ಸವಾಲು ಹಾಕುವ ಬಗೆಯ ಕಥೆ ಸಾಗುವ ʼಗ್ರ್ಯಾನು ಟುರಿಸ್ಮೊʼ ಒಂದು ವಿಭಿನ್ನ ಕಥೆ ಹೇಳುತ್ತದೆ. ಗ್ರ್ಯಾನ್ ಟುರಿಸ್ಮೊ ಆಟಗಾರ ಜಾನ್ ಮಾರ್ಡೆನ್‌ಬರೋ ಅವರ ಜೀವನ ಕಥೆಯನ್ನು ಆಧರಿಸಿದ್ದ ಸಿನಿಮಾ ಇದಾಗಿದೆ. ಆರ್ಚೀ ಮಡೆಕ್ವೆ, ಡೇವಿಡ್ ಹಾರ್ಬರ್ ಮತ್ತು ಒರ್ಲ್ಯಾಂಡೊ ಬ್ಲೂಮ್ ಈ ಸಿನಿಮಾದಲ್ಲಿ ನಟಿಸಿದ್ದಾರೆ.
ಮುಕ್ಕಾಬಾಜ್
ಅನುದೀಪ್ ಸಿಂಗ್ ಅವರ ಕಥೆಯನ್ನು ಆಧರಿಸಿ, ಅನುರಾಗ್ ಕಶ್ಯಪ್ ಬರೆದು ನಿರ್ದೇಶಿಸಿದ ಹಿಂದಿ ಚಿತ್ರ ʼಮುಕ್ಕಾಬಾಜ್ʼನಲ್ಲಿ ಕೂಡ ಒಂದು ಉತ್ತಮ ಸಂದೇಶವಿದೆ. ಶ್ರವಣ್ ಸಿಂಗ್ ಪಾತ್ರದಲ್ಲಿ ನಟ ವಿನೀತ್ ಕುಮಾರ್ ಸಿಂಗ್ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಬಾಕ್ಸಿಂಗ್ ಫೆಡರೇಶನ್‌ನ ಪ್ರಭಾವಿ ಮುಖ್ಯಸ್ಥ ಭಗವಾನ್ ದಾಸ್ ಮಿಶ್ರಾ ಪಾತ್ರದಲ್ಲಿ ಜಿಮ್ಮಿ ಶೇರ್‌ಗಿಲ್ ಕೂಡ ಪಾತ್ರಕ್ಕೆ ಜೀವ ತುಂಬಿದ್ದಾರೆ. ಲವ್ ಆ್ಯಂಡ್ ಸ್ಪೋರ್ಟ್ಸ್ ವಿಷಯ ಆಧರಿಸಿ ಈ ಸಿನಿಮಾ ನೋಡುಗರ ಗಮನ ಸೆಳೆದಿದೆ.
ಜುಂಡ್
ಈ ಹಿಂದಿ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ನಿವೃತ್ತ ಕ್ರೀಡಾ ಶಿಕ್ಷಕ ವಿಜಯ್ ಬರ್ಸೆ ಪಾತ್ರವನ್ನು ನಿರ್ವಹಿಸಿದ್ದಾರೆ. ಕೊಳೆಗೇರಿಯ ಮಕ್ಕಳ ಫುಟ್ಬಾಲ್ ತಂಡವನ್ನು ರಚಿಸಿ ಬಳಿಕ ಅದುವೇ ಸಮುದಾಯದಲ್ಲಿ ಬದಲಾವಣೆ ತರಲು ನಿರ್ಧರಿಸುವ ಒಂದು ವಿಭಿನ್ನ ಕಥೆ ಇದಾಗಿದೆ. ಈ ಆಟದ ಮೂಲಕವೇ ಮಾದಕ ದ್ರವ್ಯ ಮತ್ತು ಇತರ ಅಪರಾಧದ ಅಪಾಯಗಳಿಂದ ದೂರವಿಡುವ ಬಗ್ಗೆ ವಿವರಿಸಲಾಗಿದೆ.
