ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻ125 ರಿಂದ 130 ವೇಗ ಸಾಕಾ?ʼ: ಭಾರತ ತಂಡದ ವೇಗಿಗಳನ್ನು ಟೀಕಿಸಿದ ನವಜೋತ್‌ ಸಿಧು!

ಭಾರತದ ವೇಗಿಗಳಾದ ಅನ್ಶುಲ್‌ ಕಾಂಬೋಜ್‌ ಮತ್ತು ಮೊಹಮ್ಮದ್‌ ಸಿರಾಜ್‌ ಅವರು 125-130 ಕಿಮೀ ವೇಗದಲ್ಲಿ ಬೌಲ್‌ ಮಾಡಿದ್ದಕ್ಕಾಗಿ ಮಾಜಿ ಕ್ರಿಕೆಟಿಗ ನವಜೋತ್‌ ಸಿಂಗ್‌ ಟೀಕಿಸಿದ್ದಾರೆ. ಭಾರತೀಯ ಕ್ರಿಕೆಟ್‌ ಸ್ಪಿನ್‌ ದಂತಕಥೆ ಅನಿಲ್‌ ಕುಂಬ್ಳೆ ಕೂಡ ಆ ವೇಗದಲ್ಲಿ ಬೌಲ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.

ಭಾರತ ತಂಡದ ಬೌಲಿಂಗ್‌ ಪ್ರದರ್ಶನವನ್ನು ಟೀಕಿಸಿದ ನವಜೋತ್‌ ಸಿಂಗ್‌ ಸಿಧು.

ಮ್ಯಾಂಚೆಸ್ಟರ್:‌ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ(IND vs ENG) ಭಾರತ ತಂಡ ಸಂಪೂರ್ಣ ಹಿನ್ನಡೆ ಅನುಭವಿಸುತ್ತಿದೆ. ಟಾಸ್‌ ಗೆದ್ದು ಬೌಲಿಂಗ್‌ ಆಯ್ದುಕೊಂಡ ಇಂಗ್ಲೆಂಡ್‌ ತಂಡ ಭಾರತವನ್ನು 358 ರನ್‌ಗಳಿಗೆ ಕಟ್ಟಿಹಾಕಿ ಆಲೌಟ್‌ ಮಾಡುವಲ್ಲಿ ಯಶಸ್ವಿಯಾಯಿತು. ನಂತರ ಬ್ಯಾಟ್‌ ಮಾಡಲು ಬಂದ ಅತೀಥೇಯ ಇಂಗ್ಲೆಂಡ್‌ (England) ತಂಡದ ಬ್ಯಾಟ್ಸ್‌ಮನ್‌ಗಳು ಭಾರತದ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿಯಾಗಿ ಬ್ಯಾಟಿಂಗ್‌ ನಡೆಸಿದರು. ಆ ಮೂಲಕ ಇಂಗ್ಲೆಂಡ್‌ 669 ರನ್‌ಗಳಿಗೆ ಪ್ರಥಮ ಇನಿಂಗ್ಸ್‌ ಅನ್ನು ಮುಗಿಸಿದ್ದು, 311 ರನ್‌ಗಳ ಮುನ್ನಡೆಯನ್ನು ಪಡೆದಿದೆ. ಇದಕ್ಕೆ ಮುಖ್ಯ ಕಾರಣ ಭಾರತದ ಬೌಲರ್‌ಗಳ ಕಳಪೆ ಪ್ರದರ್ಶನ ಎನ್ನಬಹುದು. ಪಂದ್ಯವನ್ನು ಮರಳಿ ಹಿಡಿತಕ್ಕೆ ಪಡೆಯಬೇಕೆಂದರೆ ಬೌಲರ್‌ಗಳ ಉತ್ತಮ ಪ್ರದರ್ಶನ ಬೇಕಿದೆ. ಇದರ ನಡುವೆ ಭಾರತದ ಬೌಲರ್‌ಗಳ ಕಳಪೆ ಪ್ರದರ್ಶನದ ಬಗ್ಗೆ ಭಾರತ ತಂಡದ ಮಾಜಿ ಆರಂಭಿಕ ಆಟಗಾರ ನವಜೋತ್‌ ಸಿಂಗ್‌ ಸಿಧು (Navjot Singh Sidhu) ಆಕ್ರೋಶ ಹೊರ ಹಾಕಿದ್ದಾರೆ.

