Sanjay Kapur: ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮಾಜಿ ಪತಿ ಸಂಜಯ್ ಕಪೂರ್ ಹಿನ್ನೆಲೆ ಏನು?
ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಒಂದು ಕಾಲದಲ್ಲಿ ಬಾಲಿವುಡ್ ನ ಬಹುಬೇಡಿಕೆಯ ನಟಿಯಾಗಿ ಜನ ಮನ ಗೆದ್ದವರು. ಇವರ ಮಾಜಿ ಪತಿ ಮತ್ತು ಉದ್ಯಮಿ ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ಪೋಲೋ ಆಡುತ್ತಿರುವಾಗಲೇ ಹಠಾತ್ ಹೃದಯಾಘಾತವಾಗಿ ಕೊನೆಯುಸಿರೆಳೆದಿದ್ದಾರೆ. ಹಾಗಾದರೆ ಯಾರು ಈ ಸಂಜಯ್ ಕಪೂರ್? ಏನಿವರ ಹಿನ್ನೆಲೆ? ಇಲ್ಲಿದೆ ವಿವರ.
ದಿವಂಗತ ಸುರಿಂದರ್ ಕಪೂರ್ ಮತ್ತು ರಾಣಿ ಕಪೂರ್ ಅವರ ಪುತ್ರ ಸಂಜಯ್ ಕಪೂರ್ ಚಿಕ್ಕಂದಿನಿಂದಲೂ ಬಹಳ ಚುರುಕಿನ ಸ್ವಭಾವದವರು. ಹೊಸ ವಿಚಾರಗಳ ಕಲಿಕೆ ಬಗ್ಗೆ ಇವರಿಗೆ ಅಪಾರ ಆಸಕ್ತಿ ಇತ್ತು. ಹೀಗಾಗಿ ಡೂನ್ ಶಾಲೆ, ಕ್ಯಾಥೆ ಡ್ರಲ್ ಮತ್ತು ಜಾನ್ ಕಾನನ್ ಶಾಲೆ ಸೇರಿದಂತೆ ಭಾರತ ಮತ್ತು ವಿದೇಶಗಳಲ್ಲಿನ ಕೆಲವು ಅತ್ಯುತ್ತಮ ಶಾಲೆಗಳಲ್ಲಿ ಶಿಕ್ಷಣ ಪೂರೈಸಿದ್ದರು. ಲಂಡನ್‌ನಲ್ಲಿ ಕಾರ್ಪೋರೇಟ್ ತಂತ್ರ ಮತ್ತು ಮಾನವ ಸಂಪನ್ಮೂಲದಲ್ಲಿ ಬಿಬಿಎ ಪದವಿ ಪಡೆದಿದ್ದರು. ಎಂಐಟಿ ಮತ್ತು ಹಾರ್ವರ್ಡ್ ಬಿಸಿನೆಸ್ ಶಾಲೆಯಲ್ಲಿಯೂ ಅಧ್ಯಯನ ಮಾಡಿದ್ದರು. ಕಲಿಕೆ, ಉದ್ಯಮದ ಜತೆಗೆ ಕ್ರೀಡೆಯಲ್ಲಿಯೂ ಸಂಜಯ್ ಕಪೂರ್‌ಗೆ ಅಪಾರ ಆಸಕ್ತಿ ಇತ್ತು.
