ಬೆಂಗಳೂರು, ಆ.18: ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಅವರು ಹೇಳಿದರು. ವಿಧಾನಸಭೆ ಕಲಾಪದ ವೇಳೆ ನಡೆದ ಚರ್ಚಾ ಸಮಯದಲ್ಲಿ ಮಾತನಾಡಿದ ಅವರು, ಜವಾಬ್ದಾರಿಯುತ ದಕ್ಷ ಹಿರಿಯ ಅಧಿಕಾರಿಗಳಿಗೆ ತನಿಖೆಯ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿಗಳ ಮೇಲೆ ನಮಗೆ ನಂಬಿಕೆಯಿದೆ. ಮುಖ್ಯಮಂತ್ರಿಗಳು ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಿ ಪ್ರತಿವರ್ಷ ಚಿಕಿತ್ಸೆ ಪಡೆದುಕೊಂಡು ಬಂದಿದ್ದಾರೆ. ಅವರಿಗೂ ಆ ಕ್ಷೇತ್ರದ ಮೇಲೆ ನಂಬಿಕೆಯಿದೆ. ಸಿಎಲ್‌ಪಿ ಸಭೆಯಲ್ಲಿ ಶಾಸಕರಾದ ಶಿವಲಿಂಗೇಗೌಡರು ಹಾಗೂ ಬೇಳೂರು ಗೋಪಾಲಕೃಷ್ಣ ಅವರು ಪ್ರಸ್ತಾಪಿಸಿದಾಗ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಒಂದೆರಡು ದಿನ ಸುಮ್ಮನಿರಿ
“ಧರ್ಮಸ್ಥಳ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಹ ಸೂಚನೆ ನೀಡಿದ್ದು ಯಾರಿಗೆ ಯಾವ ರೀತಿ ಬಲಿ ತೆಗೆದುಕೊಳ್ಳಬೇಕೋ, ಯಾವ ಕಾನೂನು ಬಳಸಬೇಕೋ ಅದನ್ನು ಮಾಡಲಾಗುತ್ತದೆ. ಗೃಹಸಚಿವರು ಇದಕ್ಕೆ ಬದ್ದವಾಗಿದ್ದಾರೆ. ಈ ವಿಚಾರದಲ್ಲಿ ಒಂದೆರಡು ದಿನ ಸುಮ್ಮನಿರಿ. ನೀವೆಲ್ಲರೂ ತಾಳ್ಮೆವಹಿಸಿ” ಎಂದು ಪ್ರತಿಪಕ್ಷಗಳಿಗೆ ಆಗ್ರಹಿಸಿದರು.
“ಪ್ರತಿಪಕ್ಷದವರು ಮೊದಲೇ ಎಸ್‌ಐಟಿ ರಚನೆ ಬೇಡ ಎಂದು ಹೇಳಬೇಕಿತ್ತು. ಆದರೆ ಹದಿನೈದು ದಿನ ಕಳೆದ ನಂತರ ಹೇಳುತ್ತಾ ಇದ್ದೀರಿ. ಈ ವಿಚಾರದಲ್ಲಿ ಮೊದಲು ನೀವು ಮಾತನಾಡಿಯೇ ಇಲ್ಲ. ದಿನಬೆಳಗಾದರೆ ನಿಮ್ಮ (ಪ್ರತಿಪಕ್ಷಗಳ ನಾಯಕರು) ಮುಖ್ಯಮಂತ್ರಿಗಳ ಮೇಲೆ, ನನ್ನ ಮೇಲೆ ಸೇರಿದಂತೆ ಅನೇಕರ ಮೇಲೆ ಯಾರೋ ಒಬ್ಬ ಆಪಾದನೆ ಮಾಡಿದ್ದಾರೆ. ಇದರಲ್ಲಿ ಷಡ್ಯಂತ್ರ ಇರಬಹುದು. ಇದೆಲ್ಲವೂ ಆಚೆ ಬರಬೇಕು, ಅದಕ್ಕಾಗಿ ಗೃಹಸಚಿವರು ಕಾನೂನಿನ ಅಡಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಯಾವುದೇ ಗೌಪ್ಯ ಮಾಹಿತಿಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಗೃಹಸಚಿವರು ಪ್ರಮಾಣ ವಚನ ತೆಗೆದುಕೊಂಡಿರುತ್ತಾರೆ. ವಿರೋಧ ಪಕ್ಷದಲ್ಲಿ ಇರುವ ನೀವುಗಳು ಸಹ ಅಧಿಕಾರದಲ್ಲಿದ್ದವರು. ತನಿಖೆ ವಿಚಾರವನ್ನು ಬಹಿರಂಗಪಡಿಸುವ ಮೊದಲು ಎಲ್ಲರೂ ತಾಳ್ಮೆಯಿಂದ ಇರಬೇಕು. ರಾಜಕಾರಣದಲ್ಲಿ ಧರ್ಮ ಇರಬೇಕೇ ಹೊರತು ಧರ್ಮದಲ್ಲಿ ರಾಜಕಾರಣವಿರಬಾರದು. ಇದರಲ್ಲಿ ರಾಜಕೀಯ ಮಾಡಬೇಡಿ” ಎಂದರು.
