ಗುವಾಹಟಿ: ಸದಾ ತಮ್ಮ ವಿರುದ್ಧ ಟೀಕಾಪ್ರಹಾರದಲ್ಲಿ ತೊಡಗಿರುವ ಕಾಂಗ್ರೆಸ್ ಮೇಲೆ ತೀವ್ರ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), ದೇಶದ ಪ್ರತಿಯೊಬ್ಬ ನಾಗರಿಕನೂ ತಮ್ಮ ಯಜಮಾನರು ಮತ್ತು ರಿಮೋಟ್ ಕಂಟ್ರೋಲ್ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ ನಿಂದನೆಯನ್ನು ವಿಷದಂತೆ ನುಂಗುತ್ತೇನೆ ಎಂದು ಹೇಳಿದರು. ಅಸ್ಸಾಂನ ದರಂಗ್‌ನಲ್ಲಿ ಹಲವಾರು ಯೋಜನೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದ ಅವರು, "ನನಗೆ ತಿಳಿದಿದೆ, ಇಡೀ ಕಾಂಗ್ರೆಸ್ ಪರಿಸರ ವ್ಯವಸ್ಥೆಯು ನನ್ನನ್ನು ಗುರಿಯಾಗಿಸಿಕೊಂಡು ಮೋದಿ ಮತ್ತೆ ಅಳುತ್ತಿದ್ದಾರೆ ಎಂದು ಹೇಳುತ್ತದೆ. ಜನರೇ ನನ್ನ ದೇವರು; ನಾನು ಅವರ ಮುಂದೆ ನನ್ನ ನೋವನ್ನು ವ್ಯಕ್ತಪಡಿಸದಿದ್ದರೆ, ನಾನು ಅದನ್ನು ಎಲ್ಲಿ ಮಾಡಲಿ? ಅವರು ನನ್ನ ಯಜಮಾನರು ಮತ್ತು ನನ್ನ ರಿಮೋಟ್ ಕಂಟ್ರೋಲ್. ನನ್ನ ಬಳಿ ಬೇರೆ ಯಾವುದೇ ರಿಮೋಟ್ ಕಂಟ್ರೋಲ್ ಇಲ್ಲ" ಎಂದು ಹೇಳಿದ್ದಾರೆ.
ಚುನಾವಣೆ ನಡೆಯಲಿರುವ ಬಿಹಾರದಲ್ಲಿ ಇತ್ತೀಚೆಗೆ ನಡೆದ ಆರ್‌ಜೆಡಿ-ಕಾಂಗ್ರೆಸ್ ರಾಜಕೀಯ ಪ್ರಚಾರದ ಸಂದರ್ಭದಲ್ಲಿ ಪ್ರಧಾನಿ ಮೋದಿಯ ತಾಯಿ ವಿರುದ್ಧ ಅವಹೇನಕಾರಿ ಘೋಷಣೆ ಕೇಳಿಬಂದಿತ್ತು. ಇದು ಇಡೀ ಪ್ರತಿಪಕ್ಷಗಳನ್ನು ತಲೆತಗ್ಗಿಸುವಂತೆ ಮಾಡಿತ್ತು. ಅದರಂತೆ ಬಿಜೆಪಿಯು ಇದೇ ವಿಚಾರವನ್ನು ಇಟ್ಟುಕೊಂಡು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿತ್ತು. ಇದರ ಬೆನ್ನಲ್ಲೇ ಹೀರಾಬೆನ್ ಅವರ AIವಿಡಿಯೊ ಮಾಡಿ ಪ್ರತಿಪಕ್ಷಗಳ ಮೋದಿ ವಿರುದ್ಧ ಟೀಕಾಪ್ರಹಾರ ಮಾಡಿದ್ದವು. ಇದೆಲ್ಲದರ ಬಗ್ಗೆ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Narendra Modi: ಒಂದೇ ವೇದಿಕೆಯಲ್ಲಿ ಮೋದಿ-ಪುಟಿನ್-ಜಿನ್ ಪಿಂಗ್; ಮಹತ್ವದ ಚರ್ಚೆ ಸಾಧ್ಯತೆ
ಶಿವನ ವಿರುದ್ಧ ಏನೇ ಹೇಳಿದರೂ ಆತ ಸಹಿಸಿಕೊಳ್ಳುತ್ತಾನೆ. ನಾನು ಶಿವನ ಭಕ್ತ. ನನ್ನ ವಿರುದ್ಧ ಮಾಡುವ ಟೀಕೆ, ಅಪಮಾನವನ್ನು ನಾನು ಸಹಿಸಿಕೊಳ್ಳುತ್ತೇನೆ. ಆದರೆ ಇತರರ ಮೇಲೆ ಮಾಡಿದರೆ ಜೋಕೆ ಎಂದು ಪ್ರಧಾನಿ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಅಸ್ಸಾಂ ಮಣ್ಣಿನ ಹೀರೋ, ಅಸ್ಸಾಂ ಹೆಮ್ಮೆ, ಗಾಯಕ, ಮಾಜಿ ಶಾಸಕ ಭುಪೇಂದ್ರ ಹಜಾರಿಕಾಗೆ ನಮ್ಮ ಸರ್ಕಾರ ಭಾರತ ರತ್ನ ನೀಡಿ ಗೌರವಿಸಿತ್ತು. ಆದರೆ ಕಾಂಗ್ರೆಸ್ ವ್ಯಂಗ್ಯವಾಡಿತ್ತು. ಕಾಂಗ್ರೆಸ್ ಅಧ್ಯಕ್ಷರು ಹಜರಿಕಾಗೆ ನೀಡಿದ ಪ್ರಶಸ್ತಿಗೆ, ಮೋದಿ ಕುಣಿಯುವ ಹಾಗೂ ಹಾಡುವ ಮಂದಿಗೆ ಭಾರತ ರತ್ನ ಕೊಡುತ್ತಿದೆ ಎಂದು ವ್ಯಂಗ್ಯವಾಡಿತ್ತು. ಈ ದೇಶದ ಕಲಾಭಿಮಾನಿಗಳು ಕಾಂಗ್ರೆಸ್ ಪ್ರಶ್ನೆ ಮಾಡಬೇಕಿದೆ. ಹಜರಿಕಾಗೆ ಭಾರತ ರತ್ನ ನೀಡಿದ್ದನ್ನು ಕಾಂಗ್ರೆಸ್ ವಿರೋಧಿಸಿದ್ದು ಯಾಕೆ ಎಂದು ಕೇಳಬೇಕು ಎಂದಿದ್ದಾರೆ.
ಕಾಂಗ್ರೆಸ್ ಎಲ್ಲರನ್ನೂ ಹೀಳಿಯಾಸುತ್ತೆ. ಅವರ ರಾಜಕೀಯಕ್ಕೆ ಎಲ್ಲರನ್ನೂ ಬಳಸಿಕೊಳ್ಳುತ್ತೆ, ಟೀಕೆ ಮಾಡುತ್ತೆ. ಇದಕ್ಕೆ ನನ್ನ ತಾಯಿ ಕೂಡ ಹೊರತಾಗಿರಲಿಲ್ಲ ಎಂದು ಮೋದಿ ಹೇಳಿದ್ದಾರೆ. ಬಿಹಾರದಲ್ಲಿ ಕಾಂಗ್ರೆಸ್ ನನ್ನ ತಾಯಿ ವಿರುದ್ದ ಟೀಕೆ ಮಾಡಿದೆ. ತಾಯಿ ವಿಡಿಯೋಗಳನ್ನು ಎಐ ಮೂಲಕ ಸೃಷ್ಟಿಸಿ ಪೋಸ್ಟ್ ಮಾಡಿದೆ ಎಂದು ಮೋದಿ ಹೇಳಿದ್ದಾರೆ.