ಸಂಜಯ್ ಕಪೂರ್ ತಂದೆ ಭಾರತದ ಆಟೋ ಬಿಡಿಭಾಗಗಳ ಉದ್ಯಮದ ಸ್ಥಾಪಕರಾಗಿದ್ದು, ಆಟೋಮೋಟಿವ್ ಭಾಗಗಳನ್ನು ತಯಾರಿಸುವ ಸೋನಾ ಗ್ರೂಪ್ ಅನ್ನು ಸ್ಥಾಪಿಸಿದ್ದರು. ಸಂಜಯ್ ಕಪೂರ್ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಕುಟುಂಬದ ವ್ಯವಹಾರದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರು ತಮ್ಮ ತಂದೆಯ ಕಂಪನಿಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಉದ್ಯಮ ಕ್ಷೇತ್ರದ ಹಲವಾರು ಏರಿಳಿತ ಕಂಡು ಸಂಜಯ್ ಕಪೂರ್ ತಮ್ಮ ತಂದೆಯ ಕಂಪನಿ ಬೆಳೆಸುವಲ್ಲಿ ಸಾಕಷ್ಟು ಪರಿಶ್ರಮ ವಹಿಸಿದ್ದರು. ತಮ್ಮ ಸ್ವ ಪರಿಶ್ರಮದಿಂದ ಸೋನಾ ಕಾಮ್‌ಸ್ಟಾರ್ ಕಂಪನಿಯ ಅಧ್ಯಕ್ಷರಾದರು. ಸೋನಾ ಕಾಮ್‌ಸ್ಟಾರ್ ಕಂಪನಿಯು ಇಲೆಕ್ಟ್ರಾನಿಕ್ ವಾಹನಗಳು ಮತ್ತು ಇತರ ವಾಹನಗಳಿಗೆ ಆಟೋ ಘಟಕಗಳನ್ನು ತಯಾರಿಕೆಯಿಂದಲೇ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಸಂಜಯ್ ನಾಯಕತ್ವದಲ್ಲಿ, ಕಂಪನಿಯು ದೇಶ ವಿದೇಶಗಳಲ್ಲಿ ಗುರುತಿಸಲ್ಪಟ್ಟಿದೆ. ಈ ಮೂಲಕ ಸಂಜಯ್ ಕಪೂರ್ ಯಶಸ್ವಿ ಉದ್ಯಮಿ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.
ಸಂಜಯ್ ಕಪೂರ್ ಮೂರು ಬಾರಿ ವಿವಾಹವಾಗಿದ್ದಾರೆ. ಮೊದಲು ನಂದಿತಾ ಮಹತಾನಿ ಅವರನ್ನು ವಿವಾಹವಾಗಿ ಬಳಿಕ ವಿಚ್ಛೇದನ ಪಡೆದು ನಂತರ 2003ರಲ್ಲಿ ಬಾಲಿವುಡ್ ಬೇಡಿಕೆ ನಟಿ ಕರಿಷ್ಮಾ ಕಪೂರ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮಗಳು ಸಮೈರಾ ಮತ್ತು ಮಗ ಕಿಯಾನ್ ಕೂಡ ತಂದೆಯಂತೆ ಬಹಳ ಆ್ಯಕ್ಟಿವ್ ಆಗಿದ್ದಾರೆ. ಬಳಿಕ 2014ರಲ್ಲಿ ಕರಿಷ್ಮಾ ಮತ್ತು ಸಂಜಯ್ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2016ರಲ್ಲಿ ಅಧಿಕೃತವಾಗಿ ವಿಚ್ಛೇದನ ಪಡೆದರು. ಅಂತಿಮವಾಗಿ ಸಂಜಯ್ ಪ್ರಿಯಾ ಸಚ್‌ದೇವ್ ಅವರನ್ನು ವಿವಾಹವಾದರು.
ಸಂಜಯ್ ಕಪೂರ್ ಇಂಗ್ಲೆಂಡ್‌ನಲ್ಲಿ ಪೋಲೊ ಆಡುತ್ತಿದ್ದಾಗ ಕುಸಿದು ಬಿದ್ದಿದ್ದು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಭಾರತೀಯ ಆಟೋಮೋಟಿವ್ ಉದ್ಯಮದ ನಾಯಕ ಮತ್ತು ಸೋನಾ ಕಾಮ್‌ಸ್ಟಾರ್‌ನ ಅಧ್ಯಕ್ಷ ಸಂಜಯ್ ಕಪೂರ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಕಂಬನಿ ಮಿಡಿದಿದ್ದಾರೆ.