ಬಿಗ್ ಜಾರ್ಜ್ ಫೋರ್ ಮನ್
ಈ ಸಿನಿಮಾವು ಬಾಕ್ಸಿಂಗ್ ಕಥೆಯನ್ನು ಆಧರಿಸಿದ್ದಾಗಿದೆ. ಜಾರ್ಜ್ ಫೋರ್‌ಮನ್ ಅವರ ಜೀವನದ ಬಗ್ಗೆ ಈ ಸಿನಿಮಾ ತಿಳಿಸತ್ತದೆ. ಕ್ರಿಸ್ ಡೇವಿಸ್ ಈ ಚಿತ್ರದಲ್ಲಿ ಫೋರ್‌ಮ್ಯಾನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ಗೆಲುವು, ವಿಶ್ವ ಹೆವಿವೇಯ್ಟ್ ಚಾಂಪಿಯನ್ ಆಗಿ ಮಾಡಿದ ಸಾಧನೆ, ನಿವೃತ್ತಿಯ ನಂತರದ ಆಧ್ಯಾತ್ಮಿಕ ಪ್ರವಾಸ ಇತ್ಯಾದಿಗಳ ಮೇಲೆ ಕಥೆ ಕೇಂದ್ರೀಕರಿಸುತ್ತದೆ.
ಸಾಲ ಖಡೂಸ್
ಸುಧಾ ಕೊಂಗರ ಬರೆದು ನಿರ್ದೇಶಿಸಿದ ಈ ಸಿನಿಮಾವು ತಮಿಳು ಹಾಗೂ ಹಿಂದಿಯಲ್ಲಿ ತೆರೆ ಕಂಡಿದೆ. ಚಿತ್ರದಲ್ಲಿ ಆರ್.ಮಾಧವನ್, ವೈಯಕ್ತಿಕ ಸಮಸ್ಯೆಗಳಿಂದಾಗಿ ಕ್ರೀಡೆಯಿಂದ ನಿವೃತ್ತರಾದ ಮಾಜಿ ಬಾಕ್ಸರ್ ಆದಿ ತೋಮರ್ ಪಾತ್ರದಲ್ಲಿ ನಟಿಸಿದ್ದಾರೆ. ಬಡ ಸಮುದಾಯಕ್ಕೆ ಸೇರಿದ್ದ ಯುವತಿಯೊಬ್ಬಳಿಗೆ ಬಾಕ್ಸಿಂಗ್ ತರಬೇತಿ ನೀಡುವ ಕಥಾ ಹಂದರ ಈ ಸಿನಿಮಾದಲ್ಲಿದೆ. ಈ ಯುವತಿ ಆದಿಯ ಪಾತ್ರದಲ್ಲಿ ರಿತಿಕಾ ಸಿಂಗ್ ಮಿಂಚಿದ್ದಾರೆ.
ದಿ ಐರನ್ ಕ್ಲಾ
ಝಾಕ್ ಎಫ್ರಾನ್ ಮತ್ತು ಜೆರೆಮಿ ಅಲೆನ್ ವೈಟ್ ನಿರ್ದೇಶನದ ʼದಿ ಐರನ್ ಕ್ಲಾʼ ಸಿನಿಮಾ 1980ರ ದಶಕದ ವೃತ್ತಿಪರ ಕುಸ್ತಿ ಯುಗದ ಬಗ್ಗೆ ತಿಳಿಸುವ ಕಥೆ ಈ ಸಿನಿಮಾದಲ್ಲಿದೆ. ವಾನ್ ಎರಿಚ್ ಸಹೋದರರ ಜೀವನದ ನೈಜ ಕಥೆ ಇದರಲ್ಲಿದೆ. ಈ ಚಿತ್ರದಲ್ಲಿ ಹ್ಯಾರಿಸ್ ಡಿಕಿನ್ಸನ್, ಮೌರಾ ಟಿಯರ್ನಿ, ಹೋಲ್ಟ್ ಮೆಕ್‌ಕಲಾನಿ ಮತ್ತು ಲಿಲಿ ಜೇಮ್ಸ್ ಕೂಡ ನಟಿಸಿದ್ದಾರೆ.