ತಪ್ಪು ಯಾರೇ ಮಾಡಿದ್ದರು ಶಿಕ್ಷೆ ಆಗಿಯೇ ಆಗುತ್ತದೆ. ಸೌಜನ್ಯ ಪ್ರಕರಣದಲ್ಲಿ ಯಾವುದೇ ತನಿಖೆ ನಡೆಯಲಿ ಎಂದು ಪ್ರತಿಪಕ್ಷವರು ಹೇಳಿದರು. ನಾವು ಅದನ್ನು ಗೌರವಿಸಿದೆವು. ಕೊನೆಗೆ ನ್ಯಾಯಲಯ ಹಾಗೂ ಸಿಬಿಐ ನವರು ಅಂತಿಮ ತೀರ್ಪು ನೀಡಿದಾಗ ಏನೂ ಇಲ್ಲ ಎಂದು ತಿಳಿಯಿತು ಎಂದು ಹೇಳಿದರು.
ತನಿಖೆ ಯಾವ ಕಾರಣಕ್ಕೆ ಪ್ರಾರಂಭವಾಗುತ್ತದೆ ಎಂಬುದು ಪ್ರತಿಪಕ್ಷಗಳಿಗೂ ತಿಳಿದಿದೆ. ಧರ್ಮಸ್ಥಳ ವಿಚಾರದಲ್ಲಿ ಸರಿತಪ್ಪುಗಳಿವೆಯೋ, ಷಡ್ಯಂತ್ರವಿದೆಯೋ ಎಂಬುದು ತನಿಖೆ ನಂತರ ತಿಳಿಯುತ್ತದೆ. ವ್ಯಕ್ತಿಯೊಬ್ಬ ತಲೆಬುರುಡೆ ಹಿಡಿದುಕೊಂಡು ನ್ಯಾಯಲಯದ ಮುಂದೆ ಹೇಳಿಕೆ ನೀಡಿದ ಮೇಲೆ ಇದನ್ನು ಇಡೀ ದೇಶ ನೋಡಿತು. ಜೊತೆಗೆ ಎಲ್ಲಾ ಮಾಧ್ಯಮಗಳು ಇದರ ಬಗ್ಗೆ ಗಮನ ಸೆಳೆಯಿತು ಎಂದರು.
ಈ ಸುದ್ದಿಯನ್ನೂ ಓದಿ | Dharmasthala case: ಎಫ್‌ಎಸ್‌ಎಲ್ ವರದಿ ಬರುವವರೆಗೆ ಧರ್ಮಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ಸ್ಥಗಿತ: ಗೃಹ ಸಚಿವ ಪರಮೇಶ್ವರ್
ಷಡ್ಯಂತ್ರ ಮಾಡಿದವರು ಯಾರು ಎಂದು ಉಪಮುಖ್ಯಮಂತ್ರಿಗಳು ಬಹಿರಂಗಪಡಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದಾಗ, ತನಿಖೆ ಮುಗಿದ ನಂತರ ನೂರಕ್ಕೆ ನೂರರಷ್ಟು ಅವರ ಹೆಸರು, ಫೋಟೋ ಎಲ್ಲವೂ ಆಚೆ ಬರುತ್ತದೆ ಎಂದು ತಿಳಿಸಿದರು.