ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BY Vijayendra: ಕಾಲ್ತುಳಿತದ ವಿಷಯಾಂತರಕ್ಕೆ ಜಾತಿ ಗಣತಿಯ ಪ್ರಸ್ತಾಪ- ಬಿ.ವೈ.ವಿಜಯೇಂದ್ರ

BY Vijayendra: ದೆಹಲಿ ಸಭೆಯಲ್ಲಿ ನಿನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿಗಳನ್ನು ನೋಡಿದರೆ ಪಾಪ ಅನಿಸುತ್ತದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಹಾಗಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕರ್ನಾಟಕವು 100 ರೂ. ಕೊಟ್ಟರೆ ಕೇವಲ 13 ರೂ. ಬರುತ್ತಿದೆ ಎಂದು ಅರ್ಧ ಸತ್ಯವನ್ನಷ್ಟೇ ಅವರು ಹೇಳುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಆರೋಪಿಸಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿಗಳು ದೆಹಲಿಯಲ್ಲಿ ಕುಳಿತು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ, ಕುತಂತ್ರ ಮತ್ತು ಷಡ್ಯಂತ್ರ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಆರೋಪಿಸಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಬಹಳ ದೊಡ್ಡ ಮನಸ್ಸು ಮಾಡಿ, 16ನೇ ಹಣಕಾಸಿನ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ. ರಾಜ್ಯದ ಪರವಾಗಿ ವಿಚಾರಮಂಡನೆ ಮಾಡಿದ್ದು, ಅವರಿಗೆ ಅಭಿನಂದನೆಗಳು ಎಂದರು. ದೆಹಲಿ ಸಭೆಯಲ್ಲಿ ನಿನ್ನೆ ಭಾಗವಹಿಸಿದ್ದು ಸ್ವಾಗತಾರ್ಹ. ಆದರೆ, ಮುಖ್ಯಮಂತ್ರಿಗಳನ್ನು ನೋಡಿದರೆ ಪಾಪ ಅನಿಸುತ್ತದೆ. ಗ್ಯಾರಂಟಿಗಳ ಅನುಷ್ಠಾನಕ್ಕೆ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಹಾಗಾಗಿ ಕೇಂದ್ರದ ಮೇಲೆ ಆರೋಪ ಮಾಡುತ್ತಿದ್ದಾರೆ. ಕರ್ನಾಟಕವು 100 ರೂ. ಕೊಟ್ಟರೆ ಕೇವಲ 13 ರೂ. ಬರುತ್ತಿದೆ ಎಂದು ಅರ್ಧ ಸತ್ಯವನ್ನಷ್ಟೇ ಅವರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಬಂದ ಅನುದಾನ ರಾಜ್ಯದಲ್ಲಿ ಸದ್ಬಳಕೆ ಆಗುತ್ತಿಲ್ಲ. ಕೇಂದ್ರ ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕುವ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ, ರಾಜ್ಯ ಸರ್ಕಾರವು ತನ್ನ ವೈಫಲ್ಯಗಳನ್ನು ಮುಚ್ಚಿ ಹಾಕಲು ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಇದ್ಯಾವುದೂ ಸತ್ಯವಲ್ಲ ಎಂದು ತಿಳಿಸಿದರು.

ಜಾತಿ ಗಣತಿ ವಿಚಾರ- ಈಗ ಜ್ಞಾನೋದಯ

ನಮ್ಮ ಹೋರಾಟಗಳ ಪರಿಣಾಮವಾಗಿ ಸುಮಾರು 3 ತಿಂಗಳ ಹಿಂದೆ ರಾಜ್ಯ ಸರ್ಕಾರಕ್ಕೆ ಮುಜುಗರ ಆಗುತ್ತಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಕಾಂತರಾಜು ವರದಿಯನ್ನು ಅನುಷ್ಠಾನಕ್ಕೆ ತರುವುದಾಗಿ ಹೇಳಿದ್ದರು. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸುವುದಾಗಿ ಹೇಳಿದರು. 4-5 ಕ್ಯಾಬಿನೆಟ್ ಸಭೆ ಆದರೂ ಅನುಷ್ಠಾನ ಆಗಲಿಲ್ಲ. 10 ವರ್ಷ ಕಳೆದಿದ್ದು, ಅಂಕಿಅಂಶಗಳು ಅವೈಜ್ಞಾನಿಕ; ಇದನ್ನು ತರಾತುರಿಯಲ್ಲಿ ಮಾಡಬಾರದು. ಹೊಸದಾಗಿ ಮಾಡಬೇಕಿದೆ ಎಂದು ಎಲ್ಲವೂ ಚರ್ಚೆ ನಡೆದಿದೆ ಎಂದು ಪ್ರಶ್ನೆಗೆ ಉತ್ತರ ನೀಡಿದರು.

ಇದರ ಕುರಿತು ಕಾಂಗ್ರೆಸ್ಸಿನ ಡಿ.ಕೆ. ಶಿವಕುಮಾರ್ ಸೇರಿ ಸಚಿವರೂ ವಿರೋಧ ವ್ಯಕ್ತಪಡಿಸಿದ್ದರು. ಇದರ ನಡುವೆ ಈಗ ಅವರಿಗೆ ಜ್ಞಾನೋದಯವಾಗಿದೆ. ಯಾವಾಗ ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟರೋ, ಈಗ ವಿಷಯಾಂತರ ಮಾಡಲು ಜಾತಿ ಗಣತಿ ವಿಷಯ ಪ್ರಸ್ತಾಪಿಸಿದ್ದಾರೆ. ಅಂತಿಮವಾಗಿ ಈ ವಿಷಯದಲ್ಲಿ ಇವರು ಏನೂ ಮಾಡಲು ಸಾಧ್ಯವಿಲ್ಲ. ಕೇಂದ್ರವು ಈಗಾಗಲೇ ಜನ ಗಣತಿ, ಜಾತಿ ಜನಗಣತಿ ಮಾಡುವುದಾಗಿ ಘೋಷಿಸಿದೆ. ಜಾತಿ ಗಣತಿಯು ರಾಜ್ಯ ಸರ್ಕಾರದ ಪರಿಮಿತಿಗೆ ಬರುತ್ತದೆಯೇ ಎಂಬ ಅನುಮಾನಗಳು ಹೆಚ್ಚಾಗಿವೆ. ಗೊಂದಲ ಸೃಷ್ಟಿಸಲು ಇದನ್ನು ಮಾಡುತ್ತಿದ್ದಾರೆ. ತಾರ್ಕಿಕ ಅಂತ್ಯಕ್ಕೆ ಒಯ್ಯುವ ಮನಸ್ಸು ರಾಜ್ಯ ಸರ್ಕಾರ- ಸಿದ್ದರಾಮಯ್ಯ ಅವರಿಗೆ ಇಲ್ಲ ಎಂದು ದೂರಿದರು.

ಈ ಸುದ್ದಿಯನ್ನೂ ಓದಿ | Bike taxi: ರಾಜ್ಯದಲ್ಲಿ ಓಲಾ, ಊಬರ್, ರಾಪಿಡೋ ಬೈಕ್ ಟ್ಯಾಕ್ಸಿ ಜೂನ್‌ 16ರಿಂದ ಬಂದ್‌, ಹೈಕೋರ್ಟ್‌ ನಿಲುವು ಅಚಲ

ಹಿಂದೂಗಳು ಟಾರ್ಗೆಟ್, ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಷಡ್ಯಂತ್ರ

ಮೊನ್ನೆ ನಮ್ಮ ಪಕ್ಷದ ಮುಖಂಡರ ಜತೆಗೂಡಿ ದಕ್ಷಿಣ ಕನ್ನಡಕ್ಕೆ ಭೇಟಿ ಕೊಟ್ಟಿದ್ದೇವೆ. ಅಲ್ಲಿರುವ ಜಿಲ್ಲಾಧಿಕಾರಿಗಳು, ಕಮಿಷನರ್, ಎಸ್ಪಿ ಅವರನ್ನು ಭೇಟಿ ಮಾಡಿದ್ದೇವೆ. ಇದು ಕೋಮು ನಿಗ್ರಹ ದಳ ಅಲ್ಲ; ಹಿಂದೂಗಳನ್ನು ಟಾರ್ಗೆಟ್ ಮಾಡಿ, ಬಿಜೆಪಿ ಕಾರ್ಯಕರ್ತರನ್ನು ಬೆದರಿಸುವ ಷಡ್ಯಂತ್ರ ಈ ದಳ ರಚನೆ ಹಿಂದಿದೆ ಎಂದು ಆರೋಪಿಸಿದ ಅವರು, ಇದ್ಯಾವುದಕ್ಕೂ ನಾವು ಬಗ್ಗುವುದಿಲ್ಲ. ಈ ರೀತಿ ದಬ್ಬಾಳಿಕೆ ಕುತಂತ್ರವನ್ನು ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಮಾಡುತ್ತಿದ್ದು, ಅದನ್ನು ಎದುರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.