ಡೆಬ್ಯೂಟಂಟ್‌ ಅನ್ಶುಲ್‌ ಕಾಂಬೋಜ್‌ ಮತ್ತು ಮೊಹಮ್ಮದ್‌ ಸಿರಾಜ್‌ ಅವರು 125-130 ಕಿಮೀ ವೇಗದಲ್ಲಿ ಬೌಲ್‌ ಮಾಡಿದ್ದಕ್ಕಾಗಿ ನವಜೋತ್‌ ಸಿಧು ಕಟುವಾಗಿ ಟೀಕಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಭಾರತೀಯ ಕ್ರಿಕೆಟ್‌ ಸ್ಪಿನ್‌ ದಂತಕಥೆ ಅನಿಲ್‌ ಕುಂಬ್ಳೆ ಕೂಡ ಆ ವೇಗದಲ್ಲಿ ಬೌಲ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ತೀವ್ರವಾಗಿ ಕಿಡಿಕಾರಿದ್ದಾರೆ. ಇನ್ನು ಉತ್ತಮವಾಗಿ ಬೌಲ್‌ ಮಾಡಿದ ವಾಷಿಂಗ್ಟನ್‌ ಸುಂದರ್‌ ಅವರಿಗೆ 69ನೇ ಓವರ್‌ ತನಕ ಬೌಲ್‌ ನೀಡದಿರುವುದು ಯಾಕೆ ಎಂದು ನನಗೆ ಅರ್ಥವಾಗಿಲ್ಲ. ಸುಂದರ್‌ ಕೈಗೆ ಬಾಲ್‌ ನೀಡಿದ ಪರಿಣಾಮ ತಂಡಕ್ಕೆ ಎರಡು ವಿಕೆಟ್‌ ದೊರೆಯಿತು. ವಾಷಿಂಗ್ಟನ್‌ ತಮ್ಮ 19 ಓವರ್‌ಗಳಲ್ಲಿ 57 ರನ್‌ ಅಷ್ಟೇ ನೀಡಿ ಉತ್ತಮ ಪ್ರದರ್ಶನ ತೋರಿದ್ದಾರೆ ಎಂದಿದ್ದಾರೆ.

IND vs ENG 4th Test: 669 ರನ್‌ ಕಲೆ ಹಾಕಿದ ಇಂಗ್ಲೆಂಡ್‌, ಇನಿಂಗ್ಸ್‌ ಸೋಲಿನ ಭೀತಿಯಲ್ಲಿ ಭಾರತ!

ಭಾರತದ ವೇಗಿಗಳನ್ನು ಟೀಕಿಸಿದ ನವಜೋತ್‌ ಸಿಂಗ್‌ ಸಿಧು

ವೇಗಿಗಳಾದ ಸಿರಾಜ್‌ ಹಾಗೂ ಕಾಂಬೋಜ್‌ ಅವರ ಪ್ರದರ್ಶನವನ್ನು ತಮ್ಮ ಯುಟ್ಯೂಬ್‌ ಚಾನೆಲ್‌ನ ವಿಡಿಯೊವೊಂದರಲ್ಲಿ ಟೀಕಿಸಿರುವ ನವಜೋತ್‌, " ಸಿರಾಜ್‌ ಮತ್ತು ಅನ್ಶುಲ್ ಕಾಂಬೋಜ್ 125 ರಿಂದ 130 ರನ್ ಗಳಿಸುವ ವೇಗದಲ್ಲಿ ಬೌಲ್ ಮಾಡುವುದನ್ನು ನೋಡಿದರೆ, ಅನಿಲ್ ಕುಂಬ್ಳೆ ಕೂಡ ಆ ವೇಗದಲ್ಲಿ ಬೌಲ್‌ ಮಾಡಬಲ್ಲರು. ಇದು ಕಾಂಬೋಜ್‌ ಅವರ ಮೊದಲ ಟೆಸ್ಟ್ ಎಂದು ನಾನು ಹೇಳುತ್ತಿಲ್ಲ, ಆದರೆ ಈ ರೀತಿಯ ಬೌಲಿಂಗ್‌ನಿಂದ ನೀವು ಏನನ್ನು ನಿರೀಕ್ಷಿಸಬಹುದು? ಶಾರ್ದುಲ್ ಠಾಕೂರ್, ನಾನು ಹೇಳಿದ್ದು ಇದನ್ನೇ, 30 ರಿಂದ 40 ರನ್‌ಗಳನ್ನು ನೀಡುತ್ತಾರೆ. ಆದರೆ ಐದು ವಿಕೆಟ್‌ಗಳನ್ನು ಮರೆತುಬಿಡಿ, ಪ್ರಸಿಧ್‌ ಮಾಡಿದಂತೆ 15 ಬಿಗಿಯಾದ ಓವರ್‌ಗಳನ್ನು ಅವರು ಬೌಲ್ ಮಾಡಬಹುದೇ? ಅದೇ ಪ್ರಶ್ನೆ. ನೀವು ಕಳೆದ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದವರನ್ನು ಆಯ್ಕೆ ಮಾಡದಿರುವುದು ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಅವರ ಆ ಡ್ರಿಫ್ಟಿಂಗ್ ಎಸೆತ ನನಗೆ ಎರಪಳ್ಳಿ ಪ್ರಸನ್ನ ಅವರನ್ನು ನೆನಪಿಸಿತು. ಈ ಡ್ರಿಫ್ಟರ್ ಸಾಂಪ್ರದಾಯಿಕ ಎಸೆತವಾಗಿದ್ದು, ಅಲ್ಲಿ ಚೆಂಡು ಗಾಳಿಯಲ್ಲಿ ತಿರುಗುವಂತೆ ಕಾಣುತ್ತದೆ. ಆದರೆ ಪಿಚ್ ಮಾಡಿದ ನಂತರ ಅದು ನೇರವಾಗಿ ಹೋಗುತ್ತದೆ," ಎಂದು ಅವರು ತಿಳಿಸಿದ್ದಾರೆ.

IND vs ENG: ಜಸ್‌ಪ್ರೀತ್‌ ಬುಮ್ರಾ ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದ ಮೊಹಮ್ಮದ್‌ ಕೈಫ್‌!

ಗಿಲ್‌ಗೆ ಸ್ಪಿನ್‌ ಬೌಲರ್‌ಗಳ ಮೇಲೆ ಒಲವು ಕಡಿಮೆ

ಮುಂದುವರಿದು ಮಾತನಾಡಿದ ನವಜೋತ್‌, "ವಾಷಿಂಗ್ಟನ್‌ ಸುಂದರ್‌ ಒಲ್ಲಿ ಪೋಪ್‌ ಅವರನ್ನು ಔಟ್‌ ಮಾಡಿದ ರೀತಿ ಮತ್ತು ಕೆ ಎಲ್‌ ರಾಹುಲ್‌ ಕ್ಯಾಚ್‌ ಪಡೆದ ರೀತಿಯನ್ನು ನೋಡಿದರೆ ವಾಷಿಂಗ್ಟನ್‌ ಸುಂದರ್‌ ಉತ್ತಮ ಸ್ಪಿನ್‌ ಬೌಲರ್‌ ಎಂದು ಗೊತ್ತಾಗುತ್ತದೆ. ಹ್ಯಾರಿ ಬ್ರೂಕ್‌ ಅವರನ್ನು ಕೂಡ ಔಟ್‌ ಮಾಡಿದ ವಾಷಿಂಗ್ಟನ್‌ ಸುಂದರ್‌ಗೆ ನೀವು 68ನೇ ಓವರ್‌ ತನಕ ಬೌಲಿಂಗ್‌ ನೀಡುವುದಿಲ್ಲ ಎಂದರೆ ಇದು ಏನನ್ನು ಸೂಚಿಸುತ್ತದೆ? ಗಿಲ್‌ಗೆ ಸ್ಪಿನ್‌ ಬೌಲರ್‌ಗಳ ಬಗ್ಗೆ ನಂಬಿಕೆ ಇದೆಯೋ? ಇಲ್ಲವೋ ಎನ್ನುವ ಗೊಂದಲ ಹುಟ್ಟು ಹಾಕುತ್ತೆ. ಇದು ಯಾವುದೇ ಬೌಲರ್‌ನ ಆತ್ಮ ವಿಶ್ವಾಸವನ್ನು ಕುಗ್ಗಿಸುತ್ತೆ. ಇದರ ಪರಿಣಾಮ ಭಾರತ ತಂಡ ಭರಿಸಬೇಕಾಗುತ್ತದೆ," ಎಂದು ಗಿಲ್‌ ಅವರ ಕೆಲವು ನಿರ್ಧಾರಗಳ ಬಗ್ಗೆಯೂ ಬೇಸರ ಹೊರಹಾಕಿದ್ದಾರೆ.

ಬರಹ: ರಂಗು ಎನ್‌ ಚಿತ್ರದುರ್